ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಭ್ರಷ್ಟಾಚಾರವಿಲ್ಲದ ವ್ಯವಸ್ಥೆ: ಸಿ.ಸಿ.ಪಾಟೀಲ

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ
Last Updated 24 ಸೆಪ್ಟೆಂಬರ್ 2022, 16:09 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭ್ರಷ್ಟಾಚಾರವಿಲ್ಲದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದ 8ನೇ ದಿನವಾದ ಶನಿವಾರ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿ ಅವರು ಮಾತನಾಡಿದರು.

‘ಬಹಳ ಮಂದಿ ಮೋದಿ ಸರ್ಕಾರವನ್ನು ಸೂಟ್ ಬೂಟ್ ಸರ್ಕಾರ ಎಂದು ಆರೋಪಿಸಿದ್ದರು. ಅದೇ ಸರ್ಕಾರವಿಂದ ಕೆ.ಆರ್. ಕ್ಷೇತ್ರಕ್ಕೆ 6ಸಾವಿರ ಮನೆಗಳನ್ನು ನೀಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಏನಾಗಿತ್ತು’ ಎಂದು ಕಾಂಗ್ರೆಸ್‌ನವರನ್ನು ಟೀಕಿಸಿದರು.

‘ಮೋದಿಯಂತಹ ಪ್ರಧಾನಿಯಿಂದಾಗಿ ದೇಶವು ಸದೃಢವಾಗಿದೆ ಹಾಗೂ ಸಮೃದ್ಧಿಯಾಗಿಯೂ ನಿರ್ಮಾಣವಾಗಿದೆ’ ಎಂದರು.

ರಾಮದಾಸ್ ಕಾರ್ಯಕ್ಕೆ ಮೆಚ್ಚುಗೆ:

‘ಜನಪರವಾಗಿ ಕೆಲಸ ಮಾಡಿದಂತಹ ವ್ಯಕ್ತಿ ಆ ಕ್ಷೇತ್ರದ ಜನಪ್ರತಿನಿಧಿಯಾದಾಗ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ರಾಮದಾಸ್ ಉದಾಹರಣೆಯಾಗಿದ್ದಾರೆ. 6ಸಾವಿರ ಮನೆಗಳನ್ನು ಪ್ರಧಾನಿಯಿಂದ ತಂದ ಏಕೈಕ ಶಾಸಕ ಇವರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶುದ್ಧ ಹಸ್ತದ ಪ್ರತಿನಿಧಿ ಇದ್ದರಷ್ಟೇ ಸಾಲದು. ₹ 5 ಸಾವಿರ, ₹ 10ಸಾವಿರ ಪಡೆದರೆ, ಚುನಾವಣೆ ಬಂದಾಗ ನೀವೇನೋ ಕೊಟ್ಟಿಲ್ಲ; ನಾವೇ ರೊಕ್ಕ ಕೊಟ್ಟಿದ್ದೇವೆ ಎನ್ನುತ್ತಾರೆ. ಅಂತಹ ವ್ಯವಸ್ಥೆ ನಮ್ಮ ಕಾರ್ಯಕರ್ತರಿಂದ ಆಗಬಾರದು’ ಎಂದರು.‌

‘ಕೃಷ್ಣರಾಜ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ಎಲ್ಲ ಅನುದಾನವನ್ನೂ ಕೊಡಲಾಗುವುದು. ಇದುವರೆಗೆ ಜಿಲ್ಲೆಗೆ ₹ 278 ಕೋಟಿ ಬಿಡುಗಡೆ ಮಾಡಿದ್ದೇವೆ’ಎಂದುತಿಳಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಪಕ್ಷದ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ಪ್ರದಾನ ಕಾರ್ಯದರ್ಶಿ ನಾಗೇಂದ್ರ, ಓಂ ಶ್ರೀನಿವಾಸ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ಡಿ.ಎನ್.ರಾಣಿ, ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ, ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್‌ ಗಣೇಶ್ ಭೋವಿ, ರಾಜು, ಕೃಷ್ಣಯ್ಯ, ಎಇ ಹರೀಶ್, ಆಶ್ರಯ ಸಮಿತಿ ಸದಸ್ಯರಾದ ವಿದ್ಯಾಅರಸ್, ಹೇಮಂತ್ ಕುಮಾರ್, ಗೌರಿ ಇದ್ದರು.

ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣ!

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಮೋದಿ ಯುವ ಉತ್ಸವದ ವೇಳೆ ಮನೆ ಮನೆಗೆ ತೆರಳಿ ಯಾವ ಯಾವ ಯೋಜನೆಗಳಿಗೆ ಯಾರು ಅರ್ಹರು ಎಂಬುದನ್ನು ಗುರುತಿಸಿ ಲಂಚವಿಲ್ಲದೆ ತಲುಪಿಸಿದ್ದೇವೆ. ನಮ್ಮ ಕ್ಷೇತ್ರದಲ್ಲಿ ₹ 50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ’ ಎಂದರು.

‘ಪ್ಲಾಸ್ಟಿಕ್‌ ಅನ್ನು ಸಂಗ್ರಹಿಸಿ ಅದನ್ನು ಬೆಂಗಳೂರಿನಲ್ಲಿ ಕರಗಿಸಿ ಕ್ಲಿಸ್ಟರ್‌ಗಳನ್ನು ಮಾಡಿದ್ದು, ಅವುಗಳನ್ನು ಬಳಸಿ ₹ 4 ಕೋಟಿ ವೆಚ್ವದಲ್ಲಿ ನ್ಯಾಯಾಲಯದ ಎದುರಿನ ನರಸರಾಜ ರಸ್ತೆಯಲ್ಲಿ ಬಲ್ಲಾಳ್ ವೃತ್ತದವರೆಗೆ ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಸಿದ ರಾಜ್ಯದ ಮೊದಲ ರಸ್ತೆ ಮಾಡಿದ ಹೆಮ್ಮೆ ನಮ್ಮದು’ ಎಂದು ತಿಳಿಸಿದರು.

‘ಮನೆಗಳಿಗೆ ಹಕ್ಕುಪತ್ರ ಕೊಡಿಸುತ್ತೇವೆಂದು ಹೇಳಿ ₹5 ಸಾವಿರ, ₹ 6 ಸಾವಿರ ಪಡೆಯುತ್ತಿದ್ದಾರೆಂಬ ಆಡಿಯೊ ಬಂದಿದೆ. ಯಾರು ಹೀಗೆ ಪಡೆಯುತ್ತಿದ್ದೀರೋ ಅಂಥವರ ಮೇಲೆ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ದುಡ್ಡು ಕೊಟ್ಟಿದ್ದರೆ ಅಂಥವರ ಮನೆಯನ್ನು ರದ್ದು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT