ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ಗದ ಆನೆಗಳು; ಹೈರಣಾದ ಸಿಬ್ಬಂದಿ

ಮತ್ತೆ 3 ಸಾಕಾನೆಗಳನ್ನು ಕರೆಸಲು ನಿರ್ಧಾರ, ಆನೆ ಸೆರೆಗೆ ಚಿಂತನೆ
Last Updated 4 ಮೇ 2019, 1:22 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಜಯಪುರದ ಸಮೀಪ ಬೀಡು ಬಿಟ್ಟಿರುವ 2 ಕಾಡಾನೆಗಳನ್ನು ಕಾಡಿಗಟ್ಟಲಾಗದೇ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. ‌

ಎಷ್ಟೇ ಪ್ರಯತ್ನಿಸಿದರೂ ಅವು ರೈತರ ತೋಟ ಮತ್ತು ಜಮೀನುಗಳತ್ತಲೇ ಬರುತ್ತಿವೆ. ಮತ್ತಷ್ಟು ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲು ಶುಕ್ರವಾರ ನಿರ್ಧರಿಸಲಾಗಿದೆ. ಎಲ್ಲ ಕಾರ್ಯತಂತ್ರಗಳು ವಿಫಲಗೊಂಡರೆ ಆನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸದ್ಯ, ‘ಅಭಿಮನ್ಯು’ ಮತ್ತು ‘ಕೃಷ್ಣ’ ಎಂಬ ಸಾಕಾನೆಗಳು ಆನೆಗಳನ್ನು ನಿತ್ಯ ಬೆಳಿಗ್ಗೆ ಚಿಕ್ಕನಹಳ್ಳಿ ಕಾಡಿಗೆ ಓಡಿಸುತ್ತಿವೆ. ಆದರೆ, ರಾತ್ರಿ ವೇಳೆ ಮತ್ತೆ ಕಾಡಾನೆಗಳು ಹಾರೋಹಳ್ಳಿ, ಗೋಪಾಲಪುರ, ಗುಮಚಹಳ್ಳಿ, ಬೆಟ್ಟದಬೀಡು ಸೇರಿದಂತೆ ಇನ್ನಿತರ ಸುತ್ತಮುತ್ತಲ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.

ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ತಂಡಗಳಾಗಿ ವಿಂಗಡನೆಯಾಗಿ ಆನೆಗಳನ್ನು ಓಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮತ್ತಷ್ಟು ಸಿಬ್ಬಂದಿಯನ್ನು ಕರೆಸಲು ಚಿಂತಿಸಲಾಗಿದೆ.

‘ಕಳೆದ ಒಂದು ವಾರದಿಂದಲೂ ಆನೆಗಳನ್ನು ಓಡಿಸಿ ಸಾಕಾಗಿದೆ. ಎಷ್ಟೇ ಪ್ರಯತ್ನಿಸಿದರೂ ಅವು ವಾಪಸ್ ಬರುತ್ತಿವೆ. ಇವುಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕನಹಳ್ಳಿ ಅರಣ್ಯದಿಂದ ಇವು ನಾಗರಹೊಳೆ ಹುಲಿ ರಕ್ಷಿತಾರಣ್ಯಕ್ಕೆ ಹೋಗಬೇಕಿದೆ. ಆದರೆ, ದಾರಿತಪ್ಪಿದಂತೆ ಕಾಣುವ ಈ ಆನೆಗಳು ನಾಗರಹೊಳೆಯತ್ತ ಹೋಗದೇ ರಾತ್ರಿ ವೇಳೆ ಮತ್ತೆ ಜಯಪುರದತ್ತ ಬರುತ್ತಿವೆ. ಇದರಿಂದ ಸಿಬ್ಬಂದಿ ಬೇಸ್ತು ಬೀಳುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್‌ಕುಮಾರ್, ‘ಎಷ್ಟೇ ಪ್ರಯತ್ನಿಸಿದರೂ ಆನೆಗಳು ಕಾಡಿನತ್ತ ಹೋಗುತ್ತಿಲ್ಲ. ಮತ್ತೆ 3 ಸಾಕಾನೆ ಕರೆಸಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಟ್ಟು 5 ಸಾಕಾನೆಗಳು ಸೇರಿದರೆ ಕಾಡಾನೆಗಳು ಹೆದರಿ ನಾಗರಹೊಳೆ ಕಡೆಗೆ ಹೋಗುವ ಸಂಭವ ಇದೆ. ಈ ಕಾರ್ಯಾಚರಣೆಯೂ ವಿಫಲಗೊಂಡರೆ ಅಂತಿಮವಾಗಿ ಮಾತ್ರವೇ ಆನೆಗಳ ಸೆರೆಗೆ ಚಿಂತಿಸಲಾಗುವುದು’ ಎಂದು ಹೇಳಿದ್ದಾರೆ.

ಸದ್ಯ ಕಾಡಾನೆಗಳು ಬೆಟ್ಟದಬಿಡು ಸಮೀಪದ ಕೋಣನಬೆಟ್ಟದಲ್ಲಿ ಅಡಗಿವೆ. ಜಯಪುರ ಠಾಣೆಯ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT