ಬುಧವಾರ, ಮೇ 18, 2022
24 °C
ಸರಗೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಮಸ್ಯೆ; ವಾಹನ ಸವಾರರ ಪರದಾಟ

ರಸ್ತೆ ಮೇಲೆ ಒಕ್ಕಣೆ: ವಾಹನ ಸಂಚಾರಕ್ಕೆ ಕಂಟಕ

ಎಸ್.ಆರ್.ನಾಗರಾಮ Updated:

ಅಕ್ಷರ ಗಾತ್ರ : | |

Prajavani

ಸರಗೂರು: ಅಪಾಯ ಲೆಕ್ಕಿಸದೆ ತಾಲ್ಲೂಕಿನ ನಾನಾ ರಸ್ತೆಗಳ ಮೇಲೆ ವಿವಿಧ ಬೆಳೆಗಳ ಒಕ್ಕಣೆ ನಡೆಯುತ್ತಿದ್ದು, ವಾಹನ ಚಾಲಕರು, ಪ್ರಯಾಣಿಕರ ಸಂಚಾರಕ್ಕೆ ಕಂಟಕ ಎದುರಾಗಿದೆ.

ತಾಲ್ಲೂಕಿನಾದ್ಯಂತ ಈಗ ಭತ್ತ, ಹುರುಳಿ, ರಾಗಿ ಒಕ್ಕಣೆ ಜೋರಾಗಿದೆ. ಜಮೀನಿನಲ್ಲಿ ಕಣ ನಿರ್ಮಿಸಿ ಬೆಳೆ ರಾಶಿ ಮಾಡಿ, ಒಕ್ಕಣೆ ಮಾಡುತ್ತಿದ್ದ ರೈತರು ಅಲ್ಲಿಂದ ಧಾನ್ಯಗಳನ್ನು ಮನೆಗೆ ತರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲೇ ಒಕ್ಕಣೆ ಮಾಡುವ ಸುಲಭ ಮಾರ್ಗ ಕಂಡುಕೊಂಡಿದ್ದಾರೆ. 

ಕೆಲವು ಕಡೆಗಳಲ್ಲಿ ರೈತರು ಯಂತ್ರಗಳನ್ನು ಬಳಸಿಕೊಂಡು ಒಕ್ಕಣೆ ಮಾಡಿದರೆ, ಇನ್ನು ಕೆಲವು ಕಡೆಗಳಲ್ಲಿ ದೊಡ್ಡದಾದ ಟಾರ್ಪಲ್‌ಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇನ್ನು ಕೆಲವರು ರಸ್ತೆಯ ಮಧ್ಯ ಭಾಗದಲ್ಲಿಯೇ ಭತ್ತ, ರಾಗಿ, ಹುರುಳಿ ಹಾಕಿ ವಾಹನಗಳು ಅದರ ಮೇಲೆ ಚಲಾಯಿಸುತ್ತಾರೆ. ಜನರು ಓಡಾಡುವ, ವಾಹನ ದಟ್ಟಣೆ ಇರುವ ರಸ್ತೆ ಮಧ್ಯದಲ್ಲೇ ಧಾನ್ಯ ಹಾಕಿ ಟ್ರಾಕ್ಟರ್‌ ನೆರವು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಸ್ತೆ ಅಪಘಾತಗಳೂ ಹೆಚ್ಚುತ್ತಿವೆ. 

‘ಯಂತ್ರೋಪಕರಣ ಅವಲಂಬಿಸಿದ ಮೇಲೆ ಕೆಲ ರೈತರು ಹೊಲದಲ್ಲಿ ಒಕ್ಕಣೆ ಕಣ ಮಾಡುವುದನ್ನು ಬಿಟ್ಟಿದ್ದಾರೆ. ಇದಲ್ಲದೆ ಉಳುಮೆ ಮಾಡಲು ಈಗ ಎತ್ತು, ದನ-ಕರು ಸಾಕುತ್ತಿಲ್ಲ. ಹೀಗಾಗಿ, ರಸ್ತೆಯ ಮೇಲೆ ಒಕ್ಕಣೆ ಮಾಡುತ್ತಿದ್ದಾರೆ’ ಎಂದು ಊರಿನ ಹಿರಿಯರು ಹೇಳುತ್ತಾರೆ.

ದೂಳು ಕಣ್ಣಿಗೆ ಅಪಾಯ: ಒಕ್ಕಣೆ ಮಾಡುವ ರೈತರು ಭತ್ತ, ರಾಗಿ ಹಾಗೂ ಹುರುಳಿಯಂಥ ಬೆಳೆಗಳನ್ನು ರಸ್ತೆಯಲ್ಲಿ ಎತ್ತರವಾಗಿ ಹಾಕುತ್ತಾರೆ. ಇವು ವಾಹನಗಳ ಚಕ್ರಕ್ಕೆ ಸಿಲುಕಿಕೊಳ್ಳುತ್ತವೆ. ಆಗ ಸವಾರರ ಗೋಳು ಕೇಳುವುದೇ ಬೇಡ. ಇನ್ನು ದ್ವಿಚಕ್ರ ವಾಹನಗಳಂತೂ ಮುಂದೆ ಸಾಗುವುದೇ ಕಷ್ಟ. ಧೈರ್ಯವಾಗಿ ಮುನ್ನುಗ್ಗಿದರೆ ಒಕ್ಕಣೆಯಿಂದ ಏಳುವ ದೂಳು ಕಣ್ಣಿಗೆ ಬೀಳುತ್ತದೆ. ದೂಳಿನಿಂದಾಗಿ ಮುಂದಿನ ಹಾದಿಯೂ ಸರಿಯಾಗಿ ಕಾಣುವುದಿಲ್ಲ.

ಗ್ರಾಮಾಂತರದಲ್ಲೇ ಹೆಚ್ಚು: ಒಕ್ಕಣೆ ಮಾಡಲು ರೈತರು ಗ್ರಾಮಾಂತರ ಪ್ರದೇಶ ಹಾಗೂ ಹೆಚ್ಚು ಜನನಿಬಿಡ ಪ್ರದೇಶವಲ್ಲದ ರಸ್ತೆಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ತಾಲ್ಲೂಕಿನ ಮುಳ್ಳೂರು, ಬಿ.ಮಟಕೆರೆ ಮಾರ್ಗದ ತೆಲುಗುಮಸಹಳ್ಳಿ, ಲಿಂಗೇನಹಳ್ಳಿ, ಬಡಗಲಪುರ ಹಾಗೂ ನಂಜನಾಥಪುರ ಸೇರಿದಂತೆ ವಿವಿಧ ಗ್ರಾಮಗಳ ರಸ್ತೆಗಳ ಮೇಲೆ ರಾಗಿ, ಭತ್ತ ಹಾಗೂ ಹುರುಳಿ ಸೇರಿದಂತೆ ತೊಗರಿ, ಸೆಣಬಿನಂತಹ ಆಹಾರ ಧಾನ್ಯಗಳನ್ನು ಒಕ್ಕಣೆ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಹುರುಳಿ ಸೆತ್ತೆಯ ಮೇಲೆ ತ್ರಿಚಕ್ರ ವಾಹನ ಚಲಿಸುತ್ತಿರುವಾಗ ಎಂಜಿನ್‌ಗೆ ಸಿಲುಕಿಕೊಂಡು ಬೆಂಕಿ ಕಾಣಿಸಿಕೊಂಡಿತ್ತು.

‘ಕಣ ನಿರ್ಮಾಣಕ್ಕೆಂದು ಗ್ರಾಮೀಣಾ ಭಿವೃದ್ಧಿ ಇಲಾಖೆಯು ಸಹಾಯ ಧನ ಘೋಷಿಸಿದೆ. ಆದರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಈಗಾಗಲೇ ನಿರ್ಮಿಸಿಕೊಂಡಿರುವ ಕಣಗಳೂ ಸದ್ಬಳಕೆಯಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸ ಬೇಕು. ಈ ಸಂಬಂಧ ಪೊಲೀಸರು ಸೂಕ್ತ ಕ್ರಮ ವಹಿಸಬೇಕು’ ಎಂದು ವಾಹನ ಸವಾರರ ಆಗ್ರಹಿಸಿದ್ದಾರೆ. 

***

ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ಮೂವರಿಗೆ ಪೆಟ್ಟಿ ಕೇಸ್ ಹಾಕಿದ್ದೇವೆ. ನಮ್ಮ 112 ವಾಹನವನ್ನು ಗ್ರಾಮಾಂತರ ಪ್ರದೇಶಕ್ಕೆ ಕಳಿಸಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

-ಆನಂದ್, ಸರಗೂರು ಸಿಪಿಐ

***

ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕ್ರಮ ವಹಿಸಲು ಪಂಚಾಯಿತಿ ಪಿಡಿಒಗೆ ಸೂಚಿಸಿ, ಲೋಕೋಪಯೋಗಿ ಇಲಾಖೆ ಗಮನಕ್ಕೆ ತರುತ್ತೇನೆ.

-ಚಲುವರಾಜು, ತಹಶೀಲ್ದಾರ್

***

ರಸ್ತೆಯಲ್ಲಿ ಒಕ್ಕಣೆ ಮಾಡುವುದು ತಪ್ಪು. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವವರನ್ನು ತೆರವು ಮಾಡಿಸಲಾಗುತ್ತಿದೆ

-ಶ್ರವಣದಾಸ್ ರೆಡ್ಡಿ, ಸರಗೂರು ಠಾಣೆ ಪಿಎಸ್ಐ

***

ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ದೂಳುನಿಂದಾಗಿ ಕಣ್ಣಿಗೂ ಅಪಾಯ. ರಸ್ತೆಯಲ್ಲಿ ಒಕ್ಕಣೆ ಮಾಡಬಾರದು

-ಜಗದೀಶ್ ಅಯ್ಯು, ‌ಅಧ್ಯಕ್ಷ, ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.