ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ

ಹುಣಸೂರು ನಗರಸಭೆಗೆ ನಡೆದ ಮೊದಲ ಚುನಾವಣೆ ಶಾಂತಿಯುತ, ಶೇ 75 ಮತದಾನ
Last Updated 10 ಫೆಬ್ರುವರಿ 2020, 11:38 IST
ಅಕ್ಷರ ಗಾತ್ರ

ಹುಣಸೂರು: ಹುಣಸೂರು ನಗರಸಭೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 75.16 ರಷ್ಟು ಮತದಾನವಾಗಿದ್ದು, 118 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಭಾನುವಾರ ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ಬಳಿಕ ವೇಗ ಪಡೆದುಕೊಂಡಿತು. 41,956 ಮತದಾರರಲ್ಲಿ 31,533 ಜನ ತಮ್ಮ ಹಕ್ಕು ಚಲಾಯಿಸಿದರು. ಈ ಪೈಕಿ 15,732 ಪುರುಷರು,15,799ಮಹಿಳೆಯರು ಹಾಗೂ ಇಬ್ಬರು ತೃತೀಯಲಿಂಗಿಗಳು ಮತದಾನಮಾಡಿದ್ದಾರೆ. 29ನೇ ವಾರ್ಡ್‌ನಲ್ಲಿ ಶೇ 85.64 ರಷ್ಟು ಮತದಾನವಾಗಿರುವುದು ಅತೀ ಹೆಚ್ಚಿನ ಪ್ರಮಾಣವಾಗಿದೆ. ವಾರ್ಡ್‌ 6 ‘ಎ’ ನಲ್ಲಿ ಶೇ 56.78 ರಷ್ಟು ಮತದಾನವಾಗಿರುವುದು ಕಡಿಮೆ ಪ್ರಮಾಣದ ಮತದಾನವಾದ ಬೂತ್’ ಎಂದು ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿದರು.

ಶಾಸಕ ಮಂಜುನಾಥ್ ನಗರದ 9ನೇ ವಾರ್ಡ್‌ನಲ್ಲಿ ಪೋಷಕರೊಂದಿಗೆ ಬಂದು ಮತದಾನ ಮಾಡಿದರು. ಬಿಜೆಪಿ ಮುಖಂಡ ಅಡಗೂರು ಎಚ್‌. ವಿಶ್ವನಾಥ್ ಅವರು ವಾರ್ಡ್ 26 ರಲ್ಲಿ ಮತದಾನ ಮಾಡಿದರು. ಶಾಸಕ ಮಂಜುನಾಥ್ ಮತದಾನದ ಬಳಿಕ ನಗರದ ವಿವಿಧ ವಾರ್ಡ್‌ಗಳಲ್ಲಿ ಮತಗಟ್ಟೆ ಬಳಿ ಮತದಾರರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದದ್ದು ಕಂಡುಬಂತು.

ಬಿಜೆಪಿ ಮುಖಂಡ ಸಿ.ಎಚ್.ವಿಜಯಶಂಕರ್ ಈ ಬಾರಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡು ಬಿಜೆಪಿ ಗೆಲುವಿಗೆ ಶ್ರಮಿಸಿದರಾದರೂ ಮತದಾನ ಮಾಡುವ ಹಕ್ಕು ಇಲ್ಲದೆ ಮತಗಟ್ಟೆಗೆ ಬರಲಿಲ್ಲ.

ತಾಲ್ಲೂಕು ಆಡಳಿತ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಂಡಿತ್ತು. ತಹಶೀಲ್ದಾರ್ ಬಸವರಾಜ್ ದಿನಪೂರ್ಣ ವಿವಿಧ ಮತಗಟ್ಟೆಗಳಿಗೆ ಸುತ್ತು ಹಾಕಿ ಆಗುಹೋಗುಗಳ ಬಗ್ಗೆ ಗಮನಹರಿಸಿದರು.

ಡಿವೈಎಸ್ಪಿ ಸುಂದರ್ ರಾಜ್ ಮಾರ್ಗದರ್ಶನಲ್ಲಿ ಪ್ರತಿಯೊಂದು ಮತಗಟ್ಟೆಗಳಿಗೆ ವ್ಯವಸ್ಥಿತವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅಕ್ರಮ ನಡೆಯದಂತೆ ಕ್ರಮವಹಿಸಿದ್ದರು.

ಮತದಾನ ಮಾಡಲು ಸಮಯ ಮೀರುತ್ತಿದ್ದಂತೆ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ನಿರತರಾಗಿದ್ದರು. ಮತಗಟ್ಟೆ ಅಧಿಕಾರಿಗಳು 5 ಗಂಟೆಯೊಳಗೆ ಮತಗಟ್ಟೆಯೊಳಗೆ ಬಂದವರಿಗೆ ಟೋಕನ್ ವಿತರಿಸಿ, ಹಕ್ಕು ಚಲಾಯಿಸಲು ಅವಕಾಶ ನೀಡಿದ್ದರು.

ಮತದಾನ ಮಾಡಿ ನಿಧನ

3ನೇ ವಾರ್ಡ್‌ನಲ್ಲಿ ಬೆಳಿಗ್ಗೆ 107 ವರ್ಷದ ಸಿಂಗಮ್ಮ, ಮೊಮ್ಮಗನೊಂದಿಗೆ ವ್ಹೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿ ಮನೆಗೆ ತೆರಳಿದರು. ಇದಾದ ಕೆಲ ಸಮಯದಲ್ಲಿ ನಿಧನರಾದರು. ಕಲ್ಕುಣಿಕೆ ಬಡಾವಣೆಯ ಇವರ ಮೊಮ್ಮಗಳು ಗೀತಾ 3ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT