ಬುಧವಾರ, ಸೆಪ್ಟೆಂಬರ್ 22, 2021
21 °C
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಕಾರ್ಯಕ್ರಮ ಆಯೋಜನೆ

ಮೈಸೂರು: ಎಂಟು ಸಾಧಕರಿಗೆ ‘ಗೊರುಚ ದತ್ತಿನಿಧಿ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಕೊಡ ಮಾಡುವ ‘ಗೊರುಚ ದತ್ತಿನಿಧಿ’ ಪ್ರಶಸ್ತಿಯನ್ನು ಎಂಟು ಸಾಧಕರಿಗೆ, ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2019 ಹಾಗೂ 2020ನೇ ಸಾಲಿನ ‘ಗೊರುಚ ಶರಣ ಪ್ರಶಸ್ತಿ’ಯನ್ನು ಕ್ರಮವಾಗಿ ಡಾ.ಸಿ.ವೀರಣ್ಣ, ಡಾ.ಬಸವರಾಜ ಸಾದರ, ‘ಗೊರುಚ ಜಾನಪದ ಪ್ರಶಸ್ತಿ’ಯನ್ನು ಡಾ.ಬಿ.ಎಸ್‌.ಸ್ವಾಮಿ, ಡಾ.ಎಚ್‌.ಟಿ.ಪೋತೆ, ‘ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪ್ರೊ.ಬಿ.ಆರ್‌.ಪೊಲೀಸ ಪಾಟೀಲ, ಡಾ.ಬಸವರಾಜ ಸಬರದ, ‘ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪಿ.ಡಿ.ವಾಲೀಕಾರ ಹಾಗೂ ಡಾ.ಕುರುವ ಬಸವರಾಜ್‌ ಅವರಿಗೆ ಪ್ರದಾನ ಮಾಡಲಾಯಿತು.

ಅನಾರೋಗ್ಯದ ನಿಮಿತ್ತ ಡಾ.ಸಿ.ವೀರಣ್ಣ, ಡಾ.ಬಿ.ಎಸ್‌.ಸ್ವಾಮಿ, ಡಾ.ಬಸವರಾಜ ಸಾದರ ಹಾಗೂ ಡಾ.ಬಸವರಾಜ ಸಬರದ ಗೈರುಹಾಜರಾಗಿದ್ದರು. ಬಿ.ಎಸ್‌.ಸ್ವಾಮಿ ಪರವಾಗಿ ಅವರ ಮೊಮ್ಮಗ ವಿನಯ್‌ ಪ್ರಶಸ್ತಿ ಸ್ವೀಕರಿಸಿದರು.

ಗೊರುಚ ಶರಣ ಮತ್ತು ಜಾನಪದ ಪ್ರಶಸ್ತಿಗಳು ತಲಾ ₹25 ಸಾವಿರ ಹಾಗೂ ಗೊರುಚ ಗ್ರಂಥ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿವೆ.

ಅಭಿನಂದನಾ ನುಡಿಗಳಾಡಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ‘ಗೊ.ರು.ಚನ್ನಬಸಪ್ಪನವರಿಗೆ 84 ವರ್ಷಗಳು ತುಂಬಿದಾಗ ನಡೆದ ಅಭಿನಂದನಾ ಸಮಾರಂಭದಲ್ಲಿ ನೀಡಿದ್ಧ ₹11,11,111 ಗೌರವಧನಕ್ಕೆ ಗೊರುಚ ಅವರು ಸ್ವಂತದ ₹4 ಲಕ್ಷ ಸೇರಿಸಿ ಶರಣ ಸಾಹಿತ್ಯ ಪರಿಷತ್‌ಗೆ ಕೊಡುಗೆಯಾಗಿ ನೀಡಿದ್ದರು. ಈ ಹಣವನ್ನು ‘ಗೊರುಚ ದತ್ತಿನಿಧಿ’ಯಾಗಿ ಸ್ಥಾಪಿಸಿ ಈ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗುತ್ತಿದೆ’ ಎಂದರು.

‘ಭೂದಾನ ಚಳವಳಿಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ವಿನೋಬಾ ಭಾವೆ ಅವರಿಗೆ ಗೊರುಚ ಅವರು ಚಿನ್ನದ ಉಂಗುರವನ್ನು ದಾನವಾಗಿ ನೀಡಿದ್ದರು. ಆಗ ಯುವಕರಾಗಿದ್ದ ಗೊರುಚ ಅವರನ್ನು ಕರೆದ ಭಾವೆ, ‘ನೀನು ಚಿನ್ನದ ಉಂಗುರ ನೀಡುವುದು ಹೆಚ್ಚಲ್ಲ, ನಿನ್ನ ಜೀವನದಲ್ಲಿ ಚಿನ್ನವನ್ನೇ ಧರಿಸದೇ ಇರುವುದು ಮುಖ್ಯ’ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕೆ, ‘ನಾನು ಸಾಯುವ ತನಕ ಅಭೂಷಣನಾಗಿಯೇ ಬದುಕುತ್ತೇನೆ’ ಎಂದು ಗೊರುಚ ವಾಗ್ದಾನ ಮಾಡಿದ್ದಾರೆ’ ಎಂದು ತಿಳಿಸಿದರು.

‘ಪ್ರಶಸ್ತಿಗೆ ಭಾಜನರಾಗಿರುವ ಈ ಸಾಧಕರು ಯಾರೂ ಅರ್ಜಿ ಹಾಕಿದವರಲ್ಲ. ಶರಣ ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರಕ್ಕೆ ಗಮನಾರ್ಹ ಸಾಧನೆ ಮಾಡಿದವರನ್ನೇ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಎಚ್‌.ಟಿ.ಪೋತೆ ಮಾತನಾಡಿ, ‘ದಲಿತ ಎಂದರೆ ಪ್ರಜ್ಞೆ. ಸಮಾನತೆ, ನ್ಯಾಯದ ಸಾಕ್ಷಿಪ್ರಜ್ಞೆ. ಬಸವಣ್ಣ ಸೇರಿದಂತೆ ಶಿವಶರಣರು ಸಮಾನತೆ, ನ್ಯಾಯಕ್ಕಾಗಿ ಹೋರಾಡಿದ್ದವರು. ಹೀಗಾಗಿ, ಶರಣ ಸಾಹಿತ್ಯವನ್ನು ದಲಿತ ಚಳವಳಿಯೆಂದು ನಾನು ಕರೆದಿದ್ದೇನೆ’ ಎಂದು ತಿಳಿಸಿದರು.

ಪಿ.ಡಿ.ವಾಲೀಕಾರ ಹಾಗೂ ಡಾ.ಕುರುವ ಬಸವರಾಜ್‌ ತಮ್ಮ ಅನಿಸಿಕೆ ಹಂಚಿಕೊಂಡರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಕುಂತಲಾ ಜಯದೇವ್‌ ಅವರು ಶರಣ ಸಾಹಿತ್ಯ ಪರಿಷತ್‌ಗೆ ಈಗಾಗಲೇ ₹5 ಲಕ್ಷ ದತ್ತಿ ನೀಡಿದ್ದು, ಈಗ ಕಾರ್ಯಕ್ರಮಗಳ ಖರ್ಚು–ವೆಚ್ಚಗಳಿಗಾಗಿ ಮತ್ತೆ ₹5 ಲಕ್ಷವನ್ನು ಪರಿಷತ್‌ಗೆ ನೀಡಿದರು.

‘ತಂದೆ–ತಾಯಿ ಹೆಸರಿನಲ್ಲಿ ದತ್ತಿನಿಧಿ’

ಪ್ರಶಸ್ತಿ ಸ್ವೀಕರಿಸಿದ ಬಿ.ಆರ್‌.ಪೊಲೀಸ ಪಾಟೀಲ ಮಾತನಾಡಿ, ‘ಲಾವಣಿ ತತ್ವಪದ, ತ್ರಿಪದಿ ಸಾಹಿತ್ಯ ಮರೆಯಾಗುತ್ತಿದೆ. ಅದನ್ನು ಪ್ರಸ್ತುತಗೊಳಿಸಿ ಜನರ ಬಳಿಗೆ ಕೊಂಡೊಯ್ಯುವ ಕೆಲಸದಲ್ಲಿ ನಿರತನಾಗಿದ್ದೇನೆ. ಈ ಪ್ರಶಸ್ತಿಯೊಂದಿಗೆ ಬಂದ ನಗದು ಬಹುಮಾನದೊಂದಿಗೆ ನನ್ನ ₹15 ಸಾವಿರ ಸೇರಿಸಿ, ತಾಯಿ ಲಕ್ಷ್ಮೀಬಾಯಿ– ತಂದೆ ರೇವಣ ಸಿದ್ದಪ್ಪಗೌಡ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುತ್ತೇನೆ’ ಎಂದರು.

ಶರಣ ಸಾಹಿತ್ಯ ಪರಿಷತ್‌ಗೆ ಅನೇಕರು ಬೆಂಬಲ, ಸಹಕಾರ ನೀಡುತ್ತಿದ್ದಾರೆ. ಇಂತಹ ಸಹೃದಯರು ಇರುವವರೆಗೂ ನಾನು ಶ್ರೀಮಂತ.

– ಗೊ.ರು.ಚನ್ನಬಸಪ್ಪ, ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌

ಪ್ರಶಸ್ತಿಗಾಗಿ ಅರ್ಜಿ ಹಾಕಿ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಹೇರುವುದು ಸಾಮಾನ್ಯ. ಆದರೆ, ಇಲ್ಲಿ ಪ್ರತಿಭೆಗಳಿಗೆ ಮಣೆ ಹಾಕಿರುವುದು ಒಳ್ಳೆಯ ಸಂಗತಿ.

– ತೋಂಟದ ಸಿದ್ಧರಾಮ ಸ್ವಾಮೀಜಿ, ಗೌರವಾಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು