ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಹಾಕಿದರೆ ಜೈಲು ಶಿಕ್ಷೆ ನಿಶ್ಚಿತ: ಸಚಿವ ಸೋಮಶೇಖರ್ ಹೇಳಿಕೆ

ರಿಂಗ್‌ರಸ್ತೆಯ ಕಸದ ದಿಬ್ಬ ವೀಕ್ಷಿಸಿ ಸಚಿವ ಸೋಮಶೇಖರ್ ಹೇಳಿಕೆ
Last Updated 8 ಫೆಬ್ರುವರಿ 2021, 3:07 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಿಂಗ್‌ರಸ್ತೆಯ ಬದಿಯಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯದ ದಿಬ್ಬವನ್ನು ಸಚಿವ ಎಸ್.ಟಿ.ಸೋಮಶೇಖರ್ ಭಾನುವಾರ ವೀಕ್ಷಿಸಿದರು.

ಕಟ್ಟಡ ತ್ಯಾಜ್ಯದ ಜೊತೆಗೆ, ಸೆಲೂನ್‌ ಕಸ, ಕೋಳಿ ಫಾರಂಗಳ ತ್ಯಾಜ್ಯ, ಮಾಂಸದಂಗಡಿಗಳ ಕಸ ಸೇರಿದಂತೆ ಹಲವು ಬಗೆಯ ಕಸದ ರಾಶಿಗಳೇ ಕಂಡು ಬಂದವು. ಇವುಗಳೆಲ್ಲವನ್ನು ಪರಿಶೀಲಿಸಿದ ಅವರು ಸ್ವಚ್ಛತಾ ಕಾರ್ಯ ಭರದಿಂದ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತಿಗಿಳಿದ ಅವರು, ‘ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಹಾಕಿದರೆ ಬೆಂಗಳೂರು ಮಾದರಿಯಲ್ಲಿ ಶಿಕ್ಷೆಯನ್ನು ವಿಧಿಸದೇ ಇರಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ ಸಾರ್ವಜನಿಕರು ರಸ್ತೆಗೆ ತಂದು ಕಸ ಸುರಿಯುವ ದಿನಗಳು ದೂರವಿಲ್ಲ. ಈಗ ಶಿಕ್ಷೆ ವಿಧಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಪೊಲೀಸ್ ಕಮಿಷನರ್ ಅವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಕಸ ಹಾಕುವ ವಾಹನಗಳನ್ನು ವಶಪಡಿಸಿಕೊಂಡು, ಮಾಲೀಕರನ್ನು ಜೈಲು ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಮೈಸೂರಿನಲ್ಲೂ ಜಾರಿಗೆ ತರಲಾಗುವುದು ಎಂದರು.

ವರ್ಷದ 365 ದಿನಗಳ ಕಾಲವೂ ಮೈಸೂರನ್ನು ಸ್ವಚ್ಛವಾಗಿಡಲು ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗ ಬಿದ್ದಿರುವ ಕಸ ತೆಗೆಯಲು ಎಲ್ಲ ಇಲಾಖೆಗಳಿಗೂ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಪಾಲಿಕೆ, ಲೋಕೋಪಯೋಗಿ ಇಲಾಖೆ, ಜಲಮಂಡಳಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ರಿಂಗ್‌ ರಸ್ತೆಯ ಸ್ವಚ್ಛತೆಯ ಜವಾಬ್ದಾರಿ ನೀಡಲಾಗಿದೆ. ಅವರು ಶೀಘ್ರದಲ್ಲೇ ಕೆಲಸ ಆರಂಭಿಸಿ, ರಿಂಗ್ ರಸ್ತೆಯನ್ನು ಕಸ ರಹಿತವನ್ನಾಗಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಸ ಸುರಿಯಲು, ಕಟ್ಟಡ ತ್ಯಾಜ್ಯವನ್ನು ಹಾಕಲು ಪ್ರತ್ಯೇಕವಾದ ಜಾಗಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಈ ಕುರಿತು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ವೇಳೆ ಅವರು ಕುಂಬಾರಕೊಪ್ಪಲಿನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಪಿ ಪ್ರಕಾಶ್‌ಗೌಡ, ಗೀತಾಪ್ರಸನ್ನ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ‘ಮುಡಾ’ ಆಯುಕ್ತ ನಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT