ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕಾರ್ಮಿಕರಿಗೆ ವರವಾಗುವ ಚುನಾವಣೆ!

ನಗರದಲ್ಲಿ ಕೆಲವೆಡೆ ಕೂಲಿ ಕಾರ್ಮಿಕರ ಸಮಸ್ಯೆ
Last Updated 12 ಏಪ್ರಿಲ್ 2019, 20:48 IST
ಅಕ್ಷರ ಗಾತ್ರ

ಮೈಸೂರು: ಚುನಾವಣೆಗಳು ಬಂತೆಂದರೆ ಮಾತ್ರ ಕೂಲಿಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತದೆ. ಸಮಾವೇಶಗಳಲ್ಲಿ ಭಾಗವಹಿಸಲು, ಪ್ರಚಾರದಲ್ಲಿ ಭಾಗಿಯಾಗಲು ಸ್ಥಳೀಯ ಪುಡಿ ರಾಜಕಾರಣಿಗಳು ಇವರ ಬೆನ್ನು ಬೀಳುತ್ತಾರೆ.

ಪಕ್ಷಕ್ಕೆ ನಿಷ್ಠಾವಂತರಾಗಿರುವ ಕೆಲವು ಕಾರ್ಯಕರ್ತರನ್ನು ಬಿಟ್ಟರೆ ಉಳಿದವರು ಸಾಮಾನ್ಯವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ. ಯಾವುದೇ ಪಕ್ಷ ಇರಲಿ ಸಮಾವೇಶಗಳಿಗೆ ಜನರನ್ನು ಕರೆದುಕೊಂಡು ಬರಲೇಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಸ್ವಯಂಪ್ರೇರಿತರಾಗಿ ಕೆಲವು ಸಮಾವೇಶಗಳಿಗೆ ಜನರು ಬರಬಹುದಾದರೂ, ಎಲ್ಲಿ ಜನರು ಬರುವುದಿಲ್ಲವೋ ಎಂಬ ಆತಂಕ ರಾಜಕಾರಣಿಗಳನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೂಲಿ ಕಾರ್ಮಿಕರ ಮೊರೆ ಹೋಗುತ್ತಾರೆ.‌

ಇದರಿಂದಾಗಿ ನಗರದ ಕೆಲವೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ನೂರೊಂದು ಗಣಪತಿ, ಕುವೆಂಪು ನಗರ ಕಾಂಪ್ಲೆಕ್ಸ್, ಅಶೋಕಪುರಂ, ಕೆ.ಜಿ.ಕೊಪ್ಪಲು, ಶ್ರೀರಾಂಪುರ ಸೇರಿದಂತೆ ಕೆಲವು ನಿಗದಿತವಾದ ಪ್ರದೇಶಗಳಲ್ಲಿ ಕೂಲಿಗಾಗಿ ಕಾಯುತ್ತಾ ಕಾರ್ಮಿಕರು ನಿತ್ಯ ಬೆಳಿಗ್ಗೆ ನಿಲ್ಲುತ್ತಾರೆ. ಚಾಮರಾಜನಗರದಿಂದ ರೈಲು ಬಂದ ಮೇಲೆ ಇಂತಹವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಕೆಲವು ಪ್ರದೇಶಗಳಲ್ಲಿ 200ಕ್ಕೂ ಅಧಿಕ ಮಂದಿ ನಿಂತಿರುತ್ತಾರೆ.

ಇವರನ್ನು ಮೇಸ್ತ್ರಿಗಳು ಹಾಗೂ ಇತರ ನಿರ್ಮಾಣ ಚಟುವಟಿಕೆಗಳ ಉಸ್ತುವಾರಿ ಹೊತ್ತಿರುವವರು ಕೆಲಸಕ್ಕಾಗಿ ಕರೆದುಕೊಂಡು ಹೋಗುತ್ತಾರೆ. ಚಾಮರಾಜನಗರ ಜಿಲ್ಲೆಯಿಂದ ಈ ರೀತಿ ಬರುವವರ ಸಂಖ್ಯೆ ಅಧಿಕ.

ಈಗ ಚುನಾವಣೆ ಇರುವುದರಿಂದ ವಿವಿಧ ಅಭ್ಯರ್ಥಿಗಳು ಪ್ರಚಾರಕ್ಕೆ ಹೊರಡುತ್ತಾರೆ. ಬೆಂಬಲ ಇಲ್ಲದ ಕಡೆ ಜನರೇ ಸೇರುವುದಿಲ್ಲ. ಅಲ್ಲೆಲ್ಲ ಇಂತಹ ಕಾರ್ಮಿಕರು ನೆರವಿಗೆ ಬರುತ್ತಾರೆ. ಸಮಾವೇಶಗಳು, ಸಣ್ಣ ಸಣ್ಣ ಸಭೆಗಳು ಬಣಗುಡುವುದನ್ನು ಇವರು ತಪ್ಪಿಸುತ್ತಾರೆ.

ಇದರಿಂದಾಗಿ ಕೆಲವೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಮುಖ್ಯವಾಗಿ ನಿರ್ಮಾಣ ಚಟುವಟಿಕೆಯಲ್ಲಿ ಭಾಗಿಯಾಗುವ ‘ಹೆಲ್ಪರ್‌’ಗಳೇ ಇಂತಹ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಇವರಿಗೆ ಸಿಗುವ ಕೂಲಿಯೂ ತೀರಾ ಕಡಿಮೆ ಇರುವುದರಿಂದ ಸಹಜವಾಗಿಯೇ ಇವರು ಹೆಚ್ಚಿನ ಹಣ ಬರುವಂತಹ ರಾಜಕೀಯ ಸಭೆಗಳತ್ತ ಆಕರ್ಷಿತರಾಗುತ್ತಾರೆ.

ಅವರವರ ಸ್ವಗ್ರಾಮಗಳಲ್ಲೇ ಪುಡಿ ರಾಜಕಾರಣಿಗಳು ಇಂತಹವರನ್ನು ಸರಕು ಸಾಗಣೆ ಆಟೊದಲ್ಲಿ ಸಮಾವೇಶ ಹಾಗೂ ಸಭೆಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ನಗರದಲ್ಲಿ ಇವರ ಸಂಖ್ಯೆ ಕಡಿಮೆಯಾಗಿದೆ ಎಂದು ಮೇಸ್ಟ್ರಿ ಚಂದ್ರಪ್ಪ ಹೇಳುತ್ತಾರೆ.

ಯುವಕರ ಸಂಘ, ಸ್ತ್ರೀ ಶಕ್ತಿ ಸಂಘಟನೆಗಳಿಗೆ ಬೇಡಿಕೆ:

ಗ್ರಾಮಗಳಲ್ಲಿರುವ ಯುವಕರ ಸಂಘಟನೆಗಳಿಗೆ, ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಿಗೂ ಇದೀಗ ಬೇಡಿಕೆ ಬಂದಿದೆ. ಸ್ತ್ರೀಯರು ಸಾಮಾನ್ಯವಾಗಿ ಒಬ್ಬಂಟಿಯಾಗಿ ಬರುವುದಿಲ್ಲ. ತಮ್ಮ ಸಂಘದ ಎಲ್ಲ ಸದಸ್ಯರೂ ಹೊರಡುತ್ತಾರೆ ಎಂದರೆ ಎಲ್ಲರೂ ಬರುತ್ತಾರೆ. ಹಾಗಾಗಿ, ರಾಜಕಾರಣಿಗಳು ಇಂತಹ ಸಂಘಟನೆಗಳ ಸದಸ್ಯರನ್ನೂ ಸಮಾವೇಶಗಳಿಗೆ ಕರೆ ತರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT