ಮಂಗಳವಾರ, ಅಕ್ಟೋಬರ್ 20, 2020
22 °C

‘ಸಂಶೋಧನಾ ವಿವಿ’ ಮಾನ್ಯತೆ ನೀಡಲಿ: ಮೈಸೂರು ವಿ.ವಿ ಕುಲಪತಿ ಹೇಮಂತಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಂಶೋಧನಾ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ‘ಸಂಶೋಧನಾ ವಿಶ್ವವಿದ್ಯಾಲಯ’ ಎಂಬ ಮಾನ್ಯತೆ ನೀಡಬೇಕು ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಹೇಳಿದರು.

ಹಲವು ವಿಶ್ವವಿದ್ಯಾಲಯಗಳ ಪರಿಣಿತರು ಸೇರಿ ರಚಿಸಿರುವ ’ಕೋವಿಡ್-19' ಕೃತಿ ಬಿಡುಗಡೆ ಮತ್ತು ಕೊರೊನಾ ಸೇನಾನಿಗಳಿಗೆ ಸೋಮವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್‌ಐಆರ್‌ಎಫ್‌ ವಾರ್ಷಿಕ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೈಸೂರು ವಿವಿ ದೇಶದಲ್ಲಿ 27ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇವಲ ಶೇ 48 ರಷ್ಟು ಕಾಯಂ ಬೋಧಕರಿದ್ದೂ ಈ ಸಾಧನೆ ಮಾಡಿರುವುದು ಮೆಚ್ಚುವಂತಹ ವಿಷಯ ಎಂದರು.

ಶೇ 100 ರಷ್ಟು ಕಾಯಂ ಬೋಧಕರು ಇದ್ದರೆ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಿ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ಸಾಧ್ಯ. ಮೈಸೂರು ವಿ.ವಿಯನ್ನು ಸಂಶೋಧನಾ ವಿವಿ ಎಂಬುದಾಗಿ ಪರಿಗಣಿಸುವಂತೆ ಕೋರಿ ಯುಜಿಸಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ಕಲ್ಪಿಸಿಲ್ಲ. ಸಂಶೋಧಕರಿಗೆ ಹಣಕಾಸಿನ ನೆರವು ಒಳಗೊಂಡಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದೆ. ಬಿರುಗಾಳಿಯನ್ನು ತಡೆಯುವಂತಹ ತಂತ್ರಜ್ಞಾನ ನಮ್ಮಲ್ಲಿ ಇದೆ. ಆದರೆ ಕೊರೊನಾ ವೈರಾಣು ತಡೆಗಟ್ಟುವಲ್ಲಿ ಸೋತಿದ್ದೇವೆ. ವಿಜ್ಞಾನವು ಪ್ರತಿಯೊಬ್ಬರ ಜೀವನ ಶೈಲಿಯಾಗಬೇಕು. ಹಾಗಾದಲ್ಲಿ ಈ ರೀತಿಯ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.

ರಷ್ಯಾದ ಸಂಶೋಧನಾ ವಿಜ್ಞಾನಿ ಡಾ.ಸೈಯದ್ ಬೇಕರ್, ಮೈಸೂರು ವಿವಿ ಸೂಕ್ಷ್ಮ ಜೀವ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಸ್.ಸತೀಶ್, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ನಾಗೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.