ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮಾಡಿ ಮದುವೆ ಮಾಡಬೇಡಿ: ಜಿಟಿಡಿ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸತಿ–ಪತಿಗಳಾದ 14 ಜೋಡಿ
Last Updated 15 ಮಾರ್ಚ್ 2021, 13:05 IST
ಅಕ್ಷರ ಗಾತ್ರ

ಮೈಸೂರು: ‘ಸಾಲ ಮಾಡಿ ಮದುವೆಯನ್ನು ಮಾಡಲೇಬೇಡಿ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಮುಂಡಿಬೆಟ್ಟದಲ್ಲಿ ತಿಳಿಸಿದರು.

ಮುಜರಾಯಿ ಇಲಾಖೆಯ ‘ಸಪ್ತಪದಿ’ ಉಚಿತ ಸರಳ ಸಾಮೂಹಿಕ ವಿವಾಹ ಯೋಜನೆಯಡಿ ಸತಿ–ಪತಿಗಳಾದ 14 ಜೋಡಿಗೂ ಶುಭ ಹಾರೈಸಿ ಮಾತನಾಡಿದ ಶಾಸಕರು, ‘ಸರ್ಕಾರದ ಇಂತಹ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೇಗುಲದಲ್ಲಿ ಮದುವೆಯಾಗುವುದು ಪುಣ್ಯದ ಕಾರ್ಯ. ಹೆಚ್ಚೆಚ್ಚು ಜನರು ಸರ್ಕಾರದ ಈ ಯೋಜನೆಯಲ್ಲಿ ಭಾಗಿಯಾಗಬೇಕು. ಮದುವೆಗಾಗಿ ಸಾಲ ಮಾಡಿ, ಸಾಲ ತೀರಿಸಲಾಗದೆ ಸಾಯಬೇಡಿ’ ಎಂಬ ಎಚ್ಚರಿಕೆಯ ಮಾತುಗಳನ್ನು ತಿಳಿಸಿದರು.

‘ನಾನು ನನ್ನ ಮಕ್ಕಳ ಮದುವೆಯನ್ನು ತಿರುಪತಿಯಲ್ಲಿ ನಡೆದ ಸರಳ, ಸಾಮೂಹಿಕ ವಿವಾಹದಲ್ಲಿ ಮಾಡಿದೆ. ಹುಣಸೂರು ತಾಲ್ಲೂಕಿನಲ್ಲಿ ಸರಳ, ಸಾಮೂಹಿಕ ವಿವಾಹಗಳನ್ನು ನಡೆಸಿದ್ದೇ. ಪ್ರಸ್ತುತ ದಿನಗಳಿಗೆ ಸಾಮೂಹಿಕ ವಿವಾಹ ಒಳ್ಳೆಯದು’ ಎಂದು ಜಿ.ಟಿ.ದೇವೇಗೌಡ ಹೇಳಿದರು.

‘ದಾಂಪತ್ಯಕ್ಕೆ ಕಾಲಿಟ್ಟವರು ತಂದೆ–ತಾಯಿ, ಅತ್ತೆ–ಮಾವನನ್ನು ಗೌರವದಿಂದ ಕಾಣಬೇಕು. ಸಮಾನರಾಗಿ ನೋಡಬೇಕು. ಎದುರಾಗುವ ಕಷ್ಟಗಳಿಗೆ ಅಂಜದೆ ಸತಿ–ಪತಿಗಳಾಗಿ ಕೊನೆಯವರೆಗೂ ಬಾಳಬೇಕು. ಕುಟುಂಬವನ್ನು ನಂದಗೋಕುಲವನ್ನಾಗಿ ಮಾಡಬೇಕು’ ಎಂದು ವಧು–ವರರಿಗೆ ಕಿವಿಮಾತು ತಿಳಿಸಿದರು.

ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್‌ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್‌, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್‌ ಹಂಚೆ, ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಎನ್‌.ವಿ.ಫಣೀಶ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್.ಮಹದೇವಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್‌, ಉಪಾಧ್ಯಕ್ಷೆ ತುಳಸಿ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ಸಪ್ತಪದಿ ?

‘ಸಪ್ತಪದಿ’ ಉಚಿತ ಸರಳ ಸಾಮೂಹಿಕ ವಿವಾಹ ಯೋಜನೆಯಡಿ ಏಪ್ರಿಲ್‌ 22ರಂದು ಹಾಗೂ ಜುಲೈ 7ರಂದು ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ, ಮೇ 13ರಂದು ತಲಕಾಡಿನ ವೈದ್ಯನಾಥೇಶ್ವರನ ಸನ್ನಿಧಿಯಲ್ಲಿ, ಜೂನ್‌ 17ರಂದು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮದುವೆ ನಡೆಯಲಿವೆ.

ಆಸಕ್ತರು, ಅರ್ಹರು ನೋಂದಾಯಿಸಿಕೊಳ್ಳಬಹುದು ಎಂದು ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ವೇದಿಕೆಯಲ್ಲೇ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT