ಮಂಗಳವಾರ, ಅಕ್ಟೋಬರ್ 26, 2021
21 °C
ಮಳೆಯಾಶ್ರಿತ ಜಮೀನಿನ ಬೆಳೆಗಳಿಗೆ ಜೀವಕಳೆ; ಹಲವೆಡೆ ವಿದ್ಯುತ್ ವ್ಯತ್ಯಯ

ಮೈಸೂರು: ಜಿಲ್ಲೆಯಾದ್ಯಂತ ಭಾರಿ ವರ್ಷಧಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಭಾರಿ ವರ್ಷಧಾರೆ ಸುರಿದಿದೆ. ಸಣ್ಣದಾಗಿ ಆರಂಭವಾದ ಮಳೆಯು ಕ್ರಮೇಣ ಬಿರುಸು ಪಡೆದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹದವಾಗಿ ಸುರಿಯಿತು. ಗಾಳಿಯ ವೇಗ ಕಡಿಮೆ ಇದ್ದುದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಅತ್ಯಂತ ಹೆಚ್ಚು ಮಳೆ ಹುಣಸೂರು ತಾಲ್ಲೂಕಿನ ಮರದೂರು ಹಾಗೂ ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯಲ್ಲಿ ತಲಾ 5 ಸೆಂ.ಮೀನಷ್ಟು ಬಿದ್ದಿದೆ. ಉಳಿದಂತೆ, ಎಲ್ಲ ತಾಲ್ಲೂಕುಗಳ ವ್ಯಾಪ್ತಿಗಳಲ್ಲಿ 1ರಿಂದ 4 ಸೆಂ.ಮೀನಷ್ಟು ಮಳೆಯಾಗಿದೆ.

ವಿವಿಧ ತಾಲ್ಲೂಕುಗಳಲ್ಲಿ ಬಿತ್ತನೆಯಾಗಿ ಮಳೆಯ ನಿರೀಕ್ಷೆಯಲ್ಲಿದ್ದ ಮುಸುಕಿನ ಜೋಳದ ಬೆಳೆಯು ಹಸನಾಗಲು ಮಳೆಯು ಸಹಕಾರಿಯಾಗಿದೆ. ಹುರುಳಿ, ಧನಿಯಾ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೂ ಮಳೆ ಪ್ರಯೋಜನಕಾರಿಯಾಗಿದೆ. ತೋಟಗಾರಿಕಾ ಬೆಳೆಗಳಿಗೂ ಮಳೆ ಸಹಕಾರಿಯಾಗಿದ್ದು, ಬಹುತೇಕ ರೈತರಲ್ಲಿ ನೆಮ್ಮದಿ ತರಿಸಿದೆ.

ನಗರದಲ್ಲಿ ವಿದ್ಯುತ್ ವ್ಯತ್ಯಯ
ಮೈಸೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಕವಿದ ಮೋಡಗಳು ಭಾರಿ ಮಳೆಯನ್ನೇ ತರಿಸಿದವು. ನಗರ ವ್ಯಾಪ್ತಿಯಲ್ಲಿ 4 ಸೆಂ.ಮೀನಷ್ಟು ಮಳೆ ಸುರಿದಿದೆ. ದಸರಾ ಮಹೋತ್ಸವದ ದೀಪಾಲಂಕಾರ ಸಿದ್ಧತಾ ಕಾರ್ಯಕ್ಕೆ ಮಳೆ ಅಡ್ಡಿಯಾಯಿತು. ಕೆಲವೆಡೆ ಜೋಡಿಸಲಾಗುತ್ತಿದ್ದ ಬಲ್ಬ್‌ಗಳು ಒಡೆದು ಹೋದವು. ಮತ್ತೆ ಕೆಲವೆಡೆ ಎಲೆಕ್ಟ್ರಾನಿಕ್ ಪರಿಕರಗಳಿಗೆ ಹಾನಿಯಾಯಿತು.

ಮಳೆಯಿಂದ ಬಹುತೇಕ ರಸ್ತೆಗಳಲ್ಲಿ ನೀರು ಜೋರಾಗಿಯೇ ಹರಿಯಿತು. ಚರಂಡಿಗಳಲ್ಲಿ ಕಸಕಡ್ಡಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿಕೊಂಡು ರಸ್ತೆಯ ಮೇಲೆ ನೀರು ಹರಿಯಿತು. ಅಗ್ರಹಾರ ವೃತ್ತ, ದೊಡ್ಡಗಡಿಯಾರದ ಆಸುಪಾಸು, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ ನೀರು ನಿಂತಿತ್ತು. ಕೆಲವೆಡೆ ಒಳಚರಂಡಿ ಪೈಪುಗಳು ಕಟ್ಟಿಕೊಂಡು ಮ್ಯಾನ್‌ಹೋಲ್‌ಗಳು ನೀರು ಉಕ್ಕಿತು.

ಮಳೆ ಬಿರುಸು ಪಡೆದ ನಂತರ ನಗರದ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಮರದ ಸಣ್ಣ ಸಣ್ಣ ರೆಂಬೆಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಹಲವೆಡೆ ವಿದ್ಯುತ್ ಕಡಿತ ಮಾಡಲಾಯಿತು. ಸೆಸ್ಕ್‌ನ ದೂರು ವಿಭಾಗದಲ್ಲಿ ದೂರವಾಣಿ ಕರೆಗಳು ರಾತ್ರಿ 10ರವರೆಗೂ ರಿಂಗಣಿಸುತ್ತಲೇ ಇದ್ದವು. ಕೆಲವೆಡೆ ಸೆಸ್ಕ್ ಸಿಬ್ಬಂದಿ ಮಳೆಯಲ್ಲೇ ದುರಸ್ಥಿ ಕಾರ್ಯ ನಡೆಸಿದರೆ, ಮತ್ತೆ ಕೆಲವೆಡೆ ಮಳೆ ನಿಲ್ಲುವವರೆಗೂ ವಿದ್ಯುತ್‌ಗಾಗಿ ನಾಗರಿಕರು ಕಾಯಬೇಕಾಯಿತು. ಶಕ್ತಿನಗರದ ಬಹುತೇಕ ಭಾಗಗಳು ಕತ್ತಲಿನಲ್ಲೇ ಮುಳುಗಿದ್ದವು.

ಮಳೆ ವಿವರ: ಮೈಸೂರು ತಾಲ್ಲೂಕಿನ ದೊಡಮಾರಗೌಡನಹಳ್ಳಿ 5 ಸೆಂ.ಮೀ, ನಗರದಲ್ಲಿ 4, ಜಯಪುರದಲ್ಲಿ 3.5, ಮರಟಿಕ್ಯಾತನಹಳ್ಳಿ 3, ಹುಣಸೂರು ತಾಲ್ಲೂಕಿನ ಮರದೂರಿನಲ್ಲಿ 5, ಬಿಳಿಕೆರೆಯಲ್ಲಿ 4.5, ಬಿಳಿಗೆರೆಯಲ್ಲಿ 3, ಉದ್ದೂರು 3 ಸೆಂ.ಮೀ ಮಳೆಯಾಗಿದೆ.

ಕೆ.ಆರ್.ನಗರ ಹೆಬ್ಬಾಳದಲ್ಲಿ 4, ತಿಪ್ಪೂರುನಲ್ಲಿ 3, ಕರ್ಪೂರವಳ್ಳಿ 2, ನಂಜನಗೂಡು ತಾಲ್ಲೂಕಿನ ಹೊಸಕೋಟೆ, ದೇಬೂರು, ತಾಂಡವಪುರದಲ್ಲಿ ತಲಾ 3, ಎಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆಯಲ್ಲಿ 3, ಪಿರಿಯಾಪಟ್ಟಣದ ಶೆಟ್ಟಿಹಳ್ಳಿ 2.5, ಬೆಟ್ಟದತುಂಗಾದಲ್ಲಿ 2, ತಿ.ನರಸೀಪುರ ತಾಲ್ಲೂಕಿನ ಕೊಳತ್ತೂರಿನಲ್ಲಿ 3, ಹೊಳೆಸಾಲುವಿನಲ್ಲಿ 2 ಸೆಂ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋ‍‍ಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.