ಶನಿವಾರ, ಅಕ್ಟೋಬರ್ 16, 2021
22 °C

ಮೈಮರೆಸುವ ದಸರಾ ದೀಪಾಲಂಕಾರವೇ ಸೊಗಸು: ದಸರಾ ನೆನಪಿನಲ್ಲಿ ನಟಿ ರಾಧಿಕಾ ಚೇತನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಸರಾ ಹಬ್ಬ ಬಂದರೆ ಸಾಕು ಒಂಬತ್ತು ದಿನ ಇಡೀ ಮೈಸೂರೇ ಝಗಮಗಿಸುತ್ತದೆ. ಸಂಜೆಯಾಗುತ್ತಿದ್ದಂತೆ ದೀಪಾಲಂಕಾರ ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ನಟಿ ರಾಧಿಕಾ ಚೇತನ್‌

ದಸರಾ ಹಬ್ಬ ಬಂದರೆ ಸಾಕು ಒಂಬತ್ತು ದಿನ ಇಡೀ ಮೈಸೂರೇ ಝಗಮಗಿಸುತ್ತದೆ. ಸಂಜೆಯಾಗುತ್ತಿದ್ದಂತೆ ದೀಪಾಲಂಕಾರ ನೋಡುವುದೇ ಕಣ್ಣಿಗೆ ಹಬ್ಬ.

ನಾನು ಉಡುಪಿಯಲ್ಲಿ ಹುಟ್ಟಿದ್ದು, ಮೈಸೂರಿನಲ್ಲಿ ಬೆಳೆದದ್ದು. ಎಲ್‌ಕೆಜಿಯಿಂದ ಎಂಜಿನಿಯರಿಂಗ್‌ವರೆಗೂ ಇಲ್ಲಿಯೇ ವಿದ್ಯಾಭ್ಯಾಸ ಆಯಿತು. ಪ್ರತಿ ವರ್ಷವೂ ಸ್ನೇಹಿತರೊಂದಿಗೆ ವಸ್ತು ಪ್ರದರ್ಶನಕ್ಕೆ ಹೋಗುತ್ತಿದ್ದೆ. ಬೇರೆ ಬೇರೆ ರಾಜ್ಯಗಳಿಂದ ಕುಶಲಕರ್ಮಿಗಳು ಬಂದಿರುತ್ತಿದ್ದರು. ಬಗೆಬಗೆ ಉಡುಪುಗಳು, ಆಲಂಕಾರಿಕ ವಸ್ತುಗಳು, ಆಭರಣಗಳನ್ನು ಖರೀದಿಸುತ್ತಿದ್ದೆವು; ಸುತ್ತಾಟ ಬೇಸರವಾದರೆ ಆಟವಾಡುತ್ತಿದ್ದೆವು. ತರಹೇವಾರಿ ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದೆವು. ಒಂದೇ ಸ್ಥಳದಲ್ಲಿ ಎಲ್ಲವೂ ಸಿಗುತ್ತಿತ್ತು.

ನಗರವೇ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ರಸ್ತೆಗಳು, ವೃತ್ತಗಳು ಹಾಗೂ ಪಾರಂಪರಿಕ ಕಟ್ಟಡಗಳಿಗೆ ಮಾಡಿದ ಅಲಂಕಾರವನ್ನು ನೋಡುತ್ತಿದ್ದೆವು. ಚಾಮುಂಡಿ ಬೆಟ್ಟಕ್ಕೆ ಹೋಗಿ ಮೈಸೂರು ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವುದು ನಮಗೆ ಖುಷಿ ತರುತ್ತಿತ್ತು.

ಪಿಯುಸಿಯಲ್ಲಿದ್ದಾಗ ಒಮ್ಮೆ ಸಂಬಂಧಿಕರೊಂದಿಗೆ ಅಂಬಾರಿ ಮೆರವಣಿಗೆ ನೋಡಲು ಕೆ.ಆರ್‌.ವೃತ್ತಕ್ಕೆ ಹೋಗಿದ್ದೆ. ಸಿಕ್ಕಾಪಟ್ಟೆ ಜನರಿದ್ದರು, ನೂಕುನುಗ್ಗಲಿನಲ್ಲಿ‌‌ ಬೈಕ್ ಪಾರ್ಕಿಂಗ್‌ಗೆ ಪರದಾಡಿದ್ದೆವು. ಆ ದಟ್ಟಣೆಯಲ್ಲಿ ಜಂಬೂಸವಾರಿ ಕಣ್ತುಂಬಿಕೊಂಡಿದ್ದು ಮರೆಯಲಾಗದ ಕ್ಷಣ. ಸ್ನೇಹಿತರೊಂದಿಗೆ ಸುತ್ತಾಡುತ್ತಿದ್ದರೆ ಮನಸ್ಸಿಗೆ ಖುಷಿಯಾಗುತ್ತಿತ್ತು.

ವಿದೇಶಿಗರು ಬಂದು ದಸರಾ ನೋಡುತ್ತಾರೆ, ಇಲ್ಲಿನ ಸಂಸ್ಕೃತಿ, ಆಚರಣೆಗಳನ್ನು ಮೆಚ್ಚಿಕೊಂಡು ಹೋಗುತ್ತಾರೆ. ಆದರೀಗ ಕೋವಿಡ್‌ನಿಂದ ಎಲ್ಲವನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ.

ಈಗಲೂ ಮನೆಯಲ್ಲಿ ದಸರಾ ಆಚರಣೆ ಅದ್ಧೂರಿಯಾಗಿ ಮಾಡುತ್ತೇವೆ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತೇವೆ. ಸಿನಿಮಾ ನಟಿಯಾದ ಮೇಲೆ ದಸರಾಕ್ಕೆ ಬಂದಿಲ್ಲ. ಆದರೆ, ತಪ್ಪದೇ ಟಿ.ವಿ.ಯಲ್ಲಿ ನೇರಪ್ರಸಾರ ವೀಕ್ಷಿಸುತ್ತೇನೆ. ಹಳೆಯ ನೆನಪುಗಳು ಮರುಕಳಿಸುತ್ತವೆ.

–ರಾಧಿಕಾ ಚೇತನ್‌, ಚಲನಚಿತ್ರ ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು