ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ರಂಗಭೂಮಿ; ನಾಟಕಗಳ ಸುಗ್ಗಿ

ಕಲಾವಿದರಲ್ಲಿ ಹೊಸ ಚೈತನ್ಯ; ರಂಗಾಯಣ, ನಟನ, ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನ
Last Updated 28 ನವೆಂಬರ್ 2020, 5:32 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌–19ನಿಂದಾಗಿ ರಂಗಭೂಮಿ ಮೇಲೆ ಕವಿದಿದ್ದ ಕಾರ್ಮೋಡ ಸರಿಯುತ್ತಿದ್ದು, ರಂಗ ಚಟುವಟಿಕೆಗಳು ಗರಿಗೆದರುತ್ತಿವೆ. ರಂಗಾಯಣ, ನಟನದಂತಹ ಸಂಸ್ಥೆಗಳಲ್ಲಿ ನಾಟಕಗಳ ಪ್ರದರ್ಶನ ಈಗಾಗಲೇ ಆರಂಭಗೊಂಡಿದ್ದು, ರಂಗಾಸಕ್ತರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಹವ್ಯಾಸಿ ಕಲಾವಿದರು ಸಹ ನಾಟಕ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ.

ಎಂಟು ತಿಂಗಳಿಂದ ಬಣ್ಣದ ಸಾಂಗತ್ಯದಿಂದ ದೂರವಿದ್ದ ಕಲಾವಿದರ ಮಾನಸಿಕ ಯಾತನೆ ಹೇಳತೀರದ್ದು. ಅದರಲ್ಲೂ ರಂಗಭೂಮಿಯನ್ನೇ ವೃತ್ತಿಯನ್ನಾಗಿಸಿಕೊಂಡ ಕಲಾವಿದರಿಗೆ ಬಣ್ಣದಿಂದ ದೂರ ಉಳಿಯುವುದು ತುಸು ಕಷ್ಟವೇ ಆಗಿತ್ತು. ಈಗ ಮೈಸೂರಿನಲ್ಲಿ ರಂಗಚಟುವಟಿಕೆಗಳು ಆರಂಭ ಆಗುತ್ತಿರುವುದರಿಂದ ಕಲಾವಿದರಲ್ಲಿ ಹೊಸ ಹುರುಪು ಮೂಡಿದೆ.

ಲಾಕ್‌ಡೌನ್‌ ನಿಯಮಗಳು ಸಡಿಲಿಕೆ ಆಗುತ್ತಿದ್ದಂತೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ನಟನ ಸಂಸ್ಥೆಯು ರಂಗಚಟುವಟಿಕೆಗಳಿಗೆ ಮರು ಚಾಲನೆ ನೀಡಿತ್ತು. ನಟನ ರಂಗಶಾಲೆಯ ವಿದ್ಯಾರ್ಥಿಗಳು ಐದು ನಾಟಕಗಳನ್ನು ಪ್ರದರ್ಶಿಸಿರುವುದು ಗಮನಾರ್ಹ ಸಂಗತಿ. ಈಗ ರಂಗಾಭಿನಯಕ್ಕೆ ಸಂಬಂಧಿಸಿದ ಮೂರು ತಿಂಗಳ ಡಿಪ್ಲೊಮಾ ಕೋರ್ಸ್‌ಗೂ ಸಹ ಅರ್ಜಿ ಆಹ್ವಾನಿಸಿದೆ.

‘ನಾವು ರಿಸ್ಕ್‌ ತೆಗೆದುಕೊಂಡು ನಾಟಕಗಳ ಪ್ರದರ್ಶನಕ್ಕೆ ಮುಂದಾದೆವು. ಅಂತರ ಪಾಲನೆ, ಮಾಸ್ಕ್‌ ಧರಿಸುವಿಕೆ, ಸ್ಯಾನಿಟೈಸರ್‌ ಬಳಕೆ, ಥರ್ಮಲ್‌ ಸ್ಕ್ಯಾನಿಂಗ್‌ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತು ನೀಡಿದೆವು. ನಮ್ಮ ವಿದ್ಯಾರ್ಥಿಗಳು ಉತ್ಸಾಹದಿಂದಲೇ ತಾಲೀಮು ನಡೆಸಿದರು. ರಬ್ಡಿ, ಚೋರ ಚರಣದಾಸ, ಸಾಯೋ ಆಟ, ಅಲೀಬಾಬಾ, ಉಷಾಹರಣ ನಾಟಕ ಗಳನ್ನು ಪ್ರದರ್ಶಿಸಲಾಗಿದೆ. ಇದೇ 29ರಂದು ಸಂಜೆ 6.30ಕ್ಕೆ ‘ಮಿನುಗಲೆ ಮಿನುಗಲೆ ನಕ್ಷತ್ರ’ ಎಂಬ ಮಕ್ಕಳ ನಾಟಕ ಪ್ರದರ್ಶನವಿದೆ’ ಎಂದು ನಟನ ಸಂಸ್ಥೆಯ ಸ್ಥಾಪಕ ಮಂಡ್ಯ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮರಳಿ ರಂಗಕ್ಕೆ: ರಂಗಾಯಣ ರೆಪರ್ಟರಿಯು ಸರ್ಕಾರದ ಅಧೀನ ಸಂಸ್ಥೆ. ಇಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ಸರ್ಕಾರದಿಂದ ಸಂಬಳವೂ ಬರುವುದರಿಂದ ಆರ್ಥಿಕವಾಗಿ ಇವರನ್ನು ಬಾಧಿಸಿದ್ದು ಕಡಿಮೆ. ಆದರೆ, ಬಣ್ಣ ಹಚ್ಚದೇ ಈ ಕಲಾವಿದರು ಕಸಿವಿಸಿ ಗೊಂಡಿದ್ದರು. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಕಲಾವಿದರು, ತಂತ್ರಜ್ಞರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಂಗಭೀಷ್ಮ ಬಿ.ವಿ.ಕಾರಂತರು ಸಂಯೋಜನೆ ಮಾಡಿದ ಹಾಡುಗಳ ರೆಕಾರ್ಡಿಂಗ್‌, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿ ಹಾಗೂ ಕುವೆಂಪು ಅವರ ‘ಬೊಮ್ಮನಹಳ್ಳಿ ಕಿಂದರಿಜೋಗಿ’ಯ ವಾಚಿಕಾಭಿನಯ ಮಾಡಿ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿದೆ.

ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾಟಕಗಳ ಪ್ರದರ್ಶನ ಏರ್ಪಡಿಸುವು ದಾಗಿ ಗಟ್ಟಿದನಿಯಲ್ಲಿ ಹೇಳಿದವರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ. ಅಲ್ಲದೆ, ರಂಗಾಸಕ್ತರನ್ನು ನಾಟಕಗಳ ಕಡೆಗೆ ಸೆಳೆಯುವ ಉದ್ದೇಶ ದಿಂದ ‘ಮರಳಿ ರಂಗಕ್ಕೆ’ ಫಲಕವನ್ನೂ ಸಹ ರಂಗಾಯಣದ ದ್ವಾರದಲ್ಲಿ ಹಾಕಿಸಿದ್ದಾರೆ.

ನ.29ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ‘ಕಸ್ತೂರ ಬಾ’ ಏಕವ್ಯಕ್ತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಎಸ್‌.ರಾಮನಾಥ್‌ ರಚನೆಯ, ಶಶಿಧರ್‌ ಭಾರೀಘಾಟ್‌ ಅವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುವ ನಾಟಕವನ್ನು ರಂಗಾಯಣದ ಕಲಾವಿದೆ ಬಿ.ಎನ್‌.ಶಶಿಕಲಾ ಪ್ರಸ್ತುತಪಡಿಸಲಿದ್ದಾರೆ.

‘ಒಂದು ಬೊಗಸೆ ನೀರು’ ಪ್ರದರ್ಶನ ನಾಳೆ

ರಂಗಸ್ಮೃತಿ ಸಂಸ್ಥೆ ಪ್ರಸ್ತುತಪಡಿಸುವ ‘ಒಂದು ಬೊಗಸೆ ನೀರು’ ನಾಟಕವು ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನ.29ರಂದು ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.

ಈ ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದು, ನವೀನ್‌ ನೇತಾಜಿ ನಿರ್ದೇಶಿಸಿದ್ದಾರೆ.

‘ರಂಗಸ್ಮೃತಿಯು ಹವ್ಯಾಸಿ ಕಲಾ ತಂಡವಾಗಿದ್ದು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ರಾಜಪ್ಪ ದಳವಾಯಿ ಅವರು ಉದ್ಘಾಟಿಸಲಿದ್ದಾರೆ’ ಎಂದು ನವೀನ್‌ ನೇತಾಜಿ ತಿಳಿಸಿದರು.

***

ನಾನು 19 ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. 8 ತಿಂಗಳಿಂದ ಬಣ್ಣ ಹಚ್ಚಲಿಲ್ಲ ಎಂಬ ಕೊರಗು ಇತ್ತು. ಈಗ ಮೈಕೊಡವಿ ಮತ್ತೆ ರಂಗಕ್ಕಿಳಿಯುತ್ತಿದ್ದೇನೆ.

–ಬಿ.ಎನ್‌.ಶಶಿಕಲಾ, ರಂಗಾಯಣದ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT