ಗುರುವಾರ , ಆಗಸ್ಟ್ 18, 2022
27 °C

ಮೈಸೂರು | ಬಾಲಕನ ಅಪಹರಣ: ಐವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಗರದ ಶ್ರೀರಾಮಪುರದ ವೈದ್ಯ ದಂಪತಿಯ ಪುತ್ರನ (12) ಅಪಹರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಚಂದ್ರಗುಪ್ತ ತಿಳಿಸಿದರು.

‘ಜೂನ್‌ 23ರ ರಾತ್ರಿ 7.15ರ ಸುಮಾರಿಗೆ ಬಾಲಕನನ್ನು ಅಪಹರಿಸಲಾಗಿತ್ತು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಾನೂನು– ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಇದಾದ ಕೆಲವು ಗಂಟೆಗಳಲ್ಲಿ ಬಾಲಕನನ್ನು ಬಿಟ್ಟು ತೆರಳಿದ್ದರು. ಅಪಹರಣ ನಡೆದ 18 ಗಂಟೆಯ ಒಳಗಾಗಿ ಎಲ್ಲ ಆರೋಪಿಗಳನ್ನು ವಿರಾಜಪೇಟೆಯಲ್ಲಿ ಬಂಧಿಸಲಾಗಿದೆ’ ಎಂದು ಇಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬಂಧಿತರೆಲ್ಲರೂ 20 ರಿಂದ 25 ವರ್ಷದವರಾಗಿದ್ದು, ಮೈಸೂರು, ಮೈಸೂರು ಜಿಲ್ಲೆ, ಬೆಂಗಳೂರಿನ ನಿವಾಸಿಗಳು. ಸಾಲ ಮರುಪಾವತಿಗಾಗಿ ಹಣ ಪಡೆಯುವ ಉದ್ದೇಶದಿಂದ ಈ ಕೃತ್ಯವೆಸಗಿದ್ದು, 5 ಮೊಬೈಲ್‌ ಫೋನ್‌, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದರು.

ಪರಿಚಿತನಿಂದ ಕುಕೃತ್ಯ: ‘ಬಾಲಕನ ಅಜ್ಜನ ಆರೈಕೆಗಾಗಿ ಕೆಲವು ತಿಂಗಳ ಹಿಂದೆ ತಾತ್ಕಲಿಕವಾಗಿ ಪುರುಷ ನರ್ಸ್‌ವೊಬ್ಬರನ್ನು ನೇಮಿಸಿಕೊಳ್ಳಲಾಗಿತ್ತು. ಮನೆಯ ಸ್ಥಿತಿಗತಿ ಅರಿತಿದ್ದ ಈತ, ನಾಲ್ವರು ಸ್ನೇಹಿತರ ಜೊತೆಗೂಡಿ ಯೋಜನೆ ರೂಪಿಸಿದ್ದ. ಆರೋಪಿಗಳ ಪೈಕಿ ಇಬ್ಬರು ಚಾಲಕರಾಗಿದ್ದು, ಮತ್ತಿಬ್ಬರು ಹ್ಯೂಮನ್‌ ಡೇ ಕೇರ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ’ ಎಂದು ಚಂದ್ರಗುಪ್ತ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್, ಸಿಸಿಬಿ ಘಟಕದ ಎಸಿಪಿ ಅಶ್ವಥ ನಾರಾಯಣ್‌, ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ, ‍ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂತೋಷ್‌, ರಾಜು.ಜಿ.ಸಿ, ಶೇಖರ್‌, ಅಜರುದ್ದೀನ್‌, ರವೀಂದ್ರ, ಷಣ್ಮುಖ, ಪಿಎಸ್‌ಐ ರಾಧಾ, ಗೋಪಾಲ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು