ಮಂಗಳವಾರ, ಆಗಸ್ಟ್ 9, 2022
20 °C
ಸಾಂಸ್ಕೃತಿಕ ನಗರಿ ತೊರೆದು ಹಳ್ಳಿಗಳತ್ತ ಕಲಾವಿದರು l ನೆರವಿನಲ್ಲಿ ಸರ್ಕಾರದ ತಾರತಮ್ಯ; ಆಕ್ರೋಶ

ಕೋವಿಡ್‌: ಸಂಕಷ್ಟದಲ್ಲಿ ಯುವ ಕಲಾವಿದರು

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರ ಹಾಗೂ ಜಿಲ್ಲೆಯ ರಂಗಭೂಮಿ, ನೃತ್ಯ– ಸಂಗೀತ, ವಾದ್ಯ ಸೇರಿದಂತೆ 3,000ಕ್ಕೂ ಹೆಚ್ಚು ಕಲಾವಿದರು ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರಿಗೆ ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ₹3 ಸಾವಿರ ನೆರವು ನೀಡಲು ಮುಂದಾಗಿದೆ. ಆದರೆ, 35 ವರ್ಷದ ಮೇಲ್ಪಟ್ಟವರನ್ನು ಮಾತ್ರ ಪರಿಗಣಿಸಿರುವುದು ಯುವ ಕಲಾವಿದರಿಗೆ ನಿರಾಸೆ ಮೂಡಿಸಿರುವುದಲ್ಲದೆ, ಅವರ ಆಕ್ರೋಶಕ್ಕೂ ಕಾರಣವಾಗಿದೆ.

‘ವೇದಿಕೆ ಮೇಲೆ ಹತ್ತಿದರೆ ಪಾತ್ರಗಳಷ್ಟೇ. ಇವುಗಳಿಗೆ ಹಿರಿಯ– ಕಿರಿಯ ಎಂಬ ಭೇದವಿದೆಯೇ. ಕೋವಿಡ್‌ ಇವ ಹಿರಿಯ– ಇವ ಕಿರಿಯ ಎಂದು ಬರುತ್ತದೆಯೇ. ಕಳೆದೊಂದು ವರ್ಷದಿಂದ ಯಾವುದೇ ಕಾರ್ಯಕ್ರಮಗಳೂ ಸಿಗುತ್ತಿಲ್ಲ. ದುಡಿದು ಉಳಿಸಿದ್ದ ಹಣ ಕೋವಿಡ್‌ ಮೊದಲ ಅಲೆಯಲ್ಲೇ ಖರ್ಚಾಗಿ ಹೋಯ್ತು. ಎರಡನೇ ಅಲೆ ಬಂದಾಗ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಹೀಗಾಗಿ, ಮೈಸೂರಿನ ಬೋಗಾದಿಯಲ್ಲಿದ್ದ ರೂಂ ಖಾಲಿ ಮಾಡಿ ಊರಿಗೆ ಬಂದೆ’ ಎಂದು ಗುಂಡ್ಲುಪೇಟೆಯ ಶಿವಪುರದ ರಂಗಭೂಮಿ ಕಲಾವಿದ ಮಂಜು ಬೇಸರ ವ್ಯಕ್ತಪಡಿಸಿದರು.

‘20 ವರ್ಷ ವಯಸ್ಸಿಗೆ ಮನೆ ಜವಾಬ್ದಾರಿ ಹೊತ್ತ ಹಲವು ಯುವಕರಿದ್ದಾರೆ. ಕೋವಿಡ್‌ ಬರುವ ಮುಂಚೆ ಮೈಸೂರಿನಲ್ಲಿ ಶಾಲಾ– ಕಾಲೇಜುಗಳು, ರಂಗತಂಡಗಳು ರಂಗ ತರಬೇತಿ ಶಿಬಿರ– ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದವು. ತಿಂಗಳಿಗೆ ಕನಿಷ್ಠ ₹15 ಸಾವಿರ ದುಡಿಯುವ ಅವಕಾಶವಿತ್ತು. ಕೋವಿಡ್‌ ಮೊದಲ ಅಲೆಯ ನಂತರ ತಿಂಗಳ ದುಡಿಮೆ ₹3 ಸಾವಿರಕ್ಕಿಂತಲೂ ಕಡಿಮೆಯಾಯ್ತು. ಅಲ್ಲದೆ, ಹಲವು ಯುವ ಕಲಾವಿದರು ಕೋವಿಡ್‌ನಿಂದ ಮೃತಪಟ್ಟರು. ರಂಗಭೂಮಿಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದ ನನ್ನ ಸ್ನೇಹಿತ ವಿಕ್ರಂ ಕೂಡ ಮೃತಪಟ್ಟ’ ಎಂದು ಅವರು ಅಳಲು ತೋಡಿಕೊಂಡರು.

ಆನ್‌ಲೈನ್‌ ಅಭಿಯಾನ: ‘ಯುವ ರಂಗ ಕಲಾವಿದರಿಗೆ ಸೂಕ್ತ ಆರ್ಥಿಕ ನೆರವು ಹಾಗೂ ಅವಕಾಶ ನೀಡುವ ಕುರಿತು ಈಗಾಗಲೇ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಪತ್ರವನ್ನು ಯೂತ್‌ ಆರ್ಟಿಸ್ಟ್‌ ಗಿಲ್ಡ್‌ ಬರೆದಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಯುವ ಕಲಾವಿದರು ಆಯಾ ಜಿಲ್ಲಾಡಳಿತಕ್ಕೂ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ. ಪತ್ರ ಚಳವಳಿಯನ್ನು ಮಾಡಿದ್ದೇವೆ. ತಾರತಮ್ಯ ಮಾಡದೇ 18 ವರ್ಷ ದಾಟಿದ ಎಲ್ಲ ಕಲಾವಿದರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ರಂಗಭೂಮಿ ಕಲಾವಿದ ಡಿಂಗ್ರಿ ನರೇಶ್‌ ಹೇಳಿದರು.

ರಂಗಭೂಮಿ ಕಲಾವಿದರಿಗಾಗಿ ಯಾವುದೇ ಸಂಘಟನೆ ಇಲ್ಲ. ಇದರಿಂದ ನಮ್ಮ ದನಿ ಸರ್ಕಾರಕ್ಕೂ ಕೇಳುತ್ತಿಲ್ಲ. ಹೀಗಾಗಿಯೇ ಯುವ ಕಲಾವಿದರು ‘ಯೂತ್‌ ಆರ್ಟಿಸ್ಟ್‌ ಗಿಲ್ಡ್‌’ ರಚಿಸಿಕೊಂಡು ಆನ್‌ಲೈನ್‌ ಚಳವಳಿ ಆರಂಭಿಸಿದ್ದೇವೆ. ಹಿರಿಯ ರಂಗಭೂಮಿ ಕಲಾವಿದರೂ ಇದಕ್ಕೆ ದನಿಗೂಡಿಸಿದ್ದಾರೆ. ಎಲ್ಲರಿಗೂ ಸಹಾಯಧನ ಸಿಕ್ಕರೆ ಮಾತ್ರ ಅರ್ಜಿ ಹಾಕುತ್ತೇವೆ. ಇಲ್ಲದಿದ್ದರೆ ಬೇಡ ಎಂಬ ದೃಢ ಸಂಕಲ್ಪವನ್ನು ಹಲವು ಹಿರಿಯರು ಮಾಡಿದ್ದಾರೆ ಎಂದು ತಿಳಿಸಿದರು.

ರಂಗಭೂಮಿ ಕಲಾವಿದರನ್ನಷ್ಟೇ ಲಾಕ್‌ಡೌನ್‌ ಕರಿನೆರಳು ಆವರಿಸಿಲ್ಲ. ನಗರದ ಸಂಗೀತ, ವಾದ್ಯ ಕಲಾವಿದರನ್ನೂ ಬಾಧಿಸಿದೆ. 

‘ನಾನು ಕಾರ್ಯಕ್ರಮ, ಸಂಗೀತ ಕಛೇರಿ ನೀಡಲು ಆರಂಭಿಸಿದ್ದು 16ನೇ ವಯಸ್ಸಿನಲ್ಲಿ. ನನ್ನಂತೆಯೇ ಹಲವು ಗೆಳೆಯರು ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಕಲಾವಿದರಿಗೆ ಸ್ವಾಭಿಮಾನ ಜಾಸ್ತಿ. ಅವರಾಗಿಯೇ ಏನೂ ಕೇಳುವುದಿಲ್ಲ. ಸರ್ಕಾರವು ಅನುದಾನಕ್ಕೆ ಪರಿಗಣಿಸುವಾಗ ವಯಸ್ಸಿನಲ್ಲಿ ತಾರತಮ್ಯ ಮಾಡಬಾರದಿತ್ತು. 18 ವರ್ಷದ ಯುವಕ ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದರೆ ಆತ ಅನುದಾನಕ್ಕೆ ಅರ್ಹ ಅಲ್ಲ ಎಂಬುದು ಎಷ್ಟರಮಟ್ಟಿಗೆ ಸರಿ. 35 ವರ್ಷದ ಮೇಲ್ಪಟ್ಟ ಕಲಾವಿದರಲ್ಲಿ ಹಣವಿಲ್ಲ; 18 ವರ್ಷದಿಂದ 35 ವರ್ಷದ ಕಲಾವಿದರಲ್ಲಿ ಹಣ ಬೇಕಾದಷ್ಟಿದೆ ಎಂತಲೇ’ ಎಂದು ಸ್ಯಾಕ್ಸೋಫೋನ್‌ ವಾದಕ ಹರೀಶ್‌ ಪಾಂಡವ್‌ ಪ್ರಶ್ನಿಸಿದರು.

‘ಮೊದಲ ಅಲೆಯಲ್ಲಿ ನಾದಸ್ವರಾವಳಿ ತಂಡ ಕಟ್ಟಿಕೊಂಡು ಆನ್‌ಲೈನ್‌ ಸಂಗೀತ ಕಛೇರಿ ಆಯೋಜಿಸಿ ಹಲವು ಕಲಾವಿದರಿಗೆ ಸಂಭಾವನೆ ನೀಡಿ ನೆರವಾದೆವು. ಈ ಬಾರಿಯ ಕೋವಿಡ್‌ ಅಲೆ ಭೀಕರವಾಗಿದೆ. ಆನ್‌ಲೈನ್‌ ಕಾರ್ಯಕ್ರಮ ನಡೆಸಲೂ ಆಗುತ್ತಿಲ್ಲ. ದಿನಸಿ ಕಿಟ್‌ ನೀಡುತ್ತಿದ್ದೇವೆ. ಇದಕ್ಕೆ ಯಾವ ರಾಜಕಾರಣಿ, ಉದ್ಯಮಿಗಳ ಸಹಾಯ ಪಡೆದಿಲ್ಲ. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮಾಡಿದ ಆನ್‌ಲೈನ್‌ ಪಾಠ ಹಾಗೂ ಅವರ ಸಹಾಯದಿಂದ ನಾದಸ್ವರ, ತವಿಲ್‌ ವಾದ್ಯಕಾರರು, ಗಾಯಕರಿಗೆ ನೆರವಾಗುತ್ತಿದ್ದೇವೆ’ ಎಂದು ಹೇಳಿದರು.

‘ಅವಕಾಶಗಳಿವೆ: ನಿರಾಶರಾಗಬಾರದು’
‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ 35 ವರ್ಷ ಮೇಲ್ಪಟ್ಟ ಕಲಾವಿದರಿಗೆ ಸರ್ಕಾರ ಘೋಷಿಸಿದ ₹3 ಸಾವಿರ ನೆರವಿಗೆ ಮೈಸೂರು ಜಿಲ್ಲೆಯಲ್ಲಿ 1,228 ಮಂದಿ ಕಲಾವಿದರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 909 ಮಂದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಚಿಸಿದ್ದ ತಜ್ಞರ ಸಮಿತಿಯು ಅನುದಾನಕ್ಕೆ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಯುವ ಕಲಾವಿದರನ್ನೂ ಸರ್ಕಾರ ಪರಿಗಣಿಸಲಿದೆ. ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಹೊಸ ಮಾನದಂಡ ರೂಪಿಸಲಿದೆ. ನಿರಾಶರಾಗುವುದು ಬೇಡ. ಕೋವಿಡ್‌ ನಂತರ ಇಲಾಖೆಯು ಯುವ ಕಲಾವಿದರಿಗಾಗಿಯೇ ಕಾರ್ಯಕ್ರಮಗಳನ್ನು ರೂಪಿಸಿ ಅವರನ್ನು ಹೆಚ್ಚು ತೊಡಗಿಸಿಕೊಳ್ಳಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್‌.ಚನ್ನಪ್ಪ ಹೇಳಿದರು.

ಕಲಾವಿದರು ಏನಂತಾರೆ?

‘ನೋವನ್ನು ನುಂಗಿಕೊಳ್ಳುವಂತಾಗಿದೆ’
ಸರ್ಕಾರ ಅನುದಾನ ನೀಡುತ್ತಿರುವುದು ಉತ್ತಮ ನಿರ್ಧಾರ. ಆದರೆ, ವಯಸ್ಸಿನ ತಾರತಮ್ಯ ಮಾಡಿರುವುದು ಸಲ್ಲ. ಕೇವಲ ಸರ್ಕಾರವನ್ನು ದೂಷಿಸಿ ಪ್ರಯೋಜನ ಇಲ್ಲ. ಕರುಣೆಯ ಕಣ್ಣುಗಳು ಎಲ್ಲರಿಗೂ ಇರಬೇಕು. ಇಂಥ ಸಮಯದಲ್ಲಿ ಜನಪ್ರತಿನಿಧಿಗಳು ನೆರವಾಗಬೇಕಿತ್ತು. ಒಬ್ಬೊಬ್ಬ ಕಲಾವಿದನಿಗೆ ₹1 ಲಕ್ಷ ಹಾಕುವಷ್ಟು ಶ್ರೀಮಂತ ರಾಜಕಾರಣಿಗಳು ಇಲ್ಲವೇ? ಆದರೆ, ಏನು ಮಾಡುವುದು ಎರಡು ಕೆ.ಜಿ ದಿನಸಿ ಕಿಟ್‌ ಕೊಟ್ಟು ಫೋಟೋ ತೆಗೆಸಿಕೊಳ್ಳುವ ಪ್ರಚಾರ ಪ್ರಿಯರೇ ಇದ್ದಾರೆ. ಇವರಿಂದ ಕಲಾವಿದರ ಸಂಕಷ್ಟ ಕೊನೆಗೊಳ್ಳದು. ನೋವನ್ನು ನುಂಗಿಕೊಳ್ಳುವಂತಾಗಿದೆ.
–ಹರೀಶ್‌ ಪಾಂಡವ, ಸ್ಯಾಕ್ಸೋಫೋನ್‌ ವಾದಕ

‘ಕಲಾವಿದರಲ್ಲೇ ಭಿನ್ನಾಭಿಪ್ರಾಯ ಮೂಡಿಸಲಾಗಿದೆ’
ಅನುದಾನದಲ್ಲಿ ಹಿರಿಯ– ಕಿರಿಯರು ಎಂಬ ಭಿನ್ನಾಭಿಪ್ರಾಯ ಮೂಡಿಸಲಾಗಿದೆ. ಇದಕ್ಕಾಗಿಯೇ ರಂಗಭೂಮಿಯ ಬಹಳಷ್ಟು ಮಂದಿ ಅರ್ಜಿಯನ್ನು ಹಾಕೇ ಇಲ್ಲ. ಎಲ್ಲರಿಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಯುವ ಕಲಾವಿದರು ರಂಗಭೂಮಿಯನ್ನು ವೃತ್ತಿಪರವಾಗಿ ತೆಗೆದುಕೊಂಡು ಮೈಸೂರಿನಲ್ಲಿ ರೂಂ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಇದೀಗ ಎಷ್ಟೋ ಮಂದಿ ಬಾಡಿಗೆ ನೀಡಲಾಗದೆ ಊರಿಗೆ ಮರಳಿದ್ದಾರೆ. ಸರ್ಕಾರವು ಕಲಾವಿದರ ಗಣತಿ ಸರಿಯಾಗಿ ನಡೆಸಬೇಕು. ಅರ್ಹರಿಗೆ ಅನುದಾನ ತಲುಪುವಂತಾಗಬೇಕು
–ವಿಕಾಸ್‌ ಚಂದ್ರ, ರಂಗಭೂಮಿ ಕಲಾವಿದ, ರಂಗಯಾನ ಟ್ರಸ್ಟ್, ಕುವೆಂಪುನಗರ 

‘ಊರಿಗೆ ಮರಳಿದೆ’
ಕೋವಿಡ್‌– ಲಾಕ್‌ಡೌನ್‌ನಿಂದ ಯಾವುದೇ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಸುತ್ತಿದ್ದೆ. ಇದೀಗ ವಿದ್ಯಾರ್ಥಿಗಳು ಹೆಚ್ಚು ಬರುತ್ತಿಲ್ಲ. ಈ ಸಂಕಷ್ಟದ ಗಳಿಗೆಯಲ್ಲಿ ಅವರಿಂದಲೂ ಶುಲ್ಕ ಕೇಳುವುದು ಕಷ್ಟವಾಗಿದೆ. ಹೀಗಾಗಿ, ಸ್ವಂತ ಊರು ಪುತ್ತೂರಿಗೆ ಮರಳಿದ್ದೇನೆ.
–ಆತ್ಮರಾಮ್ ನಾಯಕ್‌, ತಬಲಾ ವಾದಕ, ಕುವೆಂಪುನಗರ

‘ಕಲಾವಿದರ ದನಿ ಆಲಿಸಲಿ’
ಹಿರಿಯ ಕಲಾವಿದರಷ್ಟೇ ನಾವೂ ಕಷ್ಟ ಪಡುತ್ತಿದ್ದೇವೆ. ಮೈಸೂರಿನಲ್ಲಿ ಹೆಚ್ಚು ಕಾರ್ಯಕ್ರಮಗಳು ಸಿಗುತ್ತಿದ್ದವು. ಕಳೆದ ಬಾರಿಯ ಲಾಕ್‌ಡೌನ್‌ ನಂತರ ಚೇತರಿಸಿಕೊಂಡಿದ್ದೆವು. ಎರಡನೇ ಅಲೆಯಿಂದಾಗಿ ಯಾವ ಕಾರ್ಯಕ್ರಮವೂ ಸಿಗುತ್ತಿಲ್ಲ. ಬಹಳ ತೊಂದರೆಯಾಗಿದೆ. ಸರ್ಕಾರ ಯುವ ಕಲಾವಿದರ ದನಿ ಆಲಿಸಬೇಕು. ಅನುದಾನಕ್ಕೆ ಪರಿಗಣಿಸಬೇಕು.
–ಕೆ.ಅಜಯ್‌, ತವಿಲ್‌ ವಾದಕ

‘ಸಂಗೀತವೇ ಬದುಕಿಗೆ ಆಧಾರ’
ಕೋವಿಡ್‌ನಿಂದ ಹಲವು ಕಲಾವಿದರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಕಿರಿಯರೇ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಇವರು ಅನುದಾನಕ್ಕೆ ಅರ್ಹರಲ್ಲವೇ? ನಮ್ಮ ಕುಟುಂಬಕ್ಕೆ ಕೃಷಿ ಭೂಮಿ ಇಲ್ಲ. ಸ್ವಂತ ಮನೆ ಎನ್ನುವುದು ಬಿಟ್ಟರೆ ಏನೂ ಇಲ್ಲ. ವಾದ್ಯ ಸಂಗೀತವೇ ಬದುಕಿಗೆ ಆಧಾರ.
–ಆರ್‌.ಚಂದ್ರ, ತವಿಲ್ ವಾದಕ, ಉಂಡವಾಡಿ, ಮೈಸೂರು ತಾಲ್ಲೂಕು

‘ವರ್ಷದಲ್ಲಿ ಆರು ತಿಂಗಳಷ್ಟೇ ಕೆಲಸ’
ನಾದಸ್ವರ ವಾದಕರಿಗೆ ದಿನಕ್ಕೆ ₹ 1 ಸಾವಿರ ಸಿಗುತ್ತದೆ. ತಿಂಗಳಿಗೆ ಹೆಚ್ಚೆಂದರೆ 8ರಿಂದ 10 ಕಾರ್ಯಕ್ರಮ ಸಿಗಬಹುದು. ಆರು ತಿಂಗಳು ಮಾತ್ರ ಉದ್ಯೋಗ ಇರುತ್ತದೆ. ಇದೀಗ ಕೋವಿಡ್‌ನಿಂದ ಮದುವೆ–ಸಮಾರಂಭಗಳು ನಡೆಯುತ್ತಿಲ್ಲ. ಸರ್ಕಾರ ಅನುದಾನ ನೀಡಿದರೆ ಉಸಿರಾಡಲು ಸಾಧ್ಯ. ಆದ್ದರಿಂದ, ಎಲ್ಲ ಕಲಾವಿದರನ್ನೂ ಸಮಾನವಾಗಿ ಪರಿಗಣಿಸಬೇಕು.
–ವಿಜಯ್‌ ಸೂರ್ಯ, ನಾದಸ್ವರ ಕಲಾವಿದ, ಕುವೆಂಪುನಗರ

‘ಬೇರೆ ಕೆಲಸದತ್ತ ಕಲಾವಿದರು’
ಸಂಗೀತದಲ್ಲೇ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಾಗಿ ತೆಗೆದುಕೊಂಡ ಹಲವು ಯುವ ಕಲಾವಿದರು ಇದ್ದಾರೆ. 35 ವಯಸ್ಸಿಗಿಂತ ಕೆಳಗಿನವರಿಗೂ ಕೋವಿಡ್‌ ಸಂಕಷ್ಟ ತಂದೊಡ್ಡಿದೆ. ಎಷ್ಟೋ ಕಲಾವಿದರು ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲ ಯುವ ಕಲಾವಿದರಿಗೂ ಅನುದಾನ ನೀಡಬೇಕು.
–ಯಶಸ್ವಿ ತುಮಕೂರು, ಪಿಟೀಲು ಕಲಾವಿದ, ಕುವೆಂಪು ನಗರ....

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು