ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಗದ್ದುಗೆ’ಗಾಗಿ ತಂತ್ರಗಾರಿಕೆ

ಪಂಚಾಯಿತಿ ಪಾರಮ್ಯಕ್ಕಾಗಿ ಪಕ್ಷಗಳ ಕಾರ್ಯತಂತ್ರ: ಸ್ಥಳೀಯರಿಗೆ ಹೊಣೆ
Last Updated 4 ಜನವರಿ 2021, 3:36 IST
ಅಕ್ಷರ ಗಾತ್ರ

ಮೈಸೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ನಿಗದಿ ಪಡಿಸುವ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಪ್ರಕಟಿಸಿದ ಬೆನ್ನಿಗೆ, ‘ಗ್ರಾಮ ಗದ್ದುಗೆ’ಗಾಗಿ ತಂತ್ರಗಾರಿಕೆ ಬಿರುಸುಗೊಂಡಿದೆ.

ಚುನಾವಣೆಯಲ್ಲಿ ತಮ್ಮ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಹೇಳಿಕೆ ಮೂಲಕ ಬೀಗಿದ್ದ ರಾಜಕೀಯ ಪಕ್ಷಗಳು, ಇದೀಗ ತಮ್ಮ ನಿಷ್ಠರಿಗೆ ಪಂಚಾಯಿತಿಯ ಚುಕ್ಕಾಣಿ ಹಿಡಿಯಲು ಅನುಕೂಲಕಾರಿಯಾದ ಕಾರ್ಯತಂತ್ರ ರೂಪಿಸಲು ಮುಂದಾಗಿವೆ.

ಜಿಲ್ಲೆಯಲ್ಲಿರುವ 250 ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ನೂರು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದರೆ; ಜೆಡಿಎಸ್‌ 140ರಿಂದ 150 ಪಂಚಾಯಿತಿಗಳಲ್ಲಿ, ಕಾಂಗ್ರೆಸ್‌ 195 ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದೆ.

ಬೆಂಬಲಕ್ಕೆ ಉಪಾಧ್ಯಕ್ಷ ಸ್ಥಾನ: ‘140ರಿಂದ–150 ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್‌ ಬೆಂಬಲಿತರೇ ಚುಕ್ಕಾಣಿ ಹಿಡಿಯಲಿದ್ದಾರೆ. ಆಯಾ ಕ್ಷೇತ್ರದ ಶಾಸಕರು, ಪರಾಜಿತ ಅಭ್ಯರ್ಥಿಗಳೇ ಪಂಚಾಯಿತಿ ಚುಕ್ಕಾಣಿಗಾಗಿ ಕಾರ್ಯತಂತ್ರ ರೂಪಿಸಲಿದ್ದಾರೆ. ಇವರಿಬ್ಬರೂ ಇಲ್ಲದ ಕಡೆ ಜಿಲ್ಲಾ ಘಟಕ ತಂತ್ರಗಾರಿಕೆ ನಡೆಸಲಿದೆ’ ಎಂದು ಜೆಡಿಎಸ್‌ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಎನ್‌.ನರಸಿಂಹಮೂರ್ತಿ ಹೇಳಿದರು.

‘ಮೈತ್ರಿಯ ಕುರಿತಂತೆ ಹೈಕಮಾಂಡ್‌ ಯಾವುದೇ ಸೂಚನೆ ನೀಡಿಲ್ಲ. ಮೀಸಲಾತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಜೆಪಿಯವರು ಮಾಡಿಸಿಕೊಂಡರೂ, ಕೆಲವೊಂದು ಪಂಚಾಯಿತಿಗಳಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಜೆಡಿಎಸ್‌ ಬೆಂಬಲಿತರ ಬೆಂಬಲ ಅನಿವಾರ್ಯವಾಗಿದೆ. ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ–ಜೆಡಿಎಸ್‌ ತಲಾ 10 ಬೆಂಬಲಿತ ಸದಸ್ಯರನ್ನು ಹೊಂದಿವೆ. ಜೆಡಿಎಸ್‌ನ ಮೂವರು ಬೆಂಬಲಿತರು ಇಲ್ಲಿದ್ದಾರೆ. ನಮಗೆ ಯಾವ ಪಕ್ಷ ಉಪಾಧ್ಯಕ್ಷ ಸ್ಥಾನ ನೀಡಲಿದೆ, ಆ ಪಕ್ಷವನ್ನು ನಮ್ಮ ಬೆಂಬಲಿತರು ಬೆಂಬಲಿಸಲಿದ್ದಾರೆ’ ಎಂದು ಜೆಡಿಎಸ್‌ ಅಧ್ಯಕ್ಷರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡಲ ಅಧ್ಯಕ್ಷರಿಗೆ ಹೊಣೆಗಾರಿಕೆ: ‘ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಡಲ ಅಧ್ಯಕ್ಷರಿಗೆ ಪಂಚಾಯಿತಿ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಆಯಾ ಭಾಗದ ಪ್ರಮುಖರು ಮಹತ್ವದ ತೀರ್ಮಾನದಲ್ಲಿ ಭಾಗಿಯಾಗಲಿದ್ದಾರೆ. ಸ್ಥಳೀಯವಾಗಿ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಸೂಚಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಹೇಳಿದರು.

‘ಮೀಸಲಾತಿ ನಿಗದಿಯಲ್ಲಿ ಮೋಸ ತಪ್ಪಿಸಲಾಗಲ್ಲ’
‘ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಸರ್ಕಾರ ತನಗಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಿದೆ. ಇದರಿಂದ ನಮಗೊಂದಿಷ್ಟು ಮೋಸ ಆಗಲಿದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದರ ನಡುವೆಯೂ ಜಿಲ್ಲೆಯಲ್ಲಿ ನಮ್ಮದೇ ಮೇಲುಗೈ’ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ವ್ಯಕ್ತಪಡಿಸಿದರು.

‘ಹೆಚ್ಚಿನ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿಲ್ಲಾ ಗ್ರಾಮಾಂತರ ಘಟಕ ಕಾರ್ಯತಂತ್ರ ರೂಪಿಸುತ್ತಿದೆ. ಆಯಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಈ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ವಿದ್ಯಮಾನಗಳ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದೆ. ಶಾಸಕರು, ಮಾಜಿ ಶಾಸಕರ ಜೊತೆಗೂ ನಿರಂತರ ಸಂಪರ್ಕದಲ್ಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT