ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ ಕವಿಗೋಷ್ಠಿ: ಕಂಬಾರ ಉದ್ಘಾಟನೆ, ಶಿವಪ್ರಕಾಶ್ ಅಧ್ಯಕ್ಷತೆ

Last Updated 3 ಸೆಪ್ಟೆಂಬರ್ 2022, 8:30 IST
ಅಕ್ಷರ ಗಾತ್ರ

ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪ್ರಧಾನ ಕವಿಗೋಷ್ಠಿಯು ಅ.3ರಂದು ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ ಮತ್ತು ಕವಿ ಡಾ.ಎಚ್‌.ಎಸ್.ಶಿವ‍ಪ್ರಕಾಶ್‌ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ತಿಳಿಸಿದರು.

‘ಜಗನ್ಮೋಹನ ಅರಮನೆ ಸಭಾಂಗಣ ಅಥವಾ ಮೈಸೂರು ವಿ.ವಿ ಸೆನೆಟ್ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಸಲಾಗುವುದು. ಕನ್ನಡದೊಂದಿಗೆ ತುಳು, ಕೊಡವ, ಅರೆಭಾಷೆ, ಸಂಸ್ಕೃತ, ಕೊಂಕಣಿ ಮೊದಲಾದ ಭಾಷೆಗಳ 40 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ಬಹು ಭಾಷಾ ಕವಿಗೋಷ್ಠಿ ಇದಾಗಿರಲಿದೆ’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಪ್ರಸಿದ್ಧ ಕವಿಗಳನ್ನು ನಾವೇ ಆಹ್ವಾನಿಸಲಿದ್ದೇವೆ. ರಾಜ್ಯದ ಎಲ್ಲ ಭಾಗದವರಿಗೂ ಪ್ರಾತಿನಿಧ್ಯ ಇರಲಿದೆ. ಕವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ವ್ಯವಸ್ಥಿತ, ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ನಡೆಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ₹ 25 ಲಕ್ಷ ಅನುದಾನ ಕೋರಲಾಗಿದೆ’ ಎಂದು ಹೇಳಿದರು.

ವಿನೂತನ ಕಾರ್ಯಕ್ರಮ:‘ಈ ಬಾರಿ ಕವಿಗೋಷ್ಠಿಗಳೊಂದಿಗೆ ‘ದಸರಾ ಕಾವ್ಯ ಸಂಭ್ರಮ’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.28ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ. ಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಹಾಸ್ಯ ಕವಿಗೋಷ್ಠಿ ಜರುಗಲಿದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಲಿದ್ದಾರೆ. ಬಿ.ಆರ್.ಲಕ್ಷ್ಮಣರಾವ್, ಡುಂಡಿರಾಜ್‌, ಈರಪ್ಪ ಕಂಬಳಿ ಸೇರಿದಂತೆ 20 ಮಂದಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜನಪದ ಕಾವ್ಯ ಸಂಭ್ರಮ ನಡೆಯಲಿದೆ. ಡಾ.ಪಿ.ಕೆ.ರಾಜಶೇಖರ್‌ ಮತ್ತು ತಂಡದವರು ಹಾಗೂ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ’ ಎಂದು ವಿವರಿಸಿದರು.

ರಾಣಿ ಬಹದ್ದೂರ್ ಸಭಾಂಗಣ:‘ಸೆ.30ರಂದು ಬೆಳಿಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ. 40 ಕವಿಗಳು ಭಾಗವಹಿಸಲಿದ್ದಾರೆ. ಆ ಸಭಾಂಗಣದಲ್ಲೇ, ಅ.1ರಂದು ಬೆಳಿಗ್ಗೆ 10.30ಕ್ಕೆ ‘ಚಿಗುರು’ ಕವಿಗೋಷ್ಠಿ ನಡೆಸಲಾಗುತ್ತದೆ. 40 ಮಂದಿ ಉದಯೋನ್ಮುಖ ಕವಿಗಳು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಉಪ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, ‘ಪ್ರಧಾನ ಕವಿಗೋಷ್ಠಿಗೆ ಖ್ಯಾತನಾಮರನ್ನು ನಾವೇ ಆಹ್ವಾನಿಸುತ್ತೇವೆ. ಚಿಗುರು ಮತ್ತು ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಉಳ್ಳವರು ಸಮಿತಿಯನ್ನು ಸಂಪರ್ಕಿಸಬಹುದು (ಮೊ.ಸಂಖ್ಯೆ: 9964177512). ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಅವಕಾಶ ಕಲ್ಪಿಸಲಾಗುತ್ತದೆ’ ಎಂದರು.

‘ಪ್ರಧಾನ ಕವಿಗೋಷ್ಠಿಯ ಉದ್ಘಾಟಕರು ಮತ್ತು ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರುವುದು ಇರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT