ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಯೋಜನೆ; ಪ್ರಸ್ತಾವ ಸಲ್ಲಿಸಲು ಸೂಚನೆ

ಹುಣಸೂರು, ಪಿರಿಯಾಪಟ್ಟಣ, ಚಾಮುಂಡೇಶ್ವರಿ ಕ್ಷೇತ್ರಗಳ ಸಮಸ್ಯೆ ಆಲಿಸಿದ ಪ್ರತಾಪಸಿಂಹ
Last Updated 17 ನವೆಂಬರ್ 2020, 13:57 IST
ಅಕ್ಷರ ಗಾತ್ರ

ಮೈಸೂರು: ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನದಿಮೂಲದಿಂದ ನೀರು ಪೂರೈಸುವ ಯೋಜನೆಗಳಿಗೆ ಒಂದು ವಾರದಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಸಂಸದ ಪ್ರತಾಪಸಿಂಹ ಜಿಲ್ಲಾ ಪಂಚಾಯಿತಿ ಹಾಗೂ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.

ಕೇಂದ್ರ ಸರ್ಕಾರದ ‘ಜಲಜೀವನ್‌ ಮಿಷನ್’ ಯೋಜನೆಯಡಿ ಜಲಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳೊಂದಿಗೆ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಸಮನ್ವಯ ಸಭೆ ನಡೆಸಿದರು.

ಪಿರಿಯಾಪಟ್ಟಣದ ಹಾಡ್ಯದಿಂದ ನೀರನ್ನು ಪಟ್ಟಣದವರೆಗೂ ತರಬಹುದು. ಕನಿಷ್ಠ ಎಂದರೂ ನಿತ್ಯ 11 ಎಂಎಲ್‌ಡಿ ನೀರು ಸರಬರಾಜು ಆಗುವಂತೆ ಸೂಕ್ತವಾದ ಪ್ರಸ್ತಾಪ ತಯಾರಿಸಿ ಎಂದು ಅವರು ಹೇಳಿದರು.

ಇದೇ ಯೋಜನೆಯಡಿಯ ಪೈಪ್‌ಲೈನ್ ಅಕ್ಕಪಕ್ಕ ಬರುವ ಸುಮಾರು 59 ಗ್ರಾಮಗಳಿಗೂ ನೀರು ತಲುಪಿಸಬಹುದು ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಸಲಹೆ ನೀಡಿದರು. ಈ ಸಲಹೆಯನ್ನು ಪುರಸ್ಕರಿಸಿದ ಪ್ರತಾಪಸಿಂಹ ಎರಡೂ ವಿಭಾಗದ ಎಂಜಿನಿಯರ್‌ಗಳು ಸೂಕ್ತವಾದ ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಿದರು.

ಪಿರಿಯಾಪಟ್ಟಣದ ಮುತ್ತಿನಮುಳಸೋಗೆ ಗ್ರಾಮದಿಂದ ತಾಲ್ಲೂಕಿನ ಇನ್ನುಳಿದ 224 ಗ್ರಾಮಗಳಿಗೆ ನೀರು ಪೂರೈಸುವ ₹ 200 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವವನ್ನು ಅಧಿಕಾರಿಗಳು ಸಭೆಯ ಮುಂದಿಟ್ಟರು. ಇದನ್ನೂ ಸರ್ಕಾರದೊಂದಿಗೆ ಮಾತನಾಡಿ ಹಣ ಮಂಜೂರು ಮಾಡಿಸಿಕೊಡುವುದಾಗಿ ಪ್ರತಾಪಸಿಂಹ ಭರವಸೆ ನೀಡಿದರು.

ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ 51 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಮೇಲ್ದರ್ಜೆಗೆ ಏರಿಸಿದರೆ ಹೆಚ್ಚುವರಿಯಾಗಿ 20 ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದು ಎಂದು ಸಲಹೆ ನೀಡಿದರು.

ಹಳೇಉಂಡವಾಡಿ ಯೋಜನೆಯು ಭೂಸ್ವಾಧೀನ ಹಂತದಲ್ಲಿದ್ದು, ತಾಂತ್ರಿಕ ಬಿಡ್‌ನ್ನು ತೆರೆಯಲಾಗಿದೆ. ಇದರಲ್ಲಿ ಆಯ್ಕೆಯಾದವರಿಗೆ ಹಣಕಾಸಿನ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳಗೊಳ– ಮೇಳಾಪುರ ಪಂಪಿಂಗ್ ಸ್ಟೇಷನ್‌ನ ಮೋಟಾರ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಅದರ ತಾಂತ್ರಿಕ ದೋಷವನ್ನು ಸರಿಪಡಿಸಲು ಕಂಪನಿಯಿಂದ ಅಧಿಕಾರಿಗಳು ಶೀಘ್ರವೇ ಬರಲಿದ್ದಾರೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರು ಘಟಕಗಳು ಪದೇ ಪದೇ ಕೆಡುವುದು ಹಿಂದಿನ ಸರ್ಕಾರದ ಕಳಪೆ ಸಾಧನೆ. ಈ ನ್ಯೂನತೆಯನ್ನು ಸರಿಪಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT