ಶನಿವಾರ, ನವೆಂಬರ್ 28, 2020
17 °C
ಕೊರೊನಾ ಹಾವಳಿಯಿಂದ ನಡೆಯದ ಸಿಡ್ಲು ಮಲ್ಲಿಕಾರ್ಜುನನ ದೀವಟಿಗೆ ದೀಪಾವಳಿ: ಬೆಟ್ಟದಪುರ ಭಾಗದಲ್ಲಿ ನಿರಾಸೆ

ಬೆಳಕಿನ ವೈಭವಕ್ಕೆ ಕೋವಿಡ್ ಬ್ರೇಕ್‌

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬಲಿಪಾಡ್ಯಮಿಯಂದು (ದೀಪಾವಳಿ) ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಭಾಗದಲ್ಲಿ ನಡೆಯಲಿರುವ ‘ಸಿಡ್ಲು ಮಲ್ಲಿಕಾರ್ಜುನನ ದೀವಟಿಗೆ ದೀಪಾವಳಿ’ ಈ ಬಾರಿ ಆಚರಣೆಯಾಗುತ್ತಿಲ್ಲ.

ಇದರಿಂದ ಇದೇ ಮೊದಲ ಬಾರಿಗೆ ಬಲಿಪಾಡ್ಯಮಿಯ ರಾತ್ರಿಯಿಡಿ ಬೆಟ್ಟದಪುರ, ಬೆಟ್ಟದತುಂಗ, ತುಂಗದಕೊಪ್ಪಲು, ಕುಡಕೂರು, ಕುಡಕೂರು ಕೊಪ್ಪಲು ಸೇರಿದಂತೆ ಏಳು ಹಳ್ಳಿಗಳಲ್ಲಿ ಗೋಚರಿಸುತ್ತಿದ್ದ ದೀವಟಿಗೆಯ (ಪಂಜಿನ) ಬೆಳಕಿನ ವೈಭವ ಸೋಮ
ವಾರ ರಾತ್ರಿ ಕಿಂಚಿತ್‌ ರಾರಾಜಿಸದಾಗಿದೆ.

ತಮ್ಮ ಇಷ್ಟಾರ್ಥ ಈಡೇರಿಸಿದ ಸಿಡ್ಲು ಮಲ್ಲಿಕಾರ್ಜುನನಿಗೆ ದೀವಟಿಗೆ (ಪಂಜು) ಸೇವೆ ಸಲ್ಲಿಸುವ ಮೂಲಕ, ಹರಕೆ ತೀರಿಸಲಿಕ್ಕಾಗಿ ಮತ್ತೊಂದು ವರ್ಷದವರೆಗೂ ಕಾಯಬೇಕಲ್ಲಾ ಎಂಬ ಬೇಸರ ಒಂದೆಡೆಯಾದರೆ; ಜಾತಿ–ಧರ್ಮದ ಹಂಗಿಲ್ಲದೇ ಎಲ್ಲರೂ ಒಟ್ಟಾಗಿ ಕಲೆತು, ಬರಿಗಾಲಲ್ಲಿ ಕಾಲ್ನಡಿಗೆಯಲ್ಲೇ ಅಂದಾಜು 20 ಕಿ.ಮೀ. ಸುತ್ತುತ್ತಿದ್ದ ಪಂಜಿನ ಮೆರವಣಿಗೆ ಈ ಬಾರಿ ನಡೆಯುತ್ತಿಲ್ಲವಲ್ಲ ಎಂಬ ದುಗುಡ ಮತ್ತೊಂದೆಡೆ ಭಕ್ತ ಸಮೂಹದ ಮನವನ್ನು ಬಾಧಿಸುತ್ತಿದೆ.

‘ದೀವಟಿಗೆ ದೀಪಾವಳಿ ಯಾವಾಗ ಶುರುವಾಗಿದೆ ಎಂಬ ಐತಿಹ್ಯ, ಮಾಹಿತಿ ನಮಗ್ಯಾರಿಗೂ ಗೊತ್ತಿಲ್ಲ. ನಮ್ಮ ಮುತ್ತಾತ, ಅವರ ಪೂರ್ವಿಕರ ಕಾಲದಿಂದಲೂ ಏಳು ಹಳ್ಳಿಗಳ ಜನರು ಜಾತ್ಯತೀತರಾಗಿ, ಎಲ್ಲರೂ ಒಟ್ಟಾಗಿ ಕಲೆತು ಆಚರಿಸುವ ಹಬ್ಬವಿದು. ವರ್ಷಕ್ಕೊಮ್ಮೆ ಬೆಟ್ಟದಪುರ, ಬೆಟ್ಟದತುಂಗ, ಕುಡಕೂರಿನಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದ್ದ ದೀವಟಿಗೆ ಜಾತ್ರೆ ಈ ಬಾರಿ ಕೋವಿಡ್‌
ನಿಂದ ನಡೆಯುತ್ತಿಲ್ಲ. ಇದು ನಮ್ಮ ಭಾಗದ ಜನರ ಮನದಲ್ಲಿ ಬಹಳ ಬೇಸರ ಮೂಡಿಸಿದೆ’ ಎಂದು ಕುಡಕೂರಿನ ಲಕ್ಷ್ಮೀಕಾಂತರಾಜೇ ಅರಸು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಲಿಪಾಡ್ಯಮಿಯ ಮಧ್ಯಾಹ್ನ ಬೆಟ್ಟದಿಂದ ಭ್ರಮರಾಂಬ ದೇವಿ ಸಮೇತ ಮೆರವಣಿಗೆ ಹೊರಡುತ್ತಿದ್ದ ಸಿಡ್ಲು ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿ ಏಳು ಹಳ್ಳಿಗಳಿಗೂ ಭೇಟಿ ನೀಡುತ್ತಿತ್ತು. ದೇವರ ಮೆರವಣಿಗೆಗೂ ಮುನ್ನ ಬಸವನ ಬೆಳ್ಳಿಯ ಮೂರ್ತಿ ಊರು ಪ್ರವೇಶಿಸು
ತ್ತಿತ್ತು. ಹರಕೆ ಹೊತ್ತವರು ಒಂದೊಂದು ದೀವಟಿಗೆಯನ್ನು ಹಿಡಿದು ದೇವರ ಮೆರವಣಿಗೆ ಹಿಂದೆ ಸಾಗುತ್ತಿದ್ದರು.’

‘ಮುಸ್ಸಂಜೆಯ ವೇಳೆಗೆ ದೀವಟಿಗೆ ಮೆರವಣಿಗೆ ಕುಡಕೂರು ಪ್ರವೇಶಿಸುತ್ತಿತ್ತು. ರಾತ್ರಿ 10ರ ಬಳಿಕ ಬೆಟ್ಟದಪುರದತ್ತ ಸಾಗುತ್ತಿತ್ತು. ನಸುಕಿ
ನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯುವ ಮೂಲಕ ದೀವಟಿಗೆ ದೀಪಾವಳಿಗೆ ತೆರೆ ಬೀಳುತ್ತಿತ್ತು. ಪ್ರತಿ ಊರಿನ ಮನೆಗಳ ಮುಂದೆ ಚಪ್ಪರದ ಸಿಂಗಾರ, ರಂಗೋಲಿಯ ಚಿತ್ತಾರ ಕಣ್ಮನ ಸೆಳೆಯುತ್ತಿತ್ತು. ಊರು ಪ್ರವೇಶಿಸುತ್ತಿದ್ದಂತೆ ವಿಶೇಷ ಖಾದ್ಯ ‘ಚಿರೋಟಿ’ಯ ಘಮಲು ಮೂಗಿಗೆ ಬಡಿಯುತ್ತಿತ್ತು. ಸಾವಿರಕ್ಕೂ ಹೆಚ್ಚು ಭಕ್ತರು ದೀವಟಿಗೆ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಚಿರೋಟಿಯ ಘಮಲು ಬಿಟ್ಟರೇ ಬೆಳಕಿನ ವೈಭವ, ದೀವಟಿಗೆ ದೀಪಾವಳಿಯ ಸಂಭ್ರಮವೇ ಕಾಣದಂತಾಗಿದೆ’ ಎಂದು ಸಂಜೀವರಾಜೇ ಅರಸು ಬೇಸರ ವ್ಯಕ್ತಪಡಿಸಿದರು.

ಸಂಪ್ರದಾಯ ಪಾಲನೆ

ಕೋವಿಡ್‌ ಹರಡುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಆಡಳಿತ ಹಾಗೂ ದೇಗುಲದ ಆಡಳಿತ ಮಂಡಳಿ, ತಲೆತಲಾಂತರದಿಂದಲೂ ನಡೆದು ಬಂದಿದ್ದ ಸಂಪ್ರದಾಯ ಪಾಲನೆಯನ್ನು ಈ ಬಾರಿ ಕೈಬಿಟ್ಟಿರುವುದು, ಈ ಭಾಗದ ಅಸಂಖ್ಯಾತ ಭಕ್ತರ ಮನದಲ್ಲಿ ಬೇಸರ ಮೂಡಿಸಿದೆ.

ಬೆಟ್ಟದಲ್ಲಿನ ದೇಗುಲದ ಪ್ರಾಂಗಣದಲ್ಲೇ ಸಾಂಕೇತಿಕವಾಗಿ ದೀವಟಿಗೆ ದೀಪಾವಳಿಯ ಉತ್ಸವ ನಡೆಯಲಿದೆ. ಆದರೆ ಯಾವೊಬ್ಬ ಭಕ್ತರಿಗೂ ಪ್ರವೇಶವಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ಕೆಲವರಷ್ಟೇ ಸಾಂಕೇತಿಕವಾಗಿ ನಡೆಯಲಿರುವ ಈ ಉತ್ಸವದಲ್ಲಿ ಮಾಸ್ಕ್‌ ಧರಿಸಿ, ಕನಿಷ್ಠ ಅಂತರ ಕಾಪಾಡಿಕೊಂಡು ಪಾಲ್ಗೊಳ್ಳಲಿದ್ದಾರೆ ಎಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.