ಭಾನುವಾರ, ಮೇ 9, 2021
25 °C
ಮೈಸೂರಿಗರಿಗೆ ಪರಿಸರ ತಜ್ಞ ರವಿಕುಮಾರ್‌ ಸಲಹೆ l 2021ರ ವಿಶ್ವ ಜಲ ದಿನದ ಧ್ಯೇಯ ವಾಕ್ಯ-– ‘ನೀರಿನ ಮೌಲ್ಯ’---

ಚರಂಡಿ ಸಂಸ್ಕೃತಿಯಿಂದ ಜಲ ಸಂಸ್ಕೃತಿಯತ್ತ ಮರಳಲಿ: ಪರಿಸರ ತಜ್ಞ ರವಿಕುಮಾರ್‌

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಚರಂಡಿ ಸಂಸ್ಕೃತಿಯಿಂದ ಜಲ ಸಂಸ್ಕೃತಿಗೆ ಮರಳುವುದು ಇಂದಿನ ತುರ್ತು. ಜನರಿಗೆ ‘ಅಭಿವೃದ್ಧಿ’ ಎನ್ನುವುದು ಇಂಪಾಗಿ ‌ಕೇಳಿದರೆ, ‘ಸುಸ್ಥಿರ ಅಭಿವೃದ್ಧಿ’ ಕರ್ಕಶದಂತೆ ಕೇಳಿಸುತ್ತದೆ. ಸುಸ್ಥಿರ ಅಭಿವೃದ್ಧಿ ನಮ್ಮ ಸಂಗೀತವಾಗಬೇಕಿದೆ’ ಎಂದು ಮೈಸೂರಿನ ಪರಿಸರ ತಜ್ಞ ಯು.ಎನ್‌.ರವಿಕುಮಾರ್‌ ಹೇಳಿದರು.

–ವಿಶ್ವ ಜಲ ದಿನದ ಪ್ರಯುಕ್ತ ಅವರು ಹಲವಾರು ವಿಚಾರಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಮಾರ್ಚ್‌ 22, ವಿಶ್ವ ಜಲ ದಿನ. ನೀರಿನ ಮೌಲ್ಯದ ಅರಿವು ನಗರದ ಜನರಿಗಿದೆಯೇ?

2021ರ ವಿಶ್ವ ಜಲ ದಿನದ ಧ್ಯೇಯ ವಾಕ್ಯ ‘ನೀರಿನ ಮೌಲ್ಯ’ (valuing water). ಕೃಷಿಕರಿಗೆ, ನಗರದಲ್ಲಿರುವವರಿಗೆ ನೀರು ಬೇರೆ ರೀತಿ ಕಾಣುತ್ತದೆ. ಮೌಲ್ಯವನ್ನು ಹಣದೊಂದಿಗೆ ಸಮೀಕರಿಸ ಬಾರದು. ನೀರು ಎಂದರೆ ಅದು ನಮ್ಮ ಸಂಸ್ಕೃತಿ, ಸಂಪತ್ತು, ಶಿಕ್ಷಣ ಹಾಗೂ ಪ್ರಕೃತಿ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು 17 ಇವೆ. ಕೆರೆಗಳನ್ನು, ಜಲ ಮೂಲಗಳನ್ನು ಸಂರಕ್ಷಿಸಿದರೆ ನಾವು ಆರು ಗುರಿಗಳನ್ನು ಸಾಧಿಸಿದಂತೆ ಆಗುತ್ತದೆ.

l ನಗರದ ಕೆರೆ ಉಳಿಸಿ ಕೊಳ್ಳುವುದು ಹೇಗೆ?

ಮೈಸೂರಿನ ಕೆರೆಗಳ ಅಭಿವೃದ್ಧಿಗೆ ಬಹಳಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ, ನಿರ್ವಹಣೆ ಸಮರ್ಪಕವಾಗಿಲ್ಲ.  ಅಭಿವೃದ್ಧಿಯು ಜೀವವೈವಿಧ್ಯ ಆಧರಿಸಿರಬೇಕು. ಹೆಬ್ಬಾಳ ಕೆರೆಯನ್ನು ಇನ್ಫೊಸಿಸ್‌ ಅಭಿವೃದ್ಧಿಪಡಿಸಿದೆ. ಅಲ್ಲಿ ಕೆರೆಯಂಚನ್ನೂ ಕಲ್ಲು– ಕಾಂಕ್ರೀಟ್‌ನಿಂದ ಮುಚ್ಚಿ, ರಸ್ತೆ ಮಾಡಲಾಗಿದೆ. ಕೆರೆ ಅಂಚಿನಲ್ಲಿರುವ ಮಣ್ಣಿನಲ್ಲಿ ಹಕ್ಕಿಗಳ ಆಹಾರವಾದ ಹುಳುಗಳಿರುತ್ತವೆ. ಶೇ 50ರಷ್ಟು ಜೀವ ಸಂಕುಲ ಇರುವ ಕೆರೆ ಅಂಚನ್ನು ನೈಸರ್ಗಿಕವಾಗಿಯೇ ಬಿಡಬೇಕು. ಅಲ್ಲದೇ, ಕೆರೆಯಲ್ಲಿ ನೀರು ಯಾವಾಗಲೂ ಇರುವಂತೆ ನೋಡಿಕೊಳ್ಳಬಾರದು. ನೀರಿನ ಏರಿಳಿತ ಇದ್ದರೆ ಹುಳು, ಹಕ್ಕಿಗಳು ಇರುತ್ತವೆ.

ಇನ್ನು ಕುಕ್ಕರಹಳ್ಳಿ ಕೆರೆ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದೆ. ವಿಶ್ವವಿದ್ಯಾಲಯಕ್ಕೆ ಅದರದ್ದೇ ಆದ ಜವಾಬ್ದಾರಿಗಳಿವೆ. ಕೆರೆ ಅಭಿವೃದ್ಧಿಗೆ ಅನುದಾನ ತರುವುದು ಕಷ್ಟ. ಇದಕ್ಕಾಗಿ ಪ್ರತ್ಯೇಕ ಆಡಳಿತ ಸಮಿತಿ ರಚಿಸಬೇಕು. ಇದರಿಂದ ಸಂಪನ್ಮೂಲ ಕ್ರೋಡೀಕರಣ ಮಾಡಲು ಸಾಧ್ಯ.

l ವರುಣಾ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗಿದೆ. ಇದು ಸರಿಯೇ?

ವರುಣಾ ಕಾಲುವೆ ಬಂದ ನಂತರ ಈ ಕೆರೆ ವರ್ಷವಿಡೀ ತುಂಬಿರುತ್ತದೆ. ಹೀಗಾಗಿ ಹಿಂದೆ ಇದ್ದ ಜೀವವೈವಿಧ್ಯ ಈಗಿಲ್ಲ. ಸದಾ ನೀರು ಇರುವುದರಿಂದ ಜಲಕ್ರೀಡೆಗಳನ್ನು ಆಯೋಜಿಸಲು ಅಡ್ಡಿ ಇಲ್ಲ. ಆದರೆ, ಎಲ್ಲ ಕೆರೆಗಳನ್ನು ವರುಣಾ ಕೆರೆಯಾಗಿ ಮಾಡಬಾರದು.

l ಕೆರೆಗೆ ಚರಂಡಿ ನೀರು ಸೇರುವು ದನ್ನು ತಪ್ಪಿಸಲಾಗುತ್ತಿಲ್ಲ?

ಸೀವೇಜ್‌ ಫಾರಂನಲ್ಲಿ ಸಂಸ್ಕರಿಸಿದ ಚರಂಡಿ ನೀರು ದಳವಾಯಿ ಕೆರೆ ಸೇರುತ್ತಿದೆ. ಆದರೆ, ಕೆರೆ ಸುತ್ತಮುತ್ತ ಹೊಸ ಬಡಾವಣೆಗಳ ಚರಂಡಿ ನೀರು ನೇರವಾಗಿ ಕೆರೆ ಸೇರುತ್ತಿದೆ. ಈ ಕೆರೆಯ ನೀರು ಶೆಟ್ಟಿಹಳ್ಳಿ ಕೆರೆಗೆ, ಮಂಡಕಳ್ಳಿ ಬಳಿಯ ಇನ್ನೊಂದು ಕೆರೆಗೆ ಹೋಗುತ್ತದೆ. ಈ ಕೆರೆಗಳ ಕೆಳಭಾಗದಲ್ಲಿ ಆಹಾರ, ತರಕಾರಿ, ಸೊಪ್ಪು ಬೆಳೆಯಲಾಗುತ್ತಿದೆ. ಈ ಕೆರೆಗಳ ನೀರಿನ ಬಳಕೆ ಪ್ರಶ್ನಾರ್ಹವಾಗಿಯೇ ಉಳಿದಿದೆ. 

l ನಗರೀಕರಣದಿಂದ ಕೆರೆಗಳನ್ನು ಉಳಿಸಿಕೊಳ್ಳುವುದು ಹೇಗೆ?

1980ರ ದಶಕದಿಂದ ಮೈಸೂರು ನಗರ ವೇಗವಾಗಿ ಬೆಳೆಯಿತು. ವಿಜಯ ನಗರ ಬಡಾವಣೆಗಳ ವೇಗ ಎಷ್ಟಿತ್ತೆಂದರೆ ಹಲವು ರಾಜಕಾಲುವೆಗಳನ್ನು ಮುಚ್ಚಿ ಹಾಕಿತು. ಕುಕ್ಕರಹಳ್ಳಿ ಕೆರೆಯ ರಾಜಕಾಲುವೆ ಮೈಸೂರಿನಿಂದ 20 ಕಿ.ಮೀ ದೂರದಲ್ಲಿ, ಹುಣಸೂರು ರಸ್ತೆಗೆ ಹೊಂದಿಕೊಂಡಂತೆ ಆರಂಭ ವಾಗುತ್ತಿತ್ತು. ಈಗ ಕೊನೆಯ 4 ಕಿ.ಮೀ ರಾಜಕಾಲುವೆ ಉಳಿದಿದೆ. 

ವರ್ತುಲ ರಸ್ತೆ ಬಂದಾಗ ಲಿಂಗಾಂಬುಧಿ ಕೆರೆ ಮೇಲೆಯೇ ಹೋಗುತ್ತಿತ್ತು. ನಾಗರಿಕರ, ಪರಿಸರ ಪ್ರಿಯರ ಹೋರಾಟದಿಂದ ಮಾರ್ಗ ಬದಲಾಯಿತು. ಕೆರೆ ಉಳಿಯಿತು. ಇದೀಗ ಅರಣ್ಯ ಇಲಾಖೆಯ ರಕ್ಷಣೆಯಲ್ಲಿದೆ.

ಕಾರಂಜಿ ಕೆರೆ ಉಸ್ತುವಾರಿ ಮೃಗಾಲಯದ್ದಾಗಿದೆ. ಪ್ರವಾಸೋದ್ಯಮ ವಲಯ ಹಾಗೂ ಕೋರ್‌ ವಲಯ ಎಂದು ವಿಭಾಗಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದೆ. ಕಾನೂನಿನ ಕಣ್ಗಾವಲು ಇದಕ್ಕಿದೆ. ಪ್ಲಾಸ್ಟಿಕ್‌ ಬಳಕೆ ಇಲ್ಲ. ಪರಿಸರಕ್ಕೆ ಪೂರಕವಾದ ಮೀನು ಗಾರಿಕೆಯೂ ಇದೆ. ಇಲ್ಲಿ ದೊಡ್ಡ ಮೀನು ಗಳನ್ನು ಮಾತ್ರ ಹಿಡಿಯಲಾಗುತ್ತದೆ. ಸಣ್ಣ ಮೀನುಗಳು ಪಕ್ಷಿಗಳ ಆಹಾರವಾಗುತ್ತವೆ. ಕಾರಂಜಿ ಕೆರೆಯು ಇತರ ಕೆರೆಗಳ ಅಭಿವೃದ್ಧಿಗೆ ಮಾದರಿಯಾಗಿದೆ.

‘ಸುಸ್ಥಿರತೆ– ಜೀವನಶೈಲಿಯಾಗಬೇಕು’

ಹೊಳೆಗಳಲ್ಲಿ ನೀರು ಕಡಿಮೆಯಾದಾಗ ನಗರದವರಿಗೆ ತೊಂದರೆ ಆಗುತ್ತದೆ. ಜಲಕ್ಷಾಮ ತಡೆಯಲು ನಗರದ ನಾಗರಿಕರು ಮಳೆ ನೀರು ಸಂಗ್ರಹಿಸಬೇಕು. ನೀರಿನ ಪುನರ್ಬಳಕೆ ಮಾಡಬೇಕು. ಸುಸ್ಥಿರತೆ ಎಂಬುದು ಜೀವನಶೈಲಿಯಾಗಬೇಕು. ಎಲ್ಲರೂ ಜಲ ಸಾಕ್ಷರರಾಗಬೇಕು. ವಿಶ್ವ ಜಲ ದಿನವು ಆತ್ಮವಿಮರ್ಶೆ ಮಾಡಿಕೊಳ್ಳುವ ದಿನವಾಗಿದೆ ಎಂದು ರವಿಕುಮಾರ್‌ ಹೇಳಿದರು.

‘ಕಟ್ಟಡ ತ್ಯಾಜ್ಯ ಪುನರ್ಬಳಕೆ ಘಟಕ ಸ್ಥಾಪನೆ ಆಗಲಿ’

ಮೈಸೂರನ್ನು ಮೈಸೂರು ಆಗಿಯೇ ಉಳಿಸಿಕೊಳ್ಳಬೇಕು. ಅಂದರೆ ಮೊದಲು ಕೆರೆಗಳನ್ನು ಉಳಿಸಿಕೊಳ್ಳಬೇಕು. ಕಟ್ಟಡ ತ್ಯಾಜ್ಯಗಳನ್ನು ಕೆರೆ ಅಂಚಿನಲ್ಲಿ ಸುರಿದು ಹಲವು ಕೆರೆಗಳನ್ನು ಈಗಾಗಲೇ ಕಳೆದುಕೊಂಡಿದ್ದೇವೆ. ಹಲವು ಕಟ್ಟೆಗಳು ಹೇಳಹೆಸರಿಲ್ಲವಾಗಿವೆ. ಹಿನಕಲ್‌ನಲ್ಲಿ 7 ಎಕರೆಯ ಕೆರೆಯೊಂದು ಮುಚ್ಚಿಹೋಗಿತ್ತು. ಕೆಲ ವರ್ಷಗಳ ಹಿಂದೆ ತೆರವುಗೊಳಿಸಲಾಗಿದೆ. ಕಟ್ಟಡ ತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿ ಆಗಬೇಕು. ತ್ಯಾಜ್ಯ ಮರುಬಳಕೆ ಘಟಕ ಸ್ಥಾಪಿಸಬೇಕು. ನಮ್ಮಲ್ಲಿ ತಂತ್ರಜ್ಞಾನ ಇದೆ. ಆದರೆ, ಇಚ್ಛಾಶಕ್ತಿಯ ಕೊರತೆ ಇದೆ ಎಂದು ರವಿಕುಮಾರ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು