ಗುರುವಾರ , ಮೇ 6, 2021
30 °C
ಮಾಧವ ಗಾಡ್ಗೀಳ್ ವರದಿ ಜಾರಿಗೆ ಒಕ್ಕೊರಲ ಆಗ್ರಹ

ಪಶ್ಚಿಮಘಟ್ಟ: ಸರ್ಕಾರಗಳಿಗೆ ತಲೆನೂ ಇಲ್ಲ, ಹೃದಯವೂ ಇಲ್ಲ–ಯಲ್ಲಪ್ಪರೆಡ್ಡಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರಗಳಿಗೆ ಹೃದಯವೂ ಇಲ್ಲ, ಕನಿಷ್ಠ ತಲೆಯೂ ಇಲ್ಲ ಎಂದು ಪರಿಸರತಜ್ಞ ಡಾ.ಯಲ್ಲಪ್ಪರೆಡ್ಡಿ ಕಿಡಿಕಾರಿದರು.

ಸ್ವದೇಶಿ ಜಾಗರಣ ಮಂಚ್ ಹಾಗೂ ಜನಚೇತನ ಟ್ರಸ್ಟ್ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ‘ಪಶ್ಚಿಮಘಟ್ಟ ಉಳಿಸಿ– ಅಭಿಯಾನ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈಗ ದೇಶದಲ್ಲಿ ಒಂದು ವಿಧದ ಮೌನ ಆವರಿಸಿದೆ. ಕೊಡಗಿನಲ್ಲಿ ಏನೇ ಆದರೂ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂಬ ಜಾಣ ಮೌನ ಎಲ್ಲೆಡೆ ಇದೆ. ಕೊಡಗಿನ ಸಂತ್ರಸ್ಥರಿಗೆ ಬ್ರೆಡ್‌, ಬಿಸ್ಕತ್, ನೀರಿನ ಬಾಟಲಿ ನೀಡಿದ ಸುದ್ದಿಗಳೇ ದೊಡ್ಡದಾಗಿ ಪ್ರಸಾರವಾಗುತ್ತಿದೆ. ಆದರೆ, ಯಾವ ಮಾಧ್ಯಮಗಳೂ ಅನಾಹುತಕ್ಕೆ ಯಾರು ಕಾರಣ? ಏಕೆ ಮತ್ತು ಹೇಗೆ? ಎಂಬ ವಿಶ್ಲೇಷಣೆ ನಡೆಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪಶ್ಚಿಮಘಟ್ಟಗಳು ಭೂದೇವಿಯ ಸ್ತನಗಳು. ಇವುಗಳನ್ನು ಜತನದಿಂದ ಕಾಯ್ದುಕೊಂಡರೆ ಹಾಲು ಸಿಗುತ್ತದೆ. ಕತ್ತರಿಸಿದರೆ ಕೊಡಗಿನಲ್ಲಿ ಈಚೆಗೆ ನಡೆದ ಅನಾಹುತ ಸಂಭವಿಸುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶ ಒತ್ತುವರಿ ಆಗಿದೆ ಎಂದು ಎ.ಟಿ.ರಾಮಸ್ವಾಮಿ ವರದಿ ಹೇಳಿದೆ. ಇದಕ್ಕೊಂದು ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಲಾಗಿದೆ. ವರದಿಯಲ್ಲಿ ಸಾಕ್ಷ್ಯಾಧಾರಗಳಿದ್ದರೂ ಸರ್ಕಾರ ಮಾತ್ರ ಪ್ರಕರಣಗಳನ್ನು ದಾಖಲಿಸುತ್ತಿಲ್ಲ. ಇದು ಸದ್ಯದ ಸ್ಥಿತಿ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹಸಂಯೋಜಕ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ‘ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಅನಾಹುತಗಳ ನಂತರವಾದರೂ ಸರ್ಕಾರ ಎಚ್ಚೆತ್ತುಕೊಂಡು ಮಾಧವ ಗಾಡ್ಗೀಳ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ಈ ವರದಿ ವಿರುದ್ಧ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮೊದಲು ಹೋರಾಟ ಆರಂಭವಾಯಿತು. ಈಗ ಅತಿ ಹೆಚ್ಚಿನ ಅನಾಹುತ ಅದೇ ಜಿಲ್ಲೆಯಲ್ಲಿ ಸಂಭವಿಸಿದೆ. ವರದಿಯಲ್ಲಿ ಕೊಡಗಿನ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಬೇಕು, ಅಭಿವೃದ್ಧಿ ನಂತರದ ಆಯ್ಕೆಯಾಗಬೇಕು ಎಂದು ಹೇಳಿದೆ. ಇದನ್ನು ಮರೆತಿದ್ದರಿಂದಲೇ ಆ ತಾಲ್ಲೂಕುಗಳು ಭಾರಿ ಸಂಕಷ್ಟಕ್ಕೆ ಸಿಲುಕಿವೆ ಎಂದು ವಿಶ್ಲೇಷಿಸಿದರು.

ನದಿ ಜೋಡಣೆ ಹಾಗೂ ನದಿ ತಿರುವುಗಳಂತಹ ಹುಚ್ಚು ಹುಚ್ಚು ಯೋಜನೆಗಳನ್ನು ಕೈ ಬಿಡಬೇಕು. ಇವೆಲ್ಲವೂ ಪರಿಸರಕ್ಕೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು