ಗುರುವಾರ , ಜುಲೈ 29, 2021
27 °C
ಮೈಸೂರು ನಗರದಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಡಿ.ಸಿ ಕ್ರಮ

ಕೋವಿಡ್-19 | ನರಸಿಂಹರಾಜ ಕ್ಷೇತ್ರ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನರಸಿಂಹರಾಜ ಕ್ಷೇತ್ರ ಸೇರಿದಂತೆ ಮೈಸೂರು ನಗರದ ಕೆಲ ಭಾಗಗಳಲ್ಲಿ ಶುಕ್ರವಾರದಿಂದ ಜುಲೈ 24ರವರೆಗೆ ಲಾಕ್‌ಡೌನ್‌ ಮಾಡಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಆದೇಶ ಹೊರಡಿಸಿದ್ದಾರೆ.

ನರಸಿಂಹರಾಜ, ಉದಯಗಿರಿ, ಲಷ್ಕರ್‌ ಹಾಗೂ ಮಂಡಿ ಮೊಹಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಗಳನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

‘ಸಾವಿನ ಸಂಖ್ಯೆಯಲ್ಲಿ ಹೆಚ್ಚಿನ ಪ್ರಕರಣಗಳು ನರಸಿಂಹರಾಜ ಕ್ಷೇತ್ರ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಚಾಮರಾಜ ಕ್ಷೇತ್ರದ ಕೆಲ ಬಡಾವಣೆಗಳಲ್ಲಿ ಸಂಭವಿಸಿವೆ. ಈ ಭಾಗದಲ್ಲಿ ಹೆಚ್ಚಿನ ಮಂದಿಯಲ್ಲಿ ಸೋಂಕು ಕಂಡುಬಂದಿದೆ. ರೋಗಿಗಳು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಈ ಕ್ರಮ ವಹಿಸಲಾಗಿದೆ’ ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಚುನಾಯಿತ ಇತರ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಪಾಲಿಕೆ ಅಧಿಕಾರಿಗಳು, ವೈದ್ಯರು ಹಾಗೂ ಪೊಲೀಸರೊಂದಿಗೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಈ ಪ್ರದೇಶಗಳಲ್ಲಿ ಹೋಟೆಲ್‌, ಚಹಾ ಅಂಗಡಿಗಳನ್ನು ತೆರೆಯುವಂತಿಲ್ಲ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿರಲಿದೆ. ದಿನಸಿ ಅಂಗಡಿ, ಹಾಲು, ತರಕಾರಿ, ದಿನಬಳಕೆ ವಸ್ತುಗಳು, ಹಣ್ಣಿನ ಅಂಗಡಿ, ಔಷಧೋಪಚಾರ, ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ವಾಣಿಜ್ಯ ವಹಿವಾಟು ನಡೆಸುವುದನ್ನು ನಿರ್ಬಂಧಿಸಲಾಗಿದೆ. ಮಾಂಸ ಮತ್ತು ಮೀನಿನ ಅಂಗಡಿಗಳನ್ನು ಮಂಗಳವಾರ ಮತ್ತು ಶುಕ್ರವಾರ ಮಾತ್ರ ತೆರೆಯಬೇಕು ಎಂದು ಸೂಚನೆ ನೀಡಿದ್ದಾರೆ.

ಎಲ್ಲಾ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಲಾಕ್‌ಡೌನ್‌ ಮಾಡಲಾಗಿರುವ ಈ ಪ್ರದೇಶದಲ್ಲಿ ಹಾದು ಹೋಗುವವರಿಗೆ ನಿರ್ಬಂಧವಿರುವುದಿಲ್ಲ ಎಂದಿದ್ದಾರೆ.

ಮೊದಲನೇ ಹಂತದಲ್ಲಿ ಮುನೇಶ್ವರ ನಗರ, ಕೆ.ಎಚ್‌.ಬಿ ಕಾಲೊನಿ, ಉದಯಗಿರಿ, ರಾಜೀವನಗರ, ಬೀಡಿ ಕಾಲೊನಿ ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 400 ಮೀಟರ್‌ ಪ್ರದೇಶವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು