ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನು ಭಿಕ್ಷೆ ಕೇಳುತ್ತಿಲ್ಲ: ಬಿಎಸ್‌ವೈ ವಿರುದ್ಧ ಕಿಡಿಕಾರಿದ ವಿಶ್ವನಾಥ್

ಚುನಾವಣೆಗೆ ಸ್ಪರ್ಧಿಸಬೇಡಿ ಎಂದಿದ್ದರು ಎಂದ ಸೋಮಶೇಖರ್
Last Updated 25 ಜನವರಿ 2020, 12:40 IST
ಅಕ್ಷರ ಗಾತ್ರ

ಮೈಸೂರು: ‘ನಾವು ಭಿಕ್ಷೆ ಕೇಳುತ್ತಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ’ ಎಂದು ಬಿಜೆಪಿ ಮುಖಂಡ ಅಡಗೂರು ಎಚ್‌.ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದು ನಿಜ. ಆದರೆ, ಕ್ಷೇತ್ರ ಉಳಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಲಾಯಿತು. ಕೊಟ್ಟ ಮಾತು ಏನು ಎಂಬುದು ಅವರಿಗೆ ಗೊತ್ತಿದೆ. ಅದನ್ನು ಉಳಿಸಿಕೊಂಡರೆ ಸಾಕು ಎಂದು ಅವರು ಶನಿವಾರ ಸುತ್ತೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಅವರಿಂದ ನಮಗೆ ಕಳಂಕ ಬಂದಿದೆ. ಸೋತಿರುವ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ನಾವೇನು ಆ ಸ್ಥಾನ ಬೇಕು ಎಂದು ಕೇಳುತ್ತಿಲ್ಲ’ ಎಂದು ಹರಿಹಾಯ್ದರು.

ಸೋಲು ಮತ್ತು ನೈತಿಕತೆ ಬೇರೆ ವಿಚಾರ. ಅರುಣ್ ಜೇಟ್ಲಿ ಅವರೂ ಚುನಾವಣೆಯಲ್ಲಿ ಸೋತಿದ್ದರು. ಅವರಿಗೆ ಸಚಿವ ಸ್ಥಾನ ನೀಡಿ ಅವರ ಅನುಭವ ಮತ್ತು ಹಿರಿಯತನವನ್ನು ಆಡಳಿತದಲ್ಲಿ ಬಳಕೆ ಮಾಡಿಕೊಳ್ಳಲಾಯಿತು. ಹಾಗೆಯೇ, ನಮ್ಮ ಹಿರಿತನ ಮತ್ತು ಅನುಭವವನ್ನು ಬಳಕೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಇದು ತಪ್ಪೇ ಎಂದು ಪ್ರಶ್ನಿಸಿದರು.

ಸೋತರು ಎಂಬ ಒಂದೇ ಕಾರಣಕ್ಕೆ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ಬೇರೆಯವರಿಗೆ ದೊರೆತಿರುವ ಅವಕಾಶಗಳನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ಈ ಕುರಿತು ಯಡಿಯೂರಪ್ಪ ಅವರ ಜತೆ ಇಂದು ಮಾತನಾಡುವೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ‘ಈಗ ಯಾರು ಉಪಚುನಾವಣೆಯಲ್ಲಿ ಸೋತಿದ್ದಾರೋ ಅವರಿಗೆ ಯಡಿಯೂರಪ್ಪಚುನಾವಣೆಗೆ ಸ್ಪರ್ಧಿಸುವುದು ಬೇಡ. ಸೋತರೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದರು. ಜತೆಗೆ, ಮೇ ತಿಂಗಳಿನಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿಯೂ ಭರವಸೆ ನೀಡಿದ್ದರು. ಅವರ ಮಾತಿನಂತೆ ಶಂಕರ್ ನಡೆದುಕೊಂಡರು. ಉಳಿದವರು ಸ್ಪರ್ಧಿಸಿ ಸೋತರು. ಈಗ ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿ ಅವರಿಗೆ ಸೇರಿದ ವಿಚಾರ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇಂತಹ ದಿನವೇ ಸಚಿವ ಸ್ಥಾನ ಕೊಡಿ ಎಂದು ಯಾರೂ ಕೇಳುತ್ತಿಲ್ಲ. ಬೇಗನೇ ಕೊಡಿ ಎಂದು ಒತ್ತಡ ಹೇರಲೂ ಆಗದು. ಚುನಾವಣೆಯಲ್ಲಿ ಏನು ಹೇಳಿದ್ದೇವೆ, ಈಗ ಏನು ಮಾಡಬೇಕು ಎಂಬ ಅರಿವು ಮುಖ್ಯಮಂತ್ರಿ ಅವರಿಗೆ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವೂ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT