ಸೋಮವಾರ, ಏಪ್ರಿಲ್ 6, 2020
19 °C
ಹೋಟೆಲ್‌, ಪ್ರವಾಸಿ ಸ್ಥಳಗಳೆಲ್ಲ ಭಣಭಣ

‘ಕೋವಿಡ್– 19’; ಪ್ರವಾಸೋದ್ಯಮಕ್ಕೆ ತಟ್ಟಿದ ಬಿಸಿ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೋವಿಡ್–19’ ಆತಂಕದಿಂದ ನಗರದ ಪ್ರವಾಸೋದ್ಯಮ ಕುಸಿದಿದ್ದು, ಬಹುತೇಕ ಹೋಟೆಲ್‌ಗಳು ಪ್ರವಾಸಿಗರಿಲ್ಲದೇ ಭಣಗುಡುತ್ತಿವೆ.

ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯಗಳು ಪ್ರವಾಸಿಗರಿಲ್ಲದೇ ಬಿಕೊ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೋಟೆಲ್‌ ಮಾಲೀಕರ ಸಂಘದ ನಗರ ಘಟಕದ ಅಧ್ಯಕ್ಷ ಸಿ. ನಾರಾಯಣಗೌಡ, ‘ಶೇ 50ರಷ್ಟು ಬುಕಿಂಗ್‌ಗಳು ರದ್ದಾಗಿವೆ. ಹೋಟೆಲ್ ಉದ್ಯಮ ಸಂಕಷ್ಟಕ್ಕೆ ತುತ್ತಾಗಿದೆ’ ಎಂದು ತಿಳಿಸಿದರು.

ನಗರದ ಹೋಟೆಲ್‌ಗಳಲ್ಲಿ 9.5 ಸಾವಿರ ಹೋಟೆಲ್‌ ರೂಮುಗಳಿವೆ. ಇವುಗಳಲ್ಲಿ ಶೇ 50ರಷ್ಟು ಮಾರ್ಚ್‌ ತಿಂಗಳಿನಲ್ಲಿ ಭರ್ತಿಯಾಗುತ್ತಿದ್ದವು. ಆದರೆ, ಈಗ ಕೇವಲ ಶೇ 10ರಷ್ಟು ಮಾತ್ರ ಭರ್ತಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿಯಲ್ಲೂ ಅಂತರರಾಜ್ಯ ಬಸ್‌ಗಳ ಬುಕ್ಕಿಂಗ್‌ನಲ್ಲಿ ಶೇ 15ರಿಂದ 20ರಷ್ಟು ಇಳಿಕೆ ಕಂಡು ಬಂದಿದ್ದು, ಬೇಡಿಕೆ ಕಡಿಮೆ ಇರುವ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ತಿಳಿಸಿದರು.

ಮೈಸೂರು ಅರಮನೆಗೆ ಕಳೆದ ವರ್ಷ ಮಾರ್ಚ್ 10ರಂದು 10,350 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರೆ, ಈ ವರ್ಷ 5,244 ಮಂದಿ ಭೇಟಿ ನೀಡಿದ್ದಾರೆ.

ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕಳೆದ ಬುಧವಾರ (ಮಾರ್ಚ್ 4) 3,557 ಮಂದಿ ಭೇಟಿ ನೀಡಿದ್ದರು. ಮಾರ್ಚ್ 11ರಂದು 2,597 ಮಂದಿ ಭೇಟಿ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ, ‘ಇದು ಪರೀಕ್ಷಾ ಸಮಯವಾಗಿರುವುದರಿಂದ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ’ ಎಂದು ತಿಳಿಸಿದರು.

ಇಲ್ಲಿನ ಯೋಗ ಕೇಂದ್ರಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಜತೆಗೆ, ವಿದೇಶಿಗರೊಡನೆ ನಡೆಸುತ್ತಿದ್ದ ಆನ್‌ಲೈನ್‌ ಯೋಗ ಕೋಚಿಂಗ್‌ ತರಗತಿಗಳೂ ರದ್ದಾಗುತ್ತಿವೆ.

ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಧಾಮ ಪ್ರವೇಶಿಸುವವರು ಡೆಟಾಲ್‌ ಮತ್ತು ಬ್ಲೀಚಿಂಗ್‌ ಮಿಶ್ರಿತ ನೀರಿನಲ್ಲಿ ಕಾಲು ತೊಳೆದುಕೊಂಡು ಒಳ ಹೋಗುವಂತೆ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ‘ರೋಗಾಣುಗಳು ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಇಲಾಖೆಯ ಸಿಬ್ಬಂದಿಗೆ ‘ಮಾಸ್ಕ್‌’ ಧರಿಸುವಂತೆ ಸೂಚಿಸಲಾಗಿದೆ’ ಎಂದು ವನ್ಯಜೀವಿ ವಿಭಾಗದ ಡಿಎಫ್‌ಒ ಅಲೆಕ್ಸಾಂಡರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು