ಕ್ರಿಕೆಟ್‌: ಇಂಗ್ಲೆಂಡ್‌ ತಂಡ ಬೆಂಬಲಿಸಲು ಮೈಸೂರಿಗೆ ಬಂದ ಅಭಿಮಾನಿಗಳು

7
ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಭಾರತ ‘ಎ’ ವಿರುದ್ಧದ ಕ್ರಿಕೆಟ್‌ ಟೆಸ್ಟ್‌ ಪಂದ್ಯ

ಕ್ರಿಕೆಟ್‌: ಇಂಗ್ಲೆಂಡ್‌ ತಂಡ ಬೆಂಬಲಿಸಲು ಮೈಸೂರಿಗೆ ಬಂದ ಅಭಿಮಾನಿಗಳು

Published:
Updated:
Prajavani

ಮೈಸೂರು: ವಿಶ್ವಕಪ್‌ ಕ್ರಿಕೆಟ್‌, ಒಲಿಂಪಿಕ್ಸ್‌ ಅಥವಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾ ಪ್ರೇಮಿಗಳು ದೂರದ ಊರು, ವಿದೇಶಗಳಿಗೆ ಪ್ರಯಾಣಿಸುವುದು ಸಾಮಾನ್ಯ.

ಆದರೆ ಇಂಗ್ಲೆಂಡ್‌ನ ಈ ನಾಲ್ವರು ಹಿರಿಯ ಕ್ರಿಕೆಟ್‌ ಪ್ರೇಮಿಗಳಿಗೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಲು ಪ್ರಮುಖ ಟೂರ್ನಿಯೇ ಬೇಕಿಲ್ಲ. ಹ್ಯಾರಿ ಟ್ರಾಪ್, ಫಿಲ್‌ ಹಿಲ್ಟನ್, ನೀಲ್‌ ಫಿಶ್‌ ಮತ್ತು ಜಿಮ್ಮಿ ಸ್ಟ್ರಾಂಗ್‌ ಅವರು ಭಾರತ ‘ಎ’ ಮತ್ತು ಇಂಗ್ಲೆಂಡ್‌ ಲಯನ್ಸ್‌ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ನಗರಕ್ಕೆ ಬಂದಿದ್ದಾರೆ. ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಮೊದಲ ದಿನದಾಟ ವೀಕ್ಷಿಸಿದರು.

ಕ್ರಿಕೆಟ್‌ ಮೇಲಿನ ಅತಿಯಾದ ಪ್ರೀತಿ ಇವರನ್ನು ಸಾಂಸ್ಕೃತಿಕ ನಗರಿಗೆ ಬರುವಂತೆ ಮಾಡಿದೆ. ಭಾರತ ಪ್ರವಾಸದಲ್ಲಿದ್ದ ಇವರು ಸಮಯ ಹೊಂದಾಣಿಕೆ ಮಾಡಿಕೊಂಡು ಇಲ್ಲಿಗೆ ಬಂದಿದ್ದಾರೆ. ಕೇರಳದ ವಯನಾಡಿನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯವನ್ನೂ ಇವರು ವೀಕ್ಷಿಸಿದ್ದರು.

ಇಂಗ್ಲೆಂಡ್‌ನ ವಿವಿಧ ನಗರಗಳ ನಿವಾಸಿಗಳಾಗಿರುವ ಇವರು ಈ ಹಿಂದೆ ಪ್ರವಾಸದ ವೇಳೆ ಪರಸ್ಪರ ಪರಿಚಿತರಾಗಿದ್ದರು. ಹಳೆಯ ಪರಿಚಯದಿಂದ ನಾಲ್ಕು ಮಂದಿ ಜತೆಯಾಗಿ ಪಂದ್ಯ ವೀಕ್ಷಿಸಲು ಮೈಸೂರಿಗೆ ಬಂದಿದ್ದಾರೆ.

ಈ ನಾಲ್ವರಲ್ಲಿ ಹ್ಯಾರಿ ಅವರಿಗೆ ಇದು ಮೈಸೂರಿಗೆ ಮೊದಲ ಭೇಟಿ. ಇತರರು ಈ ಹಿಂದೆಯೂ ನಗರಕ್ಕೆ ಬಂದಿದ್ದರು. ನೀಲ್‌ ಫಿಶ್‌ ಅವರಿಗಂತೂ ಇದು ನಾಲ್ಕನೇ ಭೇಟಿ.

‘ಮೈಸೂರು ಸುಂದರ ಹಾಗೂ ಸ್ವಚ್ಛ ನಗರಿ. ಭಾರತದ ಹಲವು ನಗರಗಳಿಗೆ ಭೇಟಿ ನೀಡಿದ್ದೇನೆ. ನನ್ನ ಪ್ರಕಾರ ಸಿಕ್ಕಿಂನ ಗ್ಯಾಂಗ್ಟಕ್‌ ನಗರದ ಬಳಿಕ ಸ್ವಚ್ಛತೆಯಲ್ಲಿ ಎರಡನೇ ಸ್ಥಾನವನ್ನು ಮೈಸೂರಿಗೆ ನೀಡಬಹುದು’ ಎನ್ನುವರು.

ದಂತ ಚಿಕಿತ್ಸೆಗಾಗಿ ಮುಂಬೈಗೆ ಬಂದಿದ್ದ ಫಿಶ್ ಅವರು ಈ ಪಂದ್ಯಕ್ಕಾಗಿ ಅಲ್ಲಿಂದ ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಈ ಬಾರಿಯ ರಣಜಿ ಋತುವಿನ ಕೆಲವು ಪಂದ್ಯಗಳನ್ನೂ ಅವರು ವೀಕ್ಷಿಸಿದ್ದಾರೆ. ಇನ್ನೂ ಕೆಲ ದಿನ ಭಾರತದಲ್ಲಿ ಉಳಿದುಕೊಂಡು ತವರಿಗೆ ಮರಳುವುದು ಅವರ ಉದ್ದೇಶ.

ಮೊದಲ ಬಾರಿ ಮೈಸೂರಿಗೆ ಬಂದಿರುವ ಹ್ಯಾರಿ ಅವರು ಮೈಸೂರು ಅರಮನೆಯ ಸೌಂದರ್ಯಕ್ಕೆ ಮನಸೋತಿದ್ದಾರೆ. ‘ಪ್ರಿಂಟಿಂಗ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ನಿವೃತ್ತಿಯ ಬಳಿಕ ಪ್ರವಾಸದಲ್ಲಿ ಕಾಲ ಕಳೆಯುತ್ತೇನೆ. ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹೆಚ್ಚಿನ ಎಲ್ಲ ಪಂದ್ಯಗಳನ್ನು ಕ್ರೀಡಾಂಗಣಗಳಿಗೆ ತೆರಳಿ ವೀಕ್ಷಿಸುತ್ತೇನೆ’ ಎನ್ನುವರು.

ಗ್ಲೌಷ್ಟೆರ್‌ಷೈರ್‌ ಕೌಂಟಿಯ ಶೆಲ್ಟನ್‌ಹ್ಯಾಂ ನಿವಾಸಿಯಾಗಿರುವ ಅವರು ನವೆಂಬರ್‌ ತಿಂಗಳಿನಿಂದಲೂ ಗೋವಾದಲ್ಲಿ ತಂಗಿದ್ದಾರೆ.

‘ಶೆಲ್ಟನ್‌ಹ್ಯಾಂ ನಗರ ಕುದುರೆ ರೇಸ್‌ಗೆ ಹೆಸರುವಾಸಿಯಾಗಿದೆ. ನನಗೆ ಕುದುರೆ ರೇಸ್‌ನಲ್ಲೂ ಆಸಕ್ತಿಯಿದೆ. ಮೈಸೂರು ರೇಸ್‌ ಕ್ಲಬ್‌ನಲ್ಲಿ ನಡೆಯುವ ರೇಸ್‌ ವೀಕ್ಷಿಸುವೆ’ ಎಂದರು. ಬುಧವಾರ ಮಧ್ಯಾಹ್ನದ ಬಳಿಕ ಅವರು ರೇಸ್‌ ಕ್ಲಬ್‌ಗೆ ತೆರಳಿ ಕುದುರೆ ರೇಸ್‌ಗಳನ್ನು ವೀಕ್ಷಿಸಿದರು.

ಇನ್ನುಳಿದ ಮೂವರು ಇಡೀ ದಿನವನ್ನು ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕಳೆದರು. ಈ ಪಂದ್ಯದ ನಾಲ್ಕೂ ದಿನಗಳ ಆಟ ವೀಕ್ಷಿಸುವುದು ಅವರ ಉದ್ದೇಶ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !