ಭಾನುವಾರ, ಸೆಪ್ಟೆಂಬರ್ 26, 2021
28 °C

ನಾಡಿನಿಂದ ಕಾಡಿನತ್ತ ಆನೆಗಳ ಪಯಣ, ನಿಟ್ಟುಸಿರುಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ/ಮೈಸೂರು: ಮೈಸೂರು ತಾಲ್ಲೂಕಿನ ಜಯಪುರದ ಬಳಿ ಕಾಣಿಸಿಕೊಂಡಿದ್ದ ಎರಡು ಕಾಡಾನೆಗಳು ಅಂತೂ ಇಂತೂ ಕಾಡಿಗೆ ಸೇರಿವೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಹಾಗೂ ಬಲರಾಮ ಆನೆಗಳು ಯಶಸ್ವಿಯಾಗಿ ಕಾಡಾನೆಗಳನ್ನು ಚಿಕ್ಕದೇವಮ್ಮ ಬೆಟ್ಟದ ಅರಣ್ಯ ಪ್ರದೇಶಕ್ಕೆ ಸೇರಿಸಿವೆ. ಇವು ವಾಪಸ್ ಬರುವುದಿಲ್ಲ, ಮುಂದೆ ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಸೇರಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆ ಸಿಬ್ಬಂದಿಯದು.

ಕಳೆದೊಂದು ವಾರದಿಂದ ಈ ಆನೆಗಳು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಬೆಳೆ ನಾಶ ಮಾಡಿದ್ದವು. ನಂತರ, ಇವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಯಾದಗಿರಿಯ ಕೂಲಿಕಾರ್ಮಿಕ ಹನುಮಂತರಾಯ ಅವರನ್ನು ಈ ಆನೆಗಳೇ ತುಳಿದು ಸಾಯಿಸಿ ಆತಂಕ ಮೂಡಿಸಿದ್ದವು. ಇದರಿಂದ ಆನೆಗಳನ್ನು ಸೆರೆ ಹಿಡಿಯದೇ ಬೇರೆ ವಿಧಿ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು.

ಶನಿವಾರ ಬೆಳಿಗ್ಗೆಯಿಂದಲೇ ನಡೆಸಿದ ಸತತ ಕಾರ್ಯಾಚರಣೆ ಕೊನೆಗೂ ಫಲ ಕೊಟ್ಟಿತು. ಕಬಿನಿ ನದಿಯನ್ನು ದಾಟಿದ ಈ ಆನೆಗಳು ಚಿಕ್ಕದೇವಮ್ಮ ಬೆಟ್ಟದಲ್ಲಿ ಸದ್ಯ ತಂಗಿವೆ. ಇಲ್ಲಿಗೆ ಸಮಿಪದ ಬಂಡೀಪುರದ ಅರಣ್ಯದತ್ತ ಇವುಗಳು ಹೊರಡಲಿವೆ ಎಂದು ಡಿಸಿಎಫ್ ಡಾ.ಪ್ರಶಾಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆ ತಂಡದಲ್ಲಿ ಡಿಸಿಎಫ್ ಪ್ರಶಾಂತ್‌ಕುಮಾರ್ ಅವರ ಜತೆ, ಎಸಿಎಫ್ ಪರಮೇಶ್ವರಪ್ಪ, ಕೃಷ್ಣಾನಿಧಿ, ಆರ್‌ಎಫ್‌ಒ ಮಧು, ನಂಜನಗೂಡು ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ ಲೋಕೇಶಮೂರ್ತಿ, ಎಸ್‌ಐ ಆನಂದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು