ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆಯಿಂದ ಮಾತ್ರ ಸಮಾನತೆ ಸಾಧ್ಯ: ಶಾಸಕ

‘ಜಾತಿಗಡಿಗಳಿಂದಾಚೆಗೆ ಡಾ.ಬಿ.‌ಆರ್.ಅಂಬೇಡ್ಕರ್’ ವಿಚಾರ ಸಂಕಿರಣ
Last Updated 12 ಅಕ್ಟೋಬರ್ 2020, 8:47 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಎಲ್ಲಾ ಸಮಾಜದವರು ಸಾಮರಸ್ಯ, ಸಹಬಾಳ್ವೆ ನಡೆದರೆ ಮಾತ್ರ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಲು ಸಾಧ್ಯ’ ಎಂದು ಶಾಸಕ ಎಂ.‌ಅಶ್ವಿನ್‌ಕುಮಾರ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ದಸಂಸ ವಿವಿಧ ಸಮುದಾಯ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಜಾತಿಗಡಿಗಳಿಂದಾಚೆಗೆ ಡಾ.ಬಿ.‌ಆರ್ ಅಂಬೇಡ್ಕರ್’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಬಾಸಾಹೇಬರು ಸಂವಿಧಾನ ನೀಡಿ 7 ದಶಕಗಳಾದರೂ ದೇಶದಲ್ಲಿ ಅದನ್ನು ಒಪ್ಪಿಕೊಳ್ಳದ ವಾತಾವರಣವಿರುವುದು ವಿಷಾದನೀಯ. ಅಂಬೇಡ್ಕರ್ ಅವರನ್ನು ‌ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಅದರಾಚೆಗೆ ಎಲ್ಲ ವರ್ಗಗಳಿಗೆ ಅವರ ಚಿಂತನೆಗಳನ್ನು ತಿಳಿಸುವ ವಿಶಿಷ್ಟ ಪ್ರಯತ್ನ ನಡೆದಿರುವುದು ಶ್ಲಾಘನೀಯ. ಎಲ್ಲಾ ಸಮುದಾಯಗಳು ಸಮಾನತೆಯ ಚಿಂತನೆಗಳನ್ನು‌ ಅಳವಡಿಸಕೊಂಡಲ್ಲಿ ಮಾತ್ರ ಒಗ್ಗಟ್ಟಿನ‌ ಸಮಾಜ ನಿರ್ಮಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ ಸೋಮಶೇಖರ್ ಮಾತನಾಡಿ, ‘ಅಂಬೇಡ್ಕರ್ ಅವರು ಹುಟ್ಟು ಪ್ರಜಾಪ್ರಭುತ್ವ ವಾದಿ.‌ ಪ್ರಜಾಪ್ರಭುತ್ವದ ಮೂಲಕ ಭಾರತೀಯರೆಲ್ಲರಿಗೆ ಸಮಾನತೆ ಹಾಗೂ ಹಕ್ಕುಗಳನ್ನು ನೀಡಿದವರು.‌ ಆರ್ಥಿಕ, ಕೃಷಿ ನೀತಿಯ ಪರಿಕಲ್ಪನೆ, ಸಮಾನತೆಯ ಕಾನೂನು ಹಾಗೂ ಮಹಿಳೆಯರ ಸಮಾನತೆಗೆ ಒತ್ತು ನೀಡಿ ಆ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಪೂರಕ ಸಂವಿಧಾನ ಕೊಟ್ಟಿದ್ದಾರೆ. ಅವರು ದಲಿತರಿಗೆ ಮಾತ್ರ ಸಂವಿಧಾನ ನೀಡಲಿಲ್ಲ. ಭಾರತೀಯರೆಲ್ಲರಿಗೂ ನೀಡಿದ್ದಾರೆ. ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ. ಆದರೂ ಈ ಜಗತ್ತಿನ ಯಾವ ದೇಶದಲ್ಲೂ ಶೋಷಣೆಮುಕ್ತ ಸಮಾಜ‌ ನಿರ್ಮಾಣವಾಗಿಲ್ಲ’ ಎಂದು ವಿಷಾದಿಸಿದರು.

‘ಮಹಾನ್ ವ್ಯಕ್ತಿಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರ ಆದರ್ಶ ಚಿಂತನೆಗಳು ಸಾರ್ವಕಾಲಿಕ ಹಾಗಾಗಿ ಅವರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಸಮಾನವಾಗಿ ಗೌರವಿಸುವ ಪ್ರವೃತ್ತಿ‌ ಬೆಳೆಸಿಕೊಳ್ಳಬೇಕಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಕಿರಗಸೂರು ಶಂಕರ್, ರೈತ ಸಂಘದ ಕರೋಹಟ್ಟಿ ಕುಮಾರಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಕುರುಬರ ಸಂಘದ ಕೊತ್ತೇಗಾಲ ಬಸವರಾಜು, ನಾಯಕ ಸಂಘದ ಆಲಗೂಡು ನಾಗರಾಜು ಮಾತನಾಡಿದರು. ದಸಂಸ ಮುಖಂಡರಾದ ಸಿ.ಉಮಾಮಹಾದೇವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಹಮ್ಮಿಕೊಂಡಿದ್ದ ‘ಮೀಸಲಾತಿ ವರ್ಗಿಕರಣ ಹಾಗೂ ಖಾಸಗೀಕರಣದ ಸವಾಲುಗಳು’ ಕುರಿತ ವಿಚಾರ ಗೋಷ್ಠಿಯಲ್ಲಿ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನಾ ನಿರ್ದೇಶಕ ಡಿ. ಚಂದ್ರಶೇಖರಯ್ಯ ವಿಷಯ ಮಂಡಿಸಿದರು. ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು.

‘ದಲಿತೇರರ ದೃಷ್ಟಿಯಲ್ಲಿ ಡಾ.ಅಂಬೇಡ್ಕರ್’ ಕುರಿತ ಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಉಗ್ರನರಸಿಂಹೇಗೌಡ ಹಾಗೂ ಉಪನ್ಯಾಸಕ ಎ.‌ಎಂ. ಶಿವಸ್ವಾಮಿ‌ ವಿಷಯ ಮಂಡಿಸಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ನೈಸರ್ಗಿಕ ಕೃಷಿ ಕೃಷ್ಣಪ್ಪ, ಮುಖಂಡರಾದ ಎಡದೊರೆ ಮಹಾದೇವಯ್ಯ, ಕಿರಂಗೂರು ಸ್ವಾಮಿ, ಕುಕ್ಕೂರು ರಾಜು, ಕನ್ನಹಳ್ಳಿ‌ ಮೂರ್ತಿ, ಹಿರಿಯ ಪತ್ರಕರ್ತ ಜಿ.ಆರ್.‌ನರಸಿಂಹಯ್ಯ, ಎಸ್.ಬಿ.ಪ್ರಕಾಶ್, ಆಲಗೂಡು ರೇವಣ್ಣ ಚೋರನಹಳ್ಳಿ ಶಿವಣ್ಣ, ಯಡದೊರೆ ಸಿದ್ದರಾಜು, ಮೂಡಹಳ್ಳಿ ಮಹದೇವ, ಕುಮಾರಸ್ವಾಮಿ ಸೇರಿದಂತೆ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ವಕೀಲರ ಸಂಘ, ಹಾಗೂ ವಿವಿಧ ಸಮುದಾಯಗಳ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT