ಶನಿವಾರ, ಮೇ 21, 2022
19 °C

ದೇವರಾಜ ಮಾರುಕಟ್ಟೆ ಮೈಸೂರಿನ ಅಸ್ಮಿತೆ: ರಾಜವಂಶಸ್ಥ ಯದುವೀರ ಒಡೆಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದೇವರಾಜ ಮಾರುಕಟ್ಟೆ ಉಳಿಸಲು ಆಗ್ರಹಿಸಿ ವರ್ತಕರು ಬುಧವಾರ ನಡೆಸಿದ ಪ್ರತಿಭಟನೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಿಕ್ಕಗಡಿಯಾರದ ಆವರಣದಲ್ಲಿ ಚಾಲನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ ಈ ಪ್ರತಿಭಟನೆ ಆಯೋಜಿಸಿತ್ತು.

ಬಳಿಕ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆಗೆ 100 ವರ್ಷ ಆಗಿದೆ. ಇದನ್ನು ಕೆಡವಬೇಕು ಎನ್ನುತ್ತಾರೆ. ಆದರೆ ಮೈಸೂರು ಅರಮನೆಯನ್ನು ಕಟ್ಟಿ 100 ವರ್ಷದ ಮೇಲಾಗಿದೆ. ಈಗ ಅರಮನೆ ಕೆಡವಿ ಬೇರೆ ಕಟ್ಟಲು ಆಗುತ್ತದಾ? ಮೈಸೂರಿನ ಸಾಂಸ್ಕೃತಿಕ ಪಾರಂಪರಿಕ ಕಟ್ಟಡಗಳ ಜೊತೆ ಈ ಮಾರುಕಟ್ಟೆಯೂ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಉಳಿಯುತ್ತದೆಯೇ ಎಂದೂ ಪ್ರಶ್ನಿಸಿದರು.

ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಕೂಡಾ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ನಮ್ಮ ವಂಶದ ಖಾಸಗಿ ಆಸ್ತಿಗಳ ನವೀಕರಣ ಅದು ಬೇರೆ ವಿಚಾರ. ಆದರೆ ಸಾರ್ವಜನಿಕ ಕಟ್ಟಡಗಳದ್ದು ಬೇರೆ ವಿಚಾರ. ಅರಮನೆಯ ಆಸ್ತಿಯ ವಿಚಾರಕ್ಕೂ ಸಾರ್ವಜನಿಕ ಪಾರಂಪರಿಕ ಕಟ್ಟಡಗಳಿಗೂ ಸಂಬಂಧ ಕಲ್ಪಿಸಬೇಡಿ ಎಂದು ಹೇಳಿದರು.

ದೇವರಾಜ ಮಾರುಕಟ್ಟೆ ನಮ್ಮ ವ್ಯಾಪ್ತಿಗೆ ಕೊಟ್ಟರೇ ನಾವೇ ಪುನಶ್ಚೇತನ ಮಾಡುತ್ತೇವೆ ಎಂಬ ಪ್ರಮೋದಾದೇವಿ ಒಡೆಯರ್ ಹೇಳಿಕೆ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನು ಅವರ ಬಳಿಯೇ ಕೇಳಿ ಎಂದರು. 

ನಂತರ ವರ್ತಕರು ಮಾರುಕಟ್ಟೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಹೊರಟರು.

ಕೈಮುಗಿದು ಬೇಡುವೆ ಎಲ್ಲರೂ ಶಾಂತಿಯಿಂದ ಇರಿ

ರಾಜ್ಯದಲ್ಲಿ ಕೋಮು ಸಂಘರ್ಷ ಕದಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಎಲ್ಲರಿಗೂ ಕೈಮುಗಿದು ಬೇಡುತ್ತೇನೆ ಶಾಂತಿಯಿಂದ ಇರಿ ಎಂದು ಮನವಿ ಮಾಡಿದರು

ದೇವರಾಜ ಮಾರುಕಟ್ಟೆ ಮೈಸೂರಿನ ಅಸ್ಮಿತೆ

ದೇವರಾಜ ಮಾರುಕಟ್ಟೆ ಮೈಸೂರಿನ ಅಸ್ಮಿತೆಯಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮೈಸೂರಿನ ಪ್ರತಿಯೊಬ್ಬರ ಹೃದಯಕ್ಕೂ ಇದು ಹತ್ತಿರವಾಗಿದೆ. ನಮ್ಮ ಪೂರ್ವಜರು ಕಟ್ಟಿದ ಪಾರಂಪರಿಕ ಕಟ್ಟಡಗಳನ್ನ ನೋಡಿ ನಾವು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರಿನ‌ ಕಲೆ, ಇದನ್ನೇ ನಮ್ಮ‌ ಮುಂದಿನ ಪೀಳಿಗೆಗೆ ಕೊಡಬೇಕಿದೆ. ಈ ಪರಂಪರೆಯನ್ನು ಕಾಪಾಡದಿದ್ರೆ ಮೈಸೂರಿನ ಅಸ್ಮಿತೆ ಉಳಿಯುವುದಿಲ್ಲ‌.  ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸಬಹುದು ಎಂದು ತಜ್ಞರು ಹೇಳಿದ್ದಾರೆ ಒಂದು ಪ್ರತಿಪಾದಿಸಿದರು.

ಪಾರಂಪರಿಕ ಸಮಿತಿಯಲ್ಲಿ ಯಾರು ಇರಬೇಕಿತ್ತೋ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸಿ ಅನುಮೋದನೆ ಪಡೆಯಲಾಗಿದೆ ಎಂದು ದೂರಿದ ಅವರು ಪಾರಂಪರಿಕ ಕಟ್ಟಡಗಳ ಉಳಿವಿಗೆ ಸದಾ ನನ್ನ ಬೆಂಬಲ. ನೂರಕ್ಕೆ‌ ನೂರು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ವರ್ತಕರಿಗೆ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು