ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರಣ್ಯಪುರಂ: ರಸ್ತೆಗೆ ಡಾಂಬರು ಯಾವಾಗ?

ಟೆಂಡರ್ ಆಗಿದ್ದು, ಕೆಲಸ ಶೀಘ್ರ ಆರಂಭವಾಗಲಿದೆ: ಶೋಭಾ ಸುನಿಲ್
Last Updated 13 ಫೆಬ್ರುವರಿ 2021, 1:57 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂನ ಬಹಳಷ್ಟು ರಸ್ತೆಗಳು ಸುಸ್ಥಿತಿಯಲ್ಲಿದ್ದರೂ, ಕೆಲ ರಸ್ತೆಗಳು ಇನ್ನೂ ದುರಾವಸ್ಥೆಯಲ್ಲೇ ಇವೆ.

ಪಾಲಿಕೆಯ 61ನೇ ವಾರ್ಡಿನ ವಿದ್ಯಾರಣ್ಯಪುರಂ 4ನೇ ಮೇನ್‌ನ ರಸ್ತೆ ಅಕ್ಷರಶಃ ಹಾಳಾಗಿದೆ. ಕಲ್ಲುಗಳು ಮುಳ್ಳುಗಳಂತೆ ಪುಟಿದೆದ್ದಿದ್ದು, ವಾಹನ ಸವಾರರು ಇಲ್ಲಿ ಹಾದು ಹೋಗುವಾಗ ಹೈರಣಾಗುವಂತಹ ಸ್ಥಿತಿ ಇದೆ.

ಸಿವೇಜ್‌ಫಾರಂ ಮಗ್ಗುಲಿನಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ದೂಳೇ ದೂಳು ಕಣ್ಣಿಗೆ ರಾಚುತ್ತದೆ. ಲಾರಿ, ಟ್ರಾಕ್ಟರ್‌ಗಳ ಹಿಂದೆ ಹೋಗುವ ವಾಹನ ಸವಾರರ ಗೋಳು ಹೇಳತೀರದಾಗಿದೆ. ಸ್ವಲ್ಪ ಹೊತ್ತು ನಿಂತು ದೂಳೆಲ್ಲ ಕಡಿಮೆಯಾದ ಮೇಲೆಯೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲಲ್ಲಿ ಉಂಟಾಗಿರುವ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಕೆಲವೊಂದು ಕಡೆ ರಸ್ತೆ ತುಂಬೆಲ್ಲ ಬರೀ ಕಲ್ಲುಗಳೇ ತುಂಬಿಕೊಂಡಿವೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡಿದರೆ ಏದುಸಿರು ಬಿಡುವುದು ನಿಶ್ಚಿತ ಎಂಬಂತಾಗಿದೆ.

ಈ ಕುರಿತು ‘ಪ್ರಜಾವಾಣಿ’‌ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ರಮೇಶ್, ‘ಈ ರಸ್ತೆ ಬಹಳಷ್ಟು ವರ್ಷಗಳಿಂದಲೂ ಹೀಗೆ ಇದೆ. ಡಾಂಬರು ಕಂಡು ಎಷ್ಟು ವರ್ಷವಾಯಿತೆಂಬುದು ನೆನಪಿಲ್ಲ. ಇಲ್ಲಿ ದೂಳು, ಸೊಳ್ಳೆಗಳ ಕಾಟಕ್ಕೆ ಮಿತಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ ಈ ಭಾಗದ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಅವರನ್ನು ಸಂಪರ್ಕಿಸಿದಾಗ, ಈ ಸಮಸ್ಯೆ ಇನ್ನು ಕೆಲವು ದಿನಗಳು ಮಾತ್ರವಷ್ಟೇ ಇರುತ್ತದೆ. ಕೆಲವೇ ದಿನಗಳಲ್ಲಿ ಈ ರಸ್ತೆಗೆ ಡಾಂಬರು ಭಾಗ್ಯ ಬರಲಿದೆ ಎಂದರು.

ವಿದ್ಯಾರಣ್ಯಪುರಂ 16ನೇ ಕ್ರಾಸ್‌ನ ಶ್ರೀಕಂಠೇಶ್ವರ ಪ್ರಾವಿಷನ್ ಸ್ಟೋರ್‌ನಿಂದ ಆರಂಭವಾಗಿ ಸೀವೇಜ್‌ ಫಾರಂ ಮೂಲಕ ನಂಜನಗೂಡು ರಸ್ತೆಯವರೆಗೆ ₹2 ಕೋಟಿ ಮೊತ್ತದ ಟೆಂಡರ್ ಆಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಬೇರೆ ಕಡೆ ಕೆಲಸ ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇಲ್ಲೂ ಕೆಲಸ ಆರಂಭಿಸಲಿದ್ದಾರೆ. ಬೇಗನೇ ದುರಸ್ತಿ ಮಾಡಿಸಲು ಒತ್ತಡ ಹೇರಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT