ಸೋಮವಾರ, ಸೆಪ್ಟೆಂಬರ್ 20, 2021
21 °C
ವಿಶ್ವ ಹುಲಿ ದಿನಾಚರಣೆ ವೆಬಿನಾರ್‌: ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅಭಿಮತ

ವಿಶ್ವ ಹುಲಿ ದಿನಾಚರಣೆ: ‘ಹುಲಿ ಇಲ್ಲದಿದ್ದರೆ ನಲ್ಲಿಯಲ್ಲಿ ನೀರೂ ಬಾರದು!’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹುಲಿ ಇರದಿದ್ದರೆ ಮನೆಯ ಕೊಳಾಯಿಯಲ್ಲಿ ನೀರು ಬಾರದು. ಬೆಳಿಗ್ಗೆ ಕೊಡಗಿನ ಕಾಫಿಯನ್ನು ಆಸ್ವಾದಿಸ
ಲಾಗದು. ಬೆಟ್ಟದ ನೆಲ್ಲಿ ಉಪ್ಪಿನಕಾಯಿ ಸವಿ ಉಪಹಾರದೊಟ್ಟಿಗೆ ಸಿಗದು. 10 ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ನೇರ ಅಥವಾ ಪರೋಕ್ಷ ವಾರ್ಷಿಕ ಆದಾಯ ₹ 5.96 ಲಕ್ಷ ಕೋಟಿ....!‌’

– ಇಂಥ ವಿಶೇಷ ಮಾಹಿತಿಗಳು ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶ್ವ ಹುಲಿ ದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಪರಿಸರ ಪ್ರಿಯ ಕೇಳುಗರನ್ನು ಮೋಡಿ ಮಾಡಿದವು.

ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಮಾತನಾಡಿ, ‘ಹುಲಿಯು ನೈಸರ್ಗಿಕ ಸಂಪತ್ತು, ಜೀವವೈವಿಧ್ಯದ ಉಳಿವಿಗೆ ಕಾರಣವಾಗಿದೆ. ಹುಲಿ ರಕ್ಷಿಸಿದರೆ ಇಡೀ ವನ್ಯಜೀವಿ ಹಾಗೂ ಸಸ್ಯ ಸಂಪತ್ತನ್ನು ರಕ್ಷಿಸಿದಂತೆ. ತರಕರಡಿ, ಚಿಪ್ಪು ಹಂದಿ, ಚಿಂಕಾರ, ಮಂಗಟ್ಟೆ ಸೇರಿದಂತೆ ಹಲವು ಅಳಿವಿನಂಚಿನ ಪ್ರಾಣಿ– ಪಕ್ಷಿಗಳನ್ನು ಸಂರಕ್ಷಣೆ ಮಾಡಬಹುದು’ ಎಂದರು.

‘ಹುಲಿ ಯೋಜನೆಯೊಂದಿಗೆ ಆನೆಯ ರಕ್ಷಣೆಯೂ ಸೇರಿದೆ. ಆನೆಗಳು ಕಾಡಿನ ಪಾಲಕರು. ಸಸ್ಯ ಸಂಪತ್ತಿನ ವೃದ್ಧಿಗೆ ಅವು ಸಹಕಾರಿಯಾಗಿವೆ. ಗಮನಕ್ಕೆ ಬಾರದ ಸಗಣಿ ಹುಳಗಳು, ಲಕ್ಷಾಂತರ ಚಿಟ್ಟೆಗಳು ಆನೆ ಹಾಕುವ ಸಗಣಿಯಲ್ಲಿರುವ ಸೋಡಿಯಂ– ಖನಿಜಗಳನ್ನು ಹೀರುತ್ತವೆ. ಬೀಜ ಪ್ರಸರಣ ಮಾಡಿ ಅರಣ್ಯವನ್ನು ಸ್ವಾಭಾವಿಕವಾಗಿ ಬೆಳೆಯಲು– ವಿಸ್ತಾರಗೊಳ್ಳಲು ಆನೆಗಳು ಕೊಡುಗೆ ನೀಡುತ್ತಿವೆ’ ಎಂದು ಹೇಳಿದರು.

‘ಬ್ರಹ್ಮಗಿರಿ, ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳು, ಸತ್ಯಮಂಗಲ, ಬಿಆರ್‌ಟಿ, ಮಲೆ ಮಹ
ದೇಶ್ವರ ಬೆಟ್ಟ, ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶಗಳು ಕಾವೇರಿ ಹಾಗೂ ಅದರ ಉಪನದಿಗಳ ನೀರಿನ ಮೂಲವಾಗಿದೆ. ಹುಲಿಗಳ ರಕ್ಷಣೆಯೇ ಕರ್ನಾಟಕ ಹಾಗೂ ತಮಿಳುನಾಡಿನ ಕೋಟ್ಯಂತರ ಜನರ ಜೀವನಾಡಿಯಾಗಿರುವ ಕಾವೇರಿಯ ಉಳಿವೂ ಆಗಿದೆ’ ಎಂದು ಬಣ್ಣಿಸಿದರು. 

ಕರ್ನಾಟಕದ ಶೇ 62ರಷ್ಟು ವಿದ್ಯುತ್‌ ಜಲಮೂಲಗಳಿಂದ ಸಿಗುತ್ತಿದೆ. ಕಾಡುಗಳನ್ನು ರಕ್ಷಣೆ ಮಾಡದಿದ್ದರೆ ವಿದ್ಯುತ್‌ ಕೊರತೆ ಉಂಟಾಗುತ್ತದೆ. ದೇಶದ ಅಣೆಕಟ್ಟುಗಳು ತುಂಬದಿದ್ದರೆ ಬರ ಆವರಿಸುತ್ತದೆ ಎಂದ ಅವರು, ಕೊಡಗಿನ ಕಾಫಿ ಹೂವಿನ ಪರಾಗಸ್ಪರ್ಶ ಕ್ರಿಯೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಜೇನು, ಇತರ ಕೀಟಗಳಿಂದ ಆಗುತ್ತದೆ ಎಂದರು.

ಐಎಫ್‌ಎಸ್‌ ಅಧಿಕಾರಿ ಸಾಕೇತ್‌ ಬದೊಲ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇದ್ದರು.

‘₹ 1 ಹೂಡಿಕೆಗೆ ₹ 2,500 ಲಾಭ’: ಬಂಡೀಪುರದಲ್ಲಿ ಒಂದು ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ ₹ 2,500 ಲಾಭ ಬರುತ್ತದೆ. ನಾಗಾರ್ಜುನ ಸಾಗರ ಶ್ರೀಶೈಲ ರಾಷ್ಟ್ರೀಯ ಉದ್ಯಾನವನದ ಲಾಭ ₹ 7,489. ಚಿನ್ನ– ಪ್ಲಾಟಿನಂನಲ್ಲಿ ಹೂಡಿಕೆ ಮಾಡಿದರೂ ಇಷ್ಟು ಲಾಭ ಸಿಗದು ಎಂದು ಹೇಳಿದ ಸಂಜಯ್‌ ಗುಬ್ಬಿ ಅವರು, ದೇಶದ ರಾಷ್ಟ್ರೀಯ ಉದ್ಯಾನಗಳು ಹಾಗೂ ಹುಲಿ ಸಂರಕ್ಷಿತ ಅರಣ್ಯಗಳ ಮಹತ್ವವನ್ನು ವಿವರಿಸಿದರು.

ಹುಲಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ, ಸಿಬ್ಬಂದಿ, ಅರಣ್ಯ ರಕ್ಷಕರ ಕೊಡುಗೆ ಅಪಾರ. ಹುಲಿ ಬೇಟೆ ತಡೆಯಲು ತಮ್ಮ ಕುಟುಂಬವನ್ನು ತೊರೆದು ಅರಣ್ಯಗಳನ್ನು ರಕ್ಷಿಸುವವರು ಇವರಾಗಿದ್ದಾರೆ. ಇವರ ಕೊಡುಗೆಯಿಂದಾಗಿಯೇ 2011ರಿಂದ 2021ರ ವೇಳೆಗೆ ಅರಣ್ಯದ ವಿಸ್ತೀರ್ಣ ಕರ್ನಾಟಕ ರಾಜ್ಯದ ಭೌಗೋಳಿಕ ವಿಸ್ತೀರ್ಣದ ಶೇ 2ರಷ್ಟು ಹೆಚ್ಚಳ ಕಂಡಿದೆ ಎಂದು ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು