ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಪಾಲಿಕೆ ಆದೇಶ; ವರ್ತಕರ ವಿರೋಧ

ವರಮಹಾಲಕ್ಷ್ಮಿ ವ್ರತ ನಾಳೆ; ಭಕ್ತರ ಸಂಭ್ರಮ
Last Updated 19 ಆಗಸ್ಟ್ 2021, 3:35 IST
ಅಕ್ಷರ ಗಾತ್ರ

ಮೈಸೂರು: ಶುಕ್ರವಾರದ ವರಮಹಾಲಕ್ಷ್ಮಿ ವ್ರತದ ಸಂಭ್ರಮಾಚರಣೆಗೆ ಭಕ್ತರು ಸಜ್ಜಾಗುತ್ತಿರುವಾಗಲೇ, ಪಾಲಿಕೆಯು ಹೂ ವ್ಯಾಪಾರಿಗಳ ಸ್ಥಳಾಂತರಕ್ಕೆ ಆದೇಶಿಸಿದೆ. ಈ ದಿಢೀರ್ ಆದೇಶದಿಂದ ವ್ಯಾಪಾರಿಗಳು ಅಸಹಾಯಕರಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವರಾಜ ಮಾರುಕಟ್ಟೆಯಲ್ಲಿ ಆ.18ರಿಂದ 20ರವರೆಗೂ ಹೂವಿನ ವ್ಯಾಪಾರ ಮಾಡುವಂತಿಲ್ಲ. ವರ್ತಕರು ಕಡ್ಡಾಯವಾಗಿ ಜೆ.ಕೆ. ಮೈದಾನಕ್ಕೆ ತೆರಳಬೇಕು ಎಂದು ಪಾಲಿಕೆ ಆಯುಕ್ತರು ಆದೇಶಿಸಿದ್ದು, 50 ಅಂಗಡಿಗಳ ನೂರಾರು ವರ್ತಕರು ವಿರೋಧಿಸಿದ್ದಾರೆ.

ಹಿಂದಿನ ವರ್ಷ 2 ದಿನ ಮೊದಲು ಸ್ಥಳಾಂತರದ ನೋಟಿಸ್ ನೀಡಲಾಗುತ್ತಿತ್ತು. ಆದರೆ, ಈಗ ನೋಟಿಸ್ ಕೊಟ್ಟು, ತಕ್ಷಣವೇ ಜೆ.ಕೆ. ಮೈದಾನಕ್ಕೆ ಹೋಗಿ ಎಂದು ಅಧಿಕಾರಿಗಳು ಹೇಳಿರುವುದು ವರ್ತಕರ ಕೋಪಕ್ಕೆ ಕಾರಣ. ಬುಧವಾರ ಸುರಿದ ಧಾರಾಕಾರ ಮಳೆಯಿಂದ ರಕ್ಷಣೆ ಪಡೆಯಲು ಆಗದೆ ಅವರೆಲ್ಲ ಪರದಾಡಿದ್ದಾರೆ.

ಈ ಕುರಿತು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವರ್ತಕರ ಸಂಘದ ಯತಿರಾಜ್, ‘ಜೆ.ಕೆ. ಮೈದಾನದಲ್ಲಿ ಮಳೆ ನೀರು ನಿಂತಿದೆ. ಏಕಾಏಕಿ ಅಲ್ಲಿಗೆ ಹೋಗಿ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಹೂ ವ್ಯಾಪಾರಿ ನರೇಂದ್ರಕುಮಾರ್ ಪ್ರತಿಕ್ರಿಯಿಸಿ, ‘ಕೊರೊನಾದಿಂದ ಹೆಚ್ಚು ನಷ್ಟವಾಗಿದೆ. ಜೀವನ ನಡೆಸುವುದು ದುಸ್ತರವಾಗಿದೆ. 19ರಂದು ಮಾತ್ರ ವ್ಯಾಪಾರ ನಡೆಯುತ್ತದೆ. ಹಬ್ಬದ ದಿನವಾದ 20ರಂದು ಹೆಚ್ಚಿನ ವಹಿವಾಟು ನಡೆಯದು. ಸ್ಥಳಾಂತರ ಮಾಡಿದರೆ ವ್ಯಾಪಾರಕ್ಕೆ ಕಲ್ಲು ಹಾಕಿದಂತೆ ಆಗುತ್ತದೆ’ ಎಂದು ಅಳಲು ತೋಡಿಕೊಂಡರು.

ವ್ಯಾಪಾರಿ ಮಂಜುನಾಥ್ ಪ್ರತಿಕ್ರಿಯಿಸಿ, ‘ಪಾಲಿಕೆಯ ನಿರ್ಧಾರದಿಂದ ರೈತರಿಗೂ ತೊಂದರೆಯಾಗುತ್ತದೆ. ರೈತರಿಗೆ ಸ್ಥಳಾಂತರದ ಮಾಹಿತಿ ಇಲ್ಲ. ವ್ಯಾಪಾರ ಆಗದಿದ್ದರೆ ಅವರಿಗೂ ಕಷ್ಟ. ದೇವರಾಜ ಮಾರುಕಟ್ಟೆಯಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.

ದುಬಾರಿಯಾದ ದರ: ಮಳೆಯಿಂದಾಗಿ ಹೂವಿನ ಇಳುವರಿ ಕಡಿಮೆಯಾಗಿದ್ದು, ಎಲ್ಲ ಹೂವಿನ ದರ ದುಬಾರಿಯಾಗಿದೆ.

ಮಲ್ಲಿಗೆಯು ಕೆ.ಜಿ.ಗೆ ₹400ರಿಂದ ₹1 ಸಾವಿರವಾಗಿದೆ. ಕನಕಾಂಬರ ಕೆ.ಜಿ.ಗೆ ₹1,200, ಕಾಕಡ ₹800, ಗುಲಾಬಿ ₹160 ಹಾಗೂ ಸೇವಂತಿಗೆ ₹120ಕ್ಕೆ ಏರಿಕೆ ಕಂಡಿದೆ’ ಎಂದು ವ್ಯಾಪಾರಿ ಯತಿರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT