ಗುರುವಾರ , ಮಾರ್ಚ್ 4, 2021
24 °C

ಗಡಿಭಾಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಚಂದ್ರಶೇಖರ ಹುನಗುಂದ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಗಡಿಭಾಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು, ನ್ಯಾಯಕ್ಕಾಗಿ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬೇಕೆಂದು ಆಯೋಗದ ಸದಸ್ಯ ಚಂದ್ರಶೇಖರ ಹುನಗುಂದ ತಿಳಿಸಿದರು.

ಮಾನವ ಹಕ್ಕುಗಳ ಸೇವಾ ಸಮಿತಿಯು ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು, ಉದ್ಯೋಗ ಮೇಳ, ಆರೋಗ್ಯ ತಪಾಸಣೆ ಶಿಬಿರ, ರೈತರಿಗೆ ಹಾಗೂ ಯೋಧರಿಗೆ ಗೌರವ ಸಮರ್ಪಣೆ ಮತ್ತು ‘ಮಾನವರತ್ನ ಪ್ರಶಸ್ತಿ’ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಆಯೋಗವು ವಿರೋಧಿಸುವುದಿಲ್ಲ. ಆದರೆ, ಅಭಿವೃದ್ಧಿ ಕಾರ್ಯಗಳಿಂದಾಗಿ ಭೂಮಿ ಕಳೆದುಕೊಂಡವರಿಗೆ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಇಲ್ಲವಾದಲ್ಲಿ ಅದು ಅನ್ಯಾಯ, ಅಸಮಾನತೆಗೆ ಕಾರಣವಾಗುತ್ತದೆ. ಅದರಲ್ಲೂ ಈ ರೀತಿಯ ಅನ್ಯಾಯವಾಗುತ್ತಿರುವುದು ಗಡಿಭಾಗಗಳಲ್ಲಿ ಹೆಚ್ಚು. ಇದು ಸಮುದಾಯದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಭೂಮಿ ಕಳೆದುಕೊಳ್ಳುವ ರೈತರು ಸರ್ಕಾರದಿಂದ ಪರಿಹಾರ ಸಿಗಲಿಲ್ಲವೆಂದು ನ್ಯಾಯಾಲಯದ ಮೆಟ್ಟಿಲು ಹತ್ತುವ ಬದಲು ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದರೆ ತ್ವರಿತವಾಗಿ ನ್ಯಾಯ ಸಿಗುವುದು ಎಂದು ಹೇಳಿದರು.

ಕೆಲವೊಮ್ಮೆ ರಕ್ಷಣೆ ಮಾಡಬೇಕಾದ ಸರ್ಕಾರದಿಂದಲೇ ಅದರ ಉಲ್ಲಂಘನೆಯಾಗುತ್ತದೆ. ಇದಕ್ಕೆ ಜನ ಜಾಗೃತಿಯೇ ಪರಿಹಾರ. ಯಾವ ಸಂದರ್ಭಗಳಲ್ಲಿ ಸರ್ಕಾರದಿಂದ ಅನ್ಯಾಯವಾಗುವುದೊ ಆಗ ನ್ಯಾಯ ಕಂಡುಕೊಳ್ಳುವ ಮಾರ್ಗಗಳನ್ನು ಗುರುತಿಸಿಕೊಳ್ಳಬೇಕು. ಬದುಕು, ಸಮಾನತೆ ಹಾಗೂ ಸ್ವಾತಂತ್ರ್ಯ ಹುಟ್ಟಿನಿಂದ ಬಂದಂಥದ್ದು. ಅದನ್ನು ಕೇಳಿ ಪಡೆದುಕೊಳ್ಳುವುದು ದುಸ್ಥಿತಿ. ಆದರೆ, ಕೇಳದೇ ಸುಮ್ಮನೆ ಕೂರುವುದು ಸರಿಯಲ್ಲ ಎಂದರು.

ಮಾನವ ಹಕ್ಕುಗಳಿಗೆ ಸಾಂಸ್ಥಿಕ ರೂಪವನ್ನು 12ನೇ ಶತಮಾನದಲ್ಲಿ ವಚನಕಾರರೇ ತೋರಿಸಿಕೊಟ್ಟಿದ್ದಾರೆ. ಸರ್ವಜ್ಞನು ಇದನ್ನು ಸಾರಿ ಹೇಳಿದ್ದಾನೆ. ಈಚಿನ ದಿನಗಳಲ್ಲಿ ಇದಕ್ಕೆ ಜಾಗತಿಕ ಸ್ವರೂಪ ಸಿಕ್ಕಿದೆ. ಹಕ್ಕುಗಳಿಗೆ ಚ್ಯುತಿ ಉಂಟಾದರೆ ಅದನ್ನು ಪ್ರಶ್ನಿಸುವ ಅವಕಾಶವಿದೆ. ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, ಪ್ರಶ್ನಿಸುವ ಮನೋಭಾವವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂಟು ಮಂದಿಗೆ ‘ಮಾನವರತ್ನ ಪ್ರಶಸ್ತಿ’ ಹಾಗೂ ಇಬ್ಬರು ರೈತರು ಹಾಗೂ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇಲ್ಲಿ ನಡೆದ‌ ಉದ್ಯೋಗ ಮೇಳದಲ್ಲಿ 8 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಸುಯೋಗ್ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಮೇಲುಕೋಟೆ ವೆಂಗೀಮಠದ ಇಳೈ ಆಳ್ವಾರ್‌ ಸ್ವಾಮೀಜಿ, ಸಮಿತಿಯ ಅಧ್ಯಕ್ಷ ಕಸ್ತೂರಿ ಚಂದ್ರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ರಮೇಶ್, ರಾಜ್ಯ ಉಪಾಧ್ಯಕ್ಷ ಶಿವರಾಜು, ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಘುರಾಂ, ಮಹಿಳಾ ಜಿಲ್ಲಾಧ್ಯಕ್ಷೆ ಶಶಿಕಲಾ, ಗಿರೀಶ್, ಇಳೈ ಡಾ.ಎಚ್.ಎಂ.ಕೃಷ್ಣಮೂರ್ತಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು