ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಗಳ ವಿರುದ್ಧ ರೈತ ನಾಯಕರ ಆಕ್ರೋಶ

ರೈತ ವಿರೋಧಿ ಕಾನೂನು ವಿರೋಧಿಸಿ ಚಳವಳಿಗೆ ಚಾಲನೆ
Last Updated 9 ಆಗಸ್ಟ್ 2020, 2:25 IST
ಅಕ್ಷರ ಗಾತ್ರ

ಬೆಟ್ಟದಪುರ: ‘ರೈತ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಕಾರ್ಯರೂಪಕ್ಕೆ ತಂದು ರೈತರಿಗೆ ಅನ್ಯಾಯವೆಸಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗಂಭೀರ ಆರೋಪ ಮಾಡಿದರು.

ಡಿ.ದೇವರಾಜು ಅರಸು ಅವರ ಹುಟ್ಟೂರು ಸಮೀಪದ ಬೆಟ್ಟದತುಂಗ ಗ್ರಾಮದಲ್ಲಿ ‘ನಮ್ಮ ಭೂಮಿ–ನಮ್ಮ ಹಕ್ಕು–ಅನ್ಯರಿಗೆ ಮಾರಾಟಕ್ಕಿಲ್ಲ’ ಎಂಬ ಘೋಷಣೆಯ ನಾಮಫಲಕ ಅಳವಡಿಸಿ ಸಭೆಯಲ್ಲಿ ಮಾತನಾಡಿದ ಅವರು, ‘ಕ್ವಿಟ್ ಇಂಡಿಯಾ ಚಳವಳಿಯ ನಡೆದ ದಿನದ ಜ್ಞಾಪಕಾರ್ಥವಾಗಿ ಈ ದಿನದಂದು ನಾಮಫಲಕ ಅನಾವರಣ ಮಾಡಲಾಗಿದೆ’ ಎಂದರು.

‘ರೈತರ ರಕ್ಷಣೆಯಾಗಿದ್ದ ಭೂ-ಸುಧಾರಣೆ ಕಾಯ್ದೆಗೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದು ರೈತರ ಹಕ್ಕುಗಳನ್ನೇ ದೋಚುತ್ತಿದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಮಾರುಕಟ್ಟೆ ವ್ಯವಸ್ಥೆಗಳನ್ನು ಕಾರ್ಪೊರೇಟ್, ಬಂಡವಾಳ ಶಾಹಿಗಳಿಗೆ ಒಪ್ಪಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡಿ ನಮ್ಮ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಿ ನಮಗೆ ದೊರಕುತ್ತಿದ್ದ ಉಚಿತ ವಿದ್ಯುತ್‌ಗೆ ಕಡಿವಾಣ ಹಾಕಲು ಮುಂದಾಗಿದೆ. ರೈತ ವಿರೋಧಿ ಕಾನೂನುಗಳನ್ನು ಸೃಷ್ಟಿಸಿ ತುಂಬಾ ಅನ್ಯಾಯ ಮಾಡುತ್ತಿವೆ’ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

‘ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ‘ಲಿತ ಸಂಘರ್ಷ ಸಮಿತಿಯ ಒಕ್ಕೂಟದ ಸಹಯೋಗದೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರತಿ ಗ್ರಾಮಗಳಲ್ಲಿ ನಾಮಫಲಕವನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಕಾರ್ಪೊರೇಟ್ ಕಂಪನಿ, ಬಂಡವಾಳ ಶಾಹಿಗಳು ಭೂ- ದಲ್ಲಾಳಿಗಳಿಗೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂಬ ಘೋಷಣೆಯೂ ಫಲಕದಲ್ಲಿ ಇರಲಿದೆ’ ಎಂದು ಹೇಳಿದರು.

ಬೆಟ್ಟಯ್ಯ ಕೋಟೆ ಮಾತನಾಡಿ, ‘ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಸುಭದ್ರವಾದ ಸಂವಿಧಾನವನ್ನು ಡಾ.ಅಂಬೇಡ್ಕರ್ ಕೊಟ್ಟಿದ್ದು, ದೇಶದ ನಾಗರಿಕರ ಸಮಾನತೆಯನ್ನು ಎತ್ತಿ ಹಿಡಿದಿದ್ದಾರೆ, ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ದೇಶದ ಬೆನ್ನೆಲುಬಾಗಿರುವ ರೈತರನ್ನು ಹಾಗೂ ತಳಮಟ್ಟದ ಸಮುದಾಯದವರನ್ನು ಮೂಲೆಗುಂಪು ಮಾಡಿ, ಕೆಲವೇ ಶ್ರೀಮಂತ ವ್ಯಕ್ತಿಗಳ ಕೈಗೆ ಈ ದೇಶವನ್ನು ಕೊಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

ಅಲಗೂಡು ಶಿವಕುಮಾರ್, ಐಲಾಪುರ ರಾಮು, ದೇವರಾಜು ಅರಸ್, ವಕೀಲರಾದ ಜವರೇಗೌಡ, ನೇತ್ರಾವತಿ ಮಾತನಾಡಿದರು.

ಈ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿ ಈ ದೇಶದಲ್ಲಿ ಮೊಳಗಬೇಕು. ಆ ಮೂಲಕ ನಮ್ಮ ಹಕ್ಕುಗಳನ್ನು, ಅವಕಾಶಗಳನ್ನು ಉಳಿಸಿಕೊಳ್ಳಬೇಕು ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನ ಹಾಕಬೇಕು ಎಂದು ಬಂಡವಾಳ ಶಾಹಿಗಳಿಗೆ ಭೂಮಿ ಮಾರಾಟ ಮಾಡುವುದಿಲ್ಲ ಎಂದು ಗ್ರಾಮಸ್ಥರು ಶಪಥ ಮಾಡಿದರು.

ದೊಡ್ಡಣ್ಣ, ಮಲ್ಲೇಶ್, ಕಾರ್ಯ ಬಸವಣ್ಣ, ಅಶ್ವತ್ಥ್ ನಾರಾಯಣ್, ಲೋಕೇಶ್ ರಾಜೇ ಅರಸ್, ಹೊಸೂರು ಕುಮಾರ್, ಬೋರಲಿಂಗೇಗೌಡ, ಎನ್ ಪ್ರಸನ್ನಗೌಡ, ಪುನೀತ್, ನಂಜುಂಡಸ್ವಾಮಿ, ಶಿವಣ್ಣ ಶೆಟ್ಟಿ, ಪ್ರಕಾಶ್ ರಾಜ್ ಅರಸ್, ಸ್ವಾಮಿಗೌಡ, ಬಿ.ಜೆ ದೇವರಾಜು, ರಾಜೇ ಅರಸ್ ಸೇರಿದಂತೆ ಹಲವಾರು ದಲಿತ ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT