ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತ ಶೋಧ: ಶೀಘ್ರದಲ್ಲೇ ತನಿಖೆ

ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌
Last Updated 12 ಡಿಸೆಂಬರ್ 2020, 6:19 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳ ಶೋಧ ನಡೆದಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ, ಅಕ್ರಮಗಳ ವಿರುದ್ಧ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಲಾಗುವುದು’ ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಶುಕ್ರವಾರ ಇಲ್ಲಿ ತಿಳಿಸಿದರು.

‘ನಿವೃತ್ತ ಐಎಫ್‌ಎಸ್‌ ಅಧಿಕಾರಿಯ ಪ್ರಕರಣದಲ್ಲಿ ₹3 ಕೋಟಿಯಿಂದ ₹4 ಕೋಟಿ ಬೆಲೆ ಬಾಳುವ ನಿವೇಶನವನ್ನು ಈಗಾಗಲೇ ಮುಡಾ ಮರಳಿ ತನ್ನ ವಶಕ್ಕೆ ಪಡೆದಿದೆ. ಕ್ರಯಪತ್ರ ನೋಂದಣಿಯಾಗಿದ್ದ ಆಸ್ತಿಯನ್ನು ಮರು ವಶಕ್ಕೆ ಪಡೆದಿರುವುದು ಪ್ರಾಧಿಕಾರದ ಇತಿಹಾಸದಲ್ಲೇ ಮೊದಲು’ ಎಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಸಂದರ್ಭ ತಮ್ಮನ್ನು ಭೇಟಿಯಾದ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಒಂದೇ ಪ್ರಕರಣದ ತನಿಖೆ ಸರಿಯಲ್ಲ. ನಮಗೆ ಗೊತ್ತಿಲ್ಲದಂತೆ ಹಲವು ಹಗರಣ, ಅಕ್ರಮ ನಡೆದಿವೆ. ಇವುಗಳನ್ನು ಪತ್ತೆ ಹಚ್ಚಲಿಕ್ಕಾಗಿಯೇ ಕಡತ ಶೋಧ ನಡೆಸಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ, ಸಮಗ್ರ ತನಿಖೆಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ರಾಜೀವ್ ಹೇಳಿದರು.

‘ಮುಡಾದಿಂದ ಹಲವು ಕಾಮಗಾರಿ ನಡೆದಿವೆ. ಈ ಕಾಮಗಾರಿಗಳ ಗುಣಾತ್ಮಕತೆಯ ಪರಿಶೀಲನೆಗಾಗಿ ಭೇಟಿ ನೀಡಿರುವೆ. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚನೆ ನೀಡುವ ಜೊತೆಯಲ್ಲೇ ಕಾಮಗಾರಿಗಳ ವೇಗವನ್ನು ಹೆಚ್ಚಿಸಲು ಬೇಕಾದ ಕ್ರಮವನ್ನು ಸ್ಥಳದಲ್ಲೇ ಕೈಗೊಳ್ಳುತ್ತೇನೆ. ಯಾವುದಾದರೂ ಅಡ್ಡಿಯಿದ್ದರೆ ಪರಿಹರಿಸುವೆ’ ಎಂದು ತಿಳಿಸಿದರು.

‘ವಿಜಯನಗರ ಸೇರಿದಂತೆ ಕೆಲವು ಭಾಗಕ್ಕೆ ಸ್ಥಳೀಯವಾಗಿಯೇ ಕುಡಿಯುವ ನೀರು ಪೂರೈಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆ. ಆರಂಭದಲ್ಲಿ ಐದು ಸಾವಿರ ಮನೆಗಳಿಗೆ ಪ್ರಾಯೋಗಿಕವಾಗಿ ನೀರು ಪೂರೈಸುತ್ತೇವೆ. ಎಲ್ಲಿಯೂ ಸಮಸ್ಯೆಯಾಗದೆ ನೀರು ಪೂರೈಕೆಯಾದ ಬಳಿಕ ಸಚಿವರನ್ನು ಆಹ್ವಾನಿಸಿ ಯೋಜನೆ ಉದ್ಘಾಟಿಸಲಿದ್ದೇವೆ’ ಎಂದು ರಾಜೀವ್ ಮಾಹಿತಿ ನೀಡಿದರು.

ವಿವಿಧೆಡೆಯ ಕಾಮಗಾರಿ ಪರಿಶೀಲನೆ

ವಿಜಯನಗರ 4ನೇ ಹಂತದಲ್ಲಿನ ನೆಲ ಮಟ್ಟದ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರ, ಕೂರ್ಗಳ್ಳಿ ಗ್ರಾಮದಲ್ಲಿನ ಮಲಿನ ನೀರಿನ ಶುದ್ಧೀಕರಣ ಘಟಕ, ರೂಸ್ಟ್ ಹೋಟೆಲ್ ಹಿಂಭಾಗದ ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಕಾಳಿದಾಸ ರಸ್ತೆಯಿಂದ ಹೊರ ವರ್ತುಲ ರಸ್ತೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರಾಜೀವ್ ಪರಿಶೀಲಿಸಿದರು.

ಕುಂಬಾರ ಕೊಪ್ಪಲಿನಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ, ಮಹಾರಾಣೀಸ್ ಜ್ಯೂನಿಯರ್ ಕಾಲೇಜ್‍ನ ಮೊದಲನೇ ಅಂತಸ್ತಿನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ, ಇಟ್ಟಿಗೆಗೂಡಿನ ಲಿಂಗಣ್ಣ ವೃತ್ತದಲ್ಲಿ (ಮೃಗಾಲಯದ ಬಳಿ) ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ, ಮಾನಂದವಾಡಿ ರಸ್ತೆಯಿಂದ ಜೆ.ಪಿ.ನಗರ 1ನೇ ಹಂತದ ರೈಲ್ವೆ ಕ್ರಾಸಿಂಗ್‍ ತನಕ ಜೋಡಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳ ತಂಡದೊಂದಿಗೆ ವೀಕ್ಷಿಸಿದರು.

ಹೊರ ವರ್ತುಲ ರಸ್ತೆಯಿಂದ ಜೆ.ಪಿ.ನಗರದ ಕವಿತಾ ಬೇಕರಿ ತನಕ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಶ್ರೀರಾಂಪುರ 3ನೇ ಹಂತ ಬಡಾವಣೆಯ ಹಳೇ ಹೊರ ವರ್ತುಲ ರಸ್ತೆಯ ಪಂಕ್ತೀಕರಣದಲ್ಲಿ ಉದ್ಯಾನಕ್ಕೆ ಶಾರ್ಟ್‍ಬೇಸ್‌ಮೆಂಟ್‌ ಹಾಗೂ ಗ್ರಿಲ್ ಅಳವಡಿಸುವ ಕಾಮಗಾರಿಯನ್ನು ಇದೇ ಸಂದರ್ಭ ವೀಕ್ಷಿಸಿದ ರಾಜೀವ್‌, ನಿಗದಿತ ಸಮಯದೊಳಗೆ, ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಅಧೀಕ್ಷಕ ಎಂಜಿನಿಯರ್‌ ಶಂಕರ್, ಕಾರ್ಯಪಾಲಕ ಎಂಜಿನಿಯರ್‌ (ಉತ್ತರ) ಸತೀಶ್, ಕಾರ್ಯಪಾಲಕ ಎಂಜಿನಿಯರ್‌ (ದಕ್ಷಿಣ) ಪಾಂಡುರಂಗ ಹಾಗೂ ವಲಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT