ಭಾನುವಾರ, ಜೂನ್ 20, 2021
20 °C
ಸೇತುವೆ ನಿರ್ಮಾಣ: ಬಹುದಿನದ ಬೇಡಿಕೆಗೆ ಫಲ ಸಿಕ್ಕಿದೆ: ಶಾಸಕ ಅನಿಲ್‌ಕುಮಾರ್

ಕಬಿನಿ ಜಲಾಶಯಕ್ಕೆ ಸಿ.ಎಂ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್‌.ಡಿ.ಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಆ. 21ರಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು  ಶಾಸಕ ಸಿ.ಅನಿಲ್‌ಕುಮಾರ್‌ ತಿಳಿಸಿದರು.

ಮುಖ್ಯಮಂತ್ರಿ ಬರುವ ಹಿನ್ನೆಲೆಯಲ್ಲಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

‘ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಮುಂದಿನ ಜಾಗದಲ್ಲಿ ಸುಮಾರು ₹50.30 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ಮತ್ತು ಬಿದರಹಳ್ಳಿ ವೃತ್ತದವರೆಗೆ ರಸ್ತೆ ನಿರ್ಮಾಣಕ್ಕೆ  ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ನವರು ಜಲಾಶಯದ ಮುಂದೆ ಸೇತುವೆ ನಿರ್ಮಾಣ ಮತ್ತು ಕೊಲ್ಲೇಗೌಡನಹಳ್ಳಿ ವೃತ್ತದಿಂದ ಬೀಚನಹಳ್ಳಿ ಗ್ರಾಮದ ಮೂಲಕ ಬಿದರಹಳ್ಳಿ ವೃತ್ತದವರೆಗಿನ ಸುಮಾರು 10 ಕಿ.ಮೀ ರಸ್ತೆ ಕಾಮ ಗಾರಿಗೂ ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ. ಸೇತುವೆ ಕಾಮಗಾರಿಗೆ ₹ 25.30 ಕೋಟಿ ಮತ್ತು ಕಾಂಕ್ರೀಟ್ ರಸ್ತೆಗೆ ₹ 25 ಕೋಟಿ ಮಂಜೂರಾಗಿದ್ದು, ಟಿಎಸ್‌ಪಿ ಯೋಜನೆಯಡಿ ಕಾಮಗಾರಿ ನಡೆಯಲಿದೆ, ಈ ಭಾಗದ ಜನರ ಜಲಾಶಯ ನಿರ್ಮಾಣವಾದಾಗಿನಿಂದ ಇದ್ದಂತಹ ಬೇಡಿಕೆಗೆ ಫಲ ದೊರೆತಂತಾಗಿದೆ’ ಎಂದರು.

‘ಈ ಸೇತುವೆ ನಿರ್ಮಾಣ ಮಾಡಬೇಕೆನ್ನುವುದು ತಮ್ಮ ತಂದೆ ದಿವಂಗತ ಚಿಕ್ಕಮಾದು ಅವರ ಕನಸಾಗಿತ್ತು. ಅದನ್ನು ಈಡೇರುತ್ತಿರು ವುದಕ್ಕೆ ನನಗೆ ಸಂತಸವಾಗಿದೆ. ವೈಯಕ್ತಿಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಉಸ್ತುವಾರಿ ಸಚಿವ ಸೋಮಶೇಖರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.

‘ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು, ಪತ್ರಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರೆ ಮಾತ್ರ ಒಳಗೆ ಪ್ರವೇಶ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್ ತಿಳಿಸಿದರು.

ಜಾಗ್ರತೆ ವಹಿಸಿ: ‘ಕೋವಿಡ್ ನಡುವೆಯೂ ಯಡಿಯೂರಪ್ಪ ಕಬಿನಿಗೆ ಬರುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲಿ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳ ಸಹಕಾರ ಮುಖ್ಯ. ಮುಖ್ಯಮಂತ್ರಿಯೊಂದಿಗೆ ಬರುವ ಸಚಿವರು, ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು’ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.