ಗುರುವಾರ , ಅಕ್ಟೋಬರ್ 22, 2020
25 °C

ಹೆದ್ದಾರಿ ಮೇಲ್ಸೇತುವೆ ಭೂಸ್ವಾಧೀನದಲ್ಲಿ ಭಾರಿ ಭ್ರಷ್ಟಾಚಾರ: ಹರ್ಷವರ್ಧನ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ‘ನಗರದ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನದ ವೇಳೆ ಲಭ್ಯವಿದ್ದ ಸರ್ಕಾರಿ ಜಾಗವನ್ನು ಕೈಬಿಟ್ಟು ಖಾಸಗಿ ಲೇಔಟ್ ಜಾಗವನ್ನು ದುಬಾರಿ ದರ ನೀಡಿ ವಶಕ್ಕೆ ಪಡೆಯಲಾಗಿದೆ. ಒಂದೇ ಕಟ್ಟಡಕ್ಕೆ ಎರಡು ಬಾರಿ ಪರಿಹಾರ ಮಂಜೂರು ಮಾಡಿದ್ದು ಭಾರಿ ಅಕ್ರಮ ನಡೆದಿದೆ’ ಎಂದು ಶಾಸಕ ಬಿ.ಹರ್ಷವರ್ಧನ್ ಆರೋಪಿಸಿದರು.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಡನೆ ಶಾಸಕ ಹರ್ಷವರ್ಧನ್ ಬುಧವಾರ ಚಾಮುಂಡಿ ಟೌನ್ ಶಿಪ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಡನೆ ಮಾತನಾಡಿ, ‘ನಂಜನಗೂಡು ನಗರದಲ್ಲಿ ಹಾದು ಹೋಗುವ ಚಾಮರಾಜನಗರ ರೈಲ್ವೆ ಮಾರ್ಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಕೇಂದ್ರ ಸರ್ಕಾರದ ಸೇತು ಭಾರತ್ ಯೋಜನೆ ಮೂಲಕ ₹ 63.33 ಕೋಟಿ ಅಂದಾಜು ವೆಚ್ಚದಲ್ಲಿ 1.15 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೇಲ್ಸೇತುವೆ ನಿರ್ಮಿಸಲು 8.3 ಎಕರೆ ಭೂ ಪ್ರದೇಶದ ಅವಶ್ಯಕತೆಯಿದ್ದು, ರಸ್ತೆ ಬದಿಯಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಖಾಲಿ ಜಾಗವನ್ನು ಬಳಸಿಕೊಳ್ಳುವ ಬದಲಾಗಿ  ಇನ್ನೊಂದು ಬದಿಯಲ್ಲಿರುವ ಖಾಸಗಿ ಒಡೆತನದ ಚಾಮುಂಡಿ ಟೌನ್ ಶಿಪ್ ಬಡಾವಣೆಗೆ ಸೇರಿದ ಸುಮಾರು 2.16 ಗುಂಟೆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಆರೋಪಿಸಿದರು.

‘ಲೇಔಟ್ ಪ್ರದೇಶದ ಮುಂಭಾಗದಲ್ಲಿ ಹೆದ್ದಾರಿ ನಿಯಮಾವಳಿ ಪ್ರಕಾರ ರಸ್ತೆಯಂಚಿನಲ್ಲಿ ಮೀಸಲಿಟ್ಟಿರುವ ಖಾಲಿ ಜಾಗ, ಕಾಂಪೌಂಡ್ ಹಾಗೂ ಕಟ್ಟಡದ ಜಾಗಕ್ಕೆ ₹ 38 ಕೋಟಿ ನಿಗದಿಪಡಿಸಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ತಮಿಳುನಾಡು ಮೂಲದ ಲೇಔಟ್ ಮಾಲೀಕನಿಗೆ ₹ 34 ಕೋಟಿಯನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದೆ. ಪರಿಹಾರ ನೀಡುವಾಗ ಒಂದೇ ಕಟ್ಟಡಕ್ಕೆ ಲೇಔಟ್‌ನ ಎರಡು ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿಯೂ ಕಟ್ಟಡವಿರುವಂತೆ ನಮೂದು ಮಾಡಿ ಪರಿಹಾರಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ದೂರಿದರು.

‘ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಭಾಗದ ಸಂಸದ ಶ್ರೀನಿವಾಸ್‌ ಪ್ರಸಾದ್ ಹಾಗೂ ನನ್ನ ಗಮನಕ್ಕೆ ಯೋಜನೆ ಜಾರಿ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ. ಅಕ್ರಮಗಳ ಬಗ್ಗೆ ನನ್ನ ಗಮನಕ್ಕೆ ಬಂದ ನಂತರ ಮುಂಬರುವ ದಿನಗಳಲ್ಲಿ ಸರಿಪಡಿಸುವುದಾಗಿ ಸಬೂಬು ಹೇಳುತ್ತಿದ್ದಾರೆ.  ಚಾಮುಂಡಿ ಟೌನ್ ಶಿಪ್ ಮಾಲೀಕರಿಗೆ ಮಾತ್ರ ತರಾತುರಿಯಲ್ಲಿ ಪರಿಹಾರದ ಹಣ ಬಿಡುಗಡೆ ಮಾಡಿದ್ದು, ಉಳಿದ 6 ಎಕರೆ ಪ್ರದೇಶದ ಸಾಮಾನ್ಯ ಕೃಷಿಕರಿಗೆ ಕಡಿಮೆ ದರ ನಿಗದಿ ಮಾಡಿದ್ದಾರೆ. ಅಲ್ಲದೇ ಅವರಿಗೆ ಯಾವುದೇ ಪರಿಹಾರ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧ ಮುಖ್ಯ ಎಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹಾಗೂ ಯೋಜನೆ ಜಾರಿಯಲ್ಲಾಗಿರುವ ಅಕ್ರಮದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ’ ತಿಳಿಸಿದರು.

ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಎ.ಇ.ಇ ಜಗದೀಶ್, ಎ.ಇ ರಮೇಶ್, ಕಂದಾಯ ನಿರೀಕ್ಷಕ ಪ್ರಕಾಶ್, ಬಿ.ಜೆ.ಪಿ ಮುಖಂಡ ಬಾಲಚಂದ್ರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು