ಸೋಮವಾರ, ಏಪ್ರಿಲ್ 12, 2021
25 °C
ಸಾ.ರಾ.ಮಹೇಶ್‌, ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಜಿ.ಟಿ.ದೇವೇಗೌಡ

‘ಶಕುನಿ’ ಮಾತಿನಿಂದ ಜೆಡಿಎಸ್‌ ನಾಶ: ಜಿ.ಟಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮೈಮುಲ್‌ ಚುನಾವಣೆಗೆ ಸಂಬಂಧಿಸಿದಂತೆ, ಶಕುನಿ ಮಾತು ಕೇಳಿಕೊಂಡು ಕುಮಾರಸ್ವಾಮಿ ಜೆಡಿಎಸ್‌ ಬೆಂಬಲಿತರ ವಿರುದ್ಧವೇ  ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ಸಿಗರಿಗೆ ಸಹಕಾರ ನೀಡಿದ್ದಾರೆ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಮುಂಡಿಬೆಟ್ಟದಲ್ಲಿ ಸ್ವಪಕ್ಷೀಯ ವರಿಷ್ಠರ ವಿರುದ್ಧವೇ ಕಿಡಿಕಾರಿದರು.

‘ಪಿರಿಯಾಪಟ್ಟಣದಲ್ಲಿ ಜೆಡಿಎಸ್‌ ಶಾಸಕ ಕೆ.ಮಹದೇವ್‌ ಪುತ್ರನನ್ನು ಸೋಲಿಸಬೇಕೆಂಬ ಹಟಕ್ಕೆ ಬಿದ್ದು, ಕಾಂಗ್ರೆಸ್‌ನ ಮಾಜಿ ಶಾಸಕ ವೆಂಕಟೇಶ್‌ ಬೆಂಬಲಿಗರ ಪರ ಕುಮಾರಸ್ವಾಮಿ ಮತ ಯಾಚಿಸಿದ್ದಾರೆ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು. ರಾಮಾಯಣದಲ್ಲಿ ಮಂಥರೆಯ ಮಾತನ್ನು ಕೈಕೇಯಿ ಕೇಳಿದ್ದರಿಂದ ರಾಮ ವನವಾಸಕ್ಕೆ ತೆರಳುವಂತಾಯಿತು. ಇದೀಗ ಮೈಸೂರಿನಲ್ಲೂ ಶಕುನಿಯ ಮಾತು ಕೇಳಿಕೊಂಡು ಜೆಡಿಎಸ್‌ ಸರ್ವನಾಶಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ’ ಎಂದು ಜಿಟಿಡಿ, ಶಾಸಕ ಸಾ.ರಾ.ಮಹೇಶ್‌ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.

ಜೆಡಿಎಸ್‌ನಲ್ಲೇ ಇರುವೆ: ‘ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯಲ್ಲೇ ಕುಳಿತುಕೊಳ್ಳುತ್ತಿರುವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಮೈಸೂರಿನ ‘ಹೈಕಮಾಂಡ್’ ಮಾತು ಕೇಳಿಕೊಂಡು ನನ್ನನ್ನು ಟೀಕಿಸುತ್ತಿದ್ದಾರೆ’ ಎಂದು ಜಿ.ಟಿ.ದೇವೇಗೌಡ, ಜೆಡಿಎಸ್‌ ಬಾಗಿಲು ಬಂದ್‌ ಆಗಿದೆ ಎಂದಿರುವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

‘ಶಕುನಿ ಮಾತು ಕೇಳಿಕೊಂಡು ಪದೇ ಪದೇ ನನಗೆ ಯಾಕೆ ಅವಮಾನ ಮಾಡುತ್ತಿದ್ದೀರಿ. ಸಾ.ರಾ. ಛತ್ರದಲ್ಲಿ ಜೆಡಿಎಸ್‌ನಿಂದ ನನ್ನನ್ನು ಹೊರಗೆ ಹಾಕುತ್ತೇನೆ ಎಂದಿದ್ದೀರಿ. ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್‌ನಲ್ಲೇ ಕೂಡಿ ಬೀಗ ಹಾಕಲಾಗಿದೆ’ ಎಂದು ಜಿಟಿಡಿ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟಿಲ್ಲ. ಮನಸ್ಸು ಮಾಡಿದ್ದರೆ ಶಾಶ್ವತವಾಗಿ ಮೈಮುಲ್ ಅಧ್ಯಕ್ಷನಾಗಿರುತ್ತಿದ್ದೆ. ಯಾವ ಕಾಲದಲ್ಲೋ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತಿದ್ದೆ. ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಹಕಾರ ಕೊಡಲಿಲ್ಲ. ಜನರ ಆಶೀರ್ವಾದದಿಂದ ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ. ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆಯ ಫಲಿತಾಂಶ ನಿರ್ಣಯಿಸಲಿದೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಗುಡುಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು