ಶನಿವಾರ, ಜೂನ್ 25, 2022
24 °C
ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸದೇ ಹೋದರೂ ಕನಿಷ್ಠ ರೈತರ ನೋವನ್ನು ಬಿಎಸ್‌ವೈ ಆಲಿಸುತ್ತಾರೆ

ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಸರಿ ಅಲ್ಲ: ಬಡಗಲಪುರ ನಾಗೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾದಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಕೈಗೊಂಡ ರೈತ ವಿರೋಧಿ ನಿರ್ಧಾರಗಳಿಂದ ಅವರ ಮೇಲೆ ಸಿಟ್ಟಿದೆ. ಹಾಗೆಯೇ ವೈಯಕ್ತಿಕವಾಗಿ ಅವರ ಬಗ್ಗೆ ಗೌರವವೂ ಇದೆ. ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸದೇ ಹೋದರೂ, ಕನಿಷ್ಠ ರೈತರ ನೋವನ್ನು ಆಲಿಸುತ್ತಾರೆ. ರೈತರ ಬಗ್ಗೆ ಭಾವಾನಾತ್ಮಕವಾದ ಸಂಬಂಧ ಹೊಂದಿದ್ದಾರೆ. ಬಹಳ ದೀರ್ಘವಾದ ಅನುಭವವೂ ಅವರಿಗಿದೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆಯ ಮಾತುಗಳನ್ನಾಡಬಾರದು. ಇವರೇ ರಾಜೀನಾಮೆ ನೀಡುತ್ತೇನೆ ಎಂದರೆ ಇವರ ಸೂಚನೆಯನ್ನು ಯಾರೂ ಪಾಲಿಸುವುದಿಲ್ಲ. ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಎಲ್ಲ ಪಕ್ಷದವರು, ಸಂಘಟನೆಗಳು ಹಾಗೂ ಪರಿಣತರು ಸೇರಿ ಒಟ್ಟಾಗಿ ಒಂದು ರಾಷ್ಟ್ರೀಯ ಸರ್ಕಾರ ಸ್ಥಾಪಿಸಿ, ಕೊರೊನಾ ಸಂಕಷ್ಟವನ್ನು ಎದುರಿಸಬೇಕು ಎಂದು ಅವರು ಸಲಹೆ ನೀಡಿದರು.

ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ!

ರಾಜ್ಯ ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ. ಇವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಘೋಷಿಸಲಿದೆ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆ ಇದೆ. ರಸಗೊಬ್ಬರದ ಹಳೆಯ ದಾಸ್ತಾನಿಗೆ ಹೊಸ ದರ ಪಡೆಯಲಾಗುತ್ತಿದೆ. ರಾಣೆಬೆನ್ನೂರು, ಹರಿಹರ ಭಾಗಗಳಲ್ಲಿ ಕಳಪೆ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದೆ. ಕೃಷಿ ಸಚಿವರ ತವರು ಹಾವೇರಿ ಜಿಲ್ಲೆಯಲ್ಲೇ ಹೆಚ್ಚಿನ ಸಮಸ್ಯೆ ಇದೆ. ಕೃಷಿ ಸಚಿವರು ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹರಿಹಾಯ್ದರು.

ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ, ತೋಟಗಾರಿಕೆ, ಸಹಕಾರ ಸಚಿವರು ಕೂಡಲೇ ಜಿಲ್ಲಾಮಟ್ಟದಲ್ಲಿ ರೈತರೊಂದಿಗೆ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಕೊರೊನಾದಿಂದ ಕೃಷಿ ಕ್ಷೇತ್ರಕ್ಕೆ ಆಗಿರುವ ನಷ್ಟವನ್ನು ಅಂದಾಜು ಮಾಡಲು ಸರ್ಕಾರ ಕೂಡಲೇ ತಜ್ಞರ ಸಮಿತಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು