ಗುರುವಾರ , ಜುಲೈ 7, 2022
23 °C

ರಾಜ್ಯದಲ್ಲಿ ಆರಂಭವಾಗಿವೆ 1.80 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ: ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪ್ರಸಕ್ತ ಸಾಲಿನಲ್ಲಿ 3.40 ಲಕ್ಷ ಮನೆಗಳ ನಿರ್ಮಾಣ ಕಾರ್ಯ 8-10 ತಿಂಗಳಿನಲ್ಲಿ ಪೂರ್ಣವಾಗಲಿದೆ. ಇದರಲ್ಲಿ ಕೆ.ಆರ್‌.ಕ್ಷೇತ್ರದಲ್ಲಿ 2,212 ಮನೆಗಳು ನಿರ್ಮಾಣವಾಗಲಿವೆ ಎಂದು ವಸತಿ ಇಲಾಖೆ ಸಚಿವ ವಿ‌‌.ಸೋಮಣ್ಣ ತಿಳಿಸಿದರು.

ಇಲ್ಲಿನ ವಿದ್ಯಾರಣ್ಯಾಪುರಂ ಉದ್ಯಾನದಲ್ಲಿ ಶಾಸಕ ಎಸ್‌.ಎ.ರಾಮದಾಸ್ ಆಯೋಜಿಸಿದ್ದ 'ಮೋದಿ ಯುಗ್ ಉತ್ಸವ್' ಕಾರ್ಯಕ್ರಮದಲ್ಲಿ ಮಂಗಳವಾರ ಆಶ್ರಯ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮನೆಗಳು ಮಂಜೂರು ಮಾಡಿದ್ದರೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿರಲಿಲ್ಲ‌. ನನ್ನ ಅವಧಿಯಲ್ಲಿ  ಹಿಂದಿನ ಅವಧಿಯ 1.80 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಿದರು.

ಇಷ್ಟು ಮನೆಗಳು 2015-16, 2017-18 ನೇ ಸಾಲಿನಲ್ಲೆ ಮಂಜೂರಾಗಿತ್ತು. ಬುಡಕಟ್ಟು ಜನಾಂಗದವರಿಗೆ 65 ಸಾವಿರ ಮನೆಗಳು ಮಂಜೂರಾಗಿದ್ದವು‌. ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದವು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿವೆ ಎಂದು ಹೇಳಿದರು.

ಫಲಾನುಭವಿಗಳು ಮನೆಗಳನ್ನು ಬಾಡಿಗೆಗೆ ಕೊಡದೆ ಮಾರಾಟ ಮಾಡದೇ ಅದರಲ್ಲಿಯೇ ವಾಸಿಸಬೇಕು ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಶಾಸಕನಾದ ಮೇಲೆ ವಿವಿಧ ವಸತಿ ಯೋಜನೆಗಳಡಿ 3816 ಮನೆಗಳನ್ನು ಬಡವರಿಗೆ ನೀಡಿದ್ದೇನೆ. ಸಮೀಕ್ಷೆ ನಡೆಸಿದ 81 ಸಾವಿರ ಮಂದಿಯಲ್ಲಿ 11 ಸಾವಿರ ಮಂದಿ ಬಾಡಿಗೆ ಮನೆಯಲ್ಲಿರುವವರು ಅರ್ಜಿ ಸಲ್ಲಿಸಿದ್ದರು‌. ಈಗ ಗೊರೂರಿನಲ್ಲಿ 22.5 ಎಕರೆ ಪ್ರದೇಶದಲ್ಲಿ 2,212 ಮನೆಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಆದಷ್ಟು ಬೇಗ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸಂಸದ ಪ್ರತಾಪಸಿಂಹ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಹೆಚ್ಚವರಿ ಆಯುಕ್ತ ಶಶಿಕುಮಾರ್, ಮುಖಂಡರಾದ ವಡಿವೇಲು ಇದ್ದರು‌.

2,122 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ
ಮೈಸೂರು:
ತಾಲ್ಲೂಕಿನ ಗೊರೂರಿನಲ್ಲಿ ಗುಂಪು ಮನೆಗಳ ಯೋಜನೆಗೆ ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಮನೆ ಸರಿಯಾಗಿ ನಿರ್ಮಾಣ ಆಗದಿದ್ದರೆ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ಒಟ್ಟು ಇಲ್ಲಿ 2,122 ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು