ಬುಧವಾರ, ಅಕ್ಟೋಬರ್ 28, 2020
23 °C
ಹೆಚ್ಚು ಅನುದಾನ ಮೀಸಲಿಟ್ಟಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ

ಮೈಸೂರು: ಸರಳ ದಸರೆಗೆ ₹15 ಕೋಟಿ ಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈ ಬಾರಿ ದಸರಾವನ್ನು ಸರಳವಾಗಿ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ದೊಡ್ಡ ಮೊತ್ತ ವನ್ನು ಮೀಸಲಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿ ಕೊಟ್ಟಿದೆ.

ದಸರಾ ಖರ್ಚಿಗೆ ₹10 ಕೋಟಿ ನೀಡುವುದಾಗಿ ಸರ್ಕಾರ ಹೇಳಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ₹5 ಕೋಟಿ ನೀಡಲಿದೆ. ಅಂದರೆ ಒಟ್ಟು ₹15 ಕೋಟಿ ಮೀಸಲಿಡಲಾಗಿದೆ.

2019ರ ದಸರೆಗೆ ಸರ್ಕಾರ ₹18.5 ಕೋಟಿ ಮಂಜೂರು ಮಾಡಿತ್ತು. ಇದರಲ್ಲಿ ₹2 ಕೋಟಿ ಮೊತ್ತವನ್ನು ಚಾಮರಾಜನಗರ, ಶ್ರೀರಂಗಪಟ್ಟಣ ದಸರಾಕ್ಕೆ ಮೀಸಲಿಟ್ಟಿತ್ತು. ಮೈಸೂರು ದಸರಾಗೆ ₹16.5 ಕೋಟಿ ದೊರೆತ್ತಿತ್ತು.

ಕಳೆದ ವರ್ಷ ನಾಡಹಬ್ಬ ಅದ್ಧೂರಿಯಾಗಿ ನಡೆದಿತ್ತು. ಜಂಬೂ ಸವಾರಿ, ಯುವ ದಸರಾ, ಯುವ ಸಂಭ್ರಮ, ಫಲಪುಷ್ಪ ಪ್ರದರ್ಶನ, ಅಹಾರಮೇಳ, ಚಲನಚಿತ್ರೋತ್ಸವ, ದಸರಾ ಕ್ರೀಡೆ ಆಯೋಜನೆಯಾಗಿದ್ದವು.

ಈ ಬಾರಿ ಅರಮನೆ ಆವರಣದಲ್ಲಿ ಒಂಬತ್ತು ದಿನ ಸಾಂಸ್ಕೃತಿಕ ವೈಭವ ಮಾತ್ರ ಇರಲಿದೆ. ಇತರ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸ ಲಾಗಿದೆ. ಅರಮನೆ ಆವರಣದ ಕಾರ್ಯಕ್ರಮ, ಚಾಮುಂಡಿಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ಮತ್ತು ದೀಪಾಲಂಕಾರಕ್ಕೆ ₹ 15 ಕೋಟಿ ಬೇಕೇ ಎಂಬ ಪ್ರಶ್ನೆ ಎದ್ದಿದೆ.

₹ 8.25 ಕೋಟಿ ಬಾಕಿ: ಕಳೆದ ದಸರಾ ಅನುದಾನದಲ್ಲಿ ಇನ್ನೂ ₹ 8.25 ಕೋಟಿ ಬಾಕಿಯಿದೆ. ಬಾಕಿ ಮೊತ್ತವನ್ನು ಈ ಬಾರಿಯ ಅನುದಾನದಲ್ಲಿ ನೀಡಲಾಗುವುದು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ. ಆದರೆ ಕಳೆದ ಬಾರಿಯ ಬಾಕಿಯನ್ನು ಈ ಬಾರಿಯ ಅನುದಾನದಿಂದ ಮುರಿದು ಕೊಳ್ಳಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಮಾತ್ರವಲ್ಲ, ಕಳೆದ ಬಾರಿ ಸರ್ಕಾರದ ಪೂರ್ವಾನುಮತಿ ಪಡೆಯದೆಯೇ ಹೆಚ್ಚುವರಿ ಮೊತ್ತ ಖರ್ಚು ಮಾಡಿರುವುದು ಕೂಡ ಬಯಲಾಗಿದೆ. ವಿವಿಧ ಸಮಿತಿಗಳು ಖರ್ಚು ಮಾಡಿದ್ದ ಹಣದ ಲೆಕ್ಕವನ್ನು ಇದುವರೆಗೂ ಸಾರ್ವಜನಿಕರ ಮುಂದೆ ಇಟ್ಟಿಲ್ಲ. ಕಳೆದ ದಸರಾ ಅವಧಿಯಲ್ಲಿ ಇದ್ದಂತಹ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಬದಲಾಗಿದ್ದಾರೆ.

ದೀಪಾಲಂಕಾರ ಏಕೆ?: ದಸರಾ ವೇಳೆ ಬರುವ ಪ್ರವಾಸಿಗರಿಗೆ ಮುದ ನೀಡಲು ನಗರದಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ಪ್ರಮುಖ ರಸ್ತೆಗಳು, ವೃತ್ತಗಳು ದೀಪಗಳಿಂದ ಕಂಗೊಳಿ ಸುತ್ತವೆ. ಆದರೆ ಈ ಬಾರಿ ಕೊರೊನಾ ಭಯ ಮತ್ತು ಸರಳ ದಸರಾ ಎಂಬ ಕಾರಣ ಪ್ರವಾಸಿಗರು ಬರುವ ಸಾಧ್ಯತೆ ಕಡಿಮೆ. ಇಂಥ ಪರಿಸ್ಥಿತಿಯಲ್ಲಿ ದೀಪಾಲಂಕಾರದ ಅಗತ್ಯ ಇದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರನ್ನು ಕಾಡುತ್ತಿದೆ.

‘ಸರಳ ಆಚರಣೆಗೆ ಸಿಎಂ ಸೂಚನೆ’

ದಸರೆಗೆ ₹15 ಕೋಟಿ ನಿಗದಿಪಡಿಸಿದೆಯಾದರೂ ದುಂದುವೆಚ್ಚಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

‘ದಸರಾ 10 ದಿನಗಳ ಕಾರ್ಯಕ್ರಮವಾಗಿದ್ದು, ಖರ್ಚು ಇರುತ್ತದೆ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳುವರು’ ಎಂದರು.

‘ಈ ಬಾರಿ ದಸರೆಯ ಖರ್ಚು ₹ 10 ಕೋಟಿ ಮೀರದ ಹಾಗೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದಿದ್ದಾರೆ.

ರಸ್ತೆಗಳ ಅಭಿವೃದ್ಧಿಗೆ ಬಳಸಲಿ

ಈ ಬಾರಿ ದಸರಾದಲ್ಲಿ ಜನರು ಸೇರುವಂತಹ ಯಾವುದೇ ಕಾರ್ಯಕ್ರಮಗಳು ಇಲ್ಲ. ದಸರೆಗೆ ಮೀಸಲಿಟ್ಟಿರುವ ₹15 ಕೋಟಿ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ನಗರದ ರಸ್ತೆಗಳ ಅಭಿವೃದ್ಧಿಗೆ ಬಳಸಲಿ. ಸರಳ ದಸರಾ ಕಾರಣ ದೀಪಾಲಂಕಾರದ ಅಗತ್ಯವಿಲ್ಲ. ಆ ಹಣವನ್ನು ರಸ್ತೆ ಗುಂಡಿ ಮುಚ್ಚಲು, ರಸ್ತೆಗಳಿಗೆ ಟಾರು ಹಾಕಲು ಬಳಸಬೇಕು.

–ಬಿ.ಜಿ.ರಂಗೇಗೌಡ, ವಿಜಯನಗರ, ಮೈಸೂರು

ಸಂಕಷ್ಟದ ಅವಧಿಯಲ್ಲಿ ಬೇಕಿತ್ತೇ?

ಕೋವಿಡ್‌ ತೊಂದರೆಯಿಂದ ಜನರು ಇನ್ನೂ ಹೊರಬಂದಿಲ್ಲ. ಜನರ ಸಂಕಷ್ಟ ನೀಗಿಸಲು ಗಮನಹರಿಸುವ ಬದಲು ಸರಳ ದಸರೆಗೆ ₹ 15 ಕೋಟಿ ಮೀಸಲಿಡುವ ಅಗತ್ಯವಾದರೂ ಏನಿತ್ತು? ಕೊರೊನಾ ಭಯ ಇರುವುದರಿಂದ ಜನರು ಬರುವುದಿಲ್ಲ. ಆದ್ದರಿಂದ ಪ್ರವಾಸೋದ್ಯಮ ಉತ್ತೇಜಿಸಲು ಸಾಧ್ಯವಿಲ್ಲ.

–ಹರೀಶ್, ಸರಸ್ವತಿಪುರಂ, ಮೈಸೂರು

ಶ್ರೀರಂಗಪಟ್ಟಣ ದಸರಾ ಸಾಂಕೇತಿಕ!

ಮಂಡ್ಯ: ಮೈಸೂರು ದಸರಾಕ್ಕಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾ ಆಚರಣೆ ಈ ಬಾರಿ ಸಾಂಕೇತಿಕವಾಗಿ ಜರುಗಲಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದಸರಾ ಕೇವಲ ಸರಳ ಪೂಜೆಗಷ್ಟೇ ಸೀಮಿತವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವರು ನಂದಿ ಧ್ವಜ ಪೂಜೆ ಮಾಡುವ ಮೂಲಕ ದಸರಾ ಜಂಬೂಸವಾರಿಗೆ ಚಾಲನೆ ನೀಡುತ್ತಿದ್ದರು. ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಕೂರಿಸಿ ಮೆರವಣಿಗೆ ನಡೆಸಲಾಗುತ್ತಿತ್ತು. ಕಿರಂಗೂರು ಬನ್ನಿ ಮಂಟಪದಿಂದ ಆರಂಭವಾಗುತ್ತಿದ್ದ ಜಂಬೂ ಸವಾರಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ದವರೆಗೆ ಸಾಗುತ್ತಿತ್ತು. ವಿವಿಧ ಸ್ತಬ್ಧ ಚಿತ್ರಗಳು, ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದವು.

ದಸರಾ ಆಚರಣೆಗೆ ಸರ್ಕಾರ ಕಳೆದ ವರ್ಷ ₹ 40 ಲಕ್ಷ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಸರಳ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮ ವಾತಾವರಣ ಇರುವುದಿಲ್ಲ. ಅಲ್ಲದೇ ಜಿಲ್ಲಾಡಳಿತ ದಸರಾಗೆ ಹಣ ಬಿಡುಗಡೆ ಮಾಡುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.

‘ಈ ಬಾರಿ ಶ್ರೀರಂಗಪಟ್ಟಣ ದಸರಾ ಅತ್ಯಂತ ಸರಳವಾಗಿ ನಡೆಯಲಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

‘ಮಂಜಿನ ನಗರಿ’ಯಲ್ಲೂ ನವರಾತ್ರಿ ರಂಗು ಮಾಯ

ಮಡಿಕೇರಿ: ಪ್ರತಿ ವರ್ಷದ ಅಕ್ಟೋಬರ್‌ನಲ್ಲಿ ‘ಮಂಜಿನ ನಗರಿ’ ಮಡಿಕೇರಿಯಲ್ಲೂ ದಸರಾ ವೈಭವ ಪಡೆದುಕೊಳ್ಳುತ್ತಿತ್ತು. ನವರಾತ್ರಿಯ ರಂಗಿನೊಂದಿಗೆ ಪ್ರವಾಸೋದ್ಯಮ ಕ್ಷೇತ್ರವು ಗರಿಗೆದರುತ್ತಿತ್ತು. ವ್ಯಾಪಾರಸ್ಥರಿಗೆ ದಸರಾ ಆರ್ಥಿಕ ಚೈತನ್ಯ ತುಂಬುತ್ತಿತ್ತು. ರೈತರ ಮನಸ್ಸಿನಲ್ಲೂ ನವೋಲ್ಲಾಸ ಮೂಡಿಸುತ್ತಿತ್ತು ಈ ದಸರಾ. ಆದರೆ, ಈ ವರ್ಷ ಮಂಜಿನ ನಗರಿಯ ದಸರಾದ ಮೇಲೆ ಕೋವಿಡ್‌– 19 ಕರಿನೆರಳು ಚಾಚಿದೆ; ಸಂಭ್ರಮ ಕಸಿದಿದೆ. 

‘ಮಡಿಕೇರಿ ದಸರಾ’ವನ್ನೂ ಸರಳವಾಗಿ ನಡೆಸಲು ಚಿಂತಿಸಲಾಗಿದ್ದು ಅಂತಿಮ ತೀರ್ಮಾನ ಕೈಗೊಳ್ಳುವುದು ಬಾಕಿಯಿದೆ. ಕರಗೋತ್ಸವ ಸಮಿತಿ, ದಶಮಂಟಪ ಸಮಿತಿ ಹಾಗೂ ದಸರಾ ಸಮಿತಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ದಸರಾ ರೂಪುರೇಷೆಗಳ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯದಶಮಿಯಂದು ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆ ನಾಡಿನಲ್ಲಿಯೇ ಪ್ರಸಿದ್ಧಿ. ಆದರೆ, ಕೊರೊನಾ ಕಾರಣಕ್ಕೆ ಶೋಭಾಯಾತ್ರೆ ನಡೆಯುವ ಸಾಧ್ಯತೆ ಕಡಿಮೆಯಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಮಕ್ಕಳ ಸಂತೆ, ಶ್ವಾನ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಯುವ ದಸರಾ ಇದ್ಯಾವುದೂ ಈ ವರ್ಷ ಇರುವುದಿಲ್ಲ.

ಕವಿಗೋಷ್ಠಿ ನಡೆಸಲು ಸಿದ್ಧ: ‘ಜಿಲ್ಲಾಡಳಿತ ಅನುಮತಿ ನೀಡಿದರೆ ದಸರಾ ಕವಿಗೋಷ್ಠಿಯನ್ನು ಸರಳವಾಗಿ ನಡೆಸುತ್ತೇವೆ. ಜಿಲ್ಲೆಯ ಪ್ರಾಕೃತಿಕ ಬದಲಾವಣೆ ಹಾಗೂ ಕೋವಿಡ್‌ನಿಂದ ಆಗಿರುವ ಸಮಸ್ಯೆಗಳ ಕುರಿತು ಕವಿಗೋಷ್ಠಿಯಲ್ಲಿ ಬೆಳಕು ಚೆಲ್ಲಲು ಪ್ರಯತ್ನಿಸಲಾಗುವುದು’ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿನಾ ಸೋಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಡಿಜಿಲ್ಲೆಯಲ್ಲಿ ದಸರಾ ಅನುಮಾನ

ಚಾಮರಾಜನಗರ: ಮೈಸೂರಿನಲ್ಲಿ ನಡೆಯುವ ದಸರಾ ಸಂದರ್ಭದಲ್ಲಿ ಪ್ರತಿ ವರ್ಷ ಗಡಿ‌ಜಿಲ್ಲೆ ಚಾಮರಾಜನಗರ ದಲ್ಲೂ 3–4 ದಿನಗಳ ಕಾಲ ದಸರಾ ಆಚರಿಸಲಾಗುತ್ತದೆ.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ತಂಡಗಳ ಮೆರವಣಿಗೆ, ರೈತ ದಸರಾ, ಮಹಿಳಾ ದಸರಾ, ಚಿತ್ರೋತ್ಸವ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮೈಸೂರು ದಸರಾಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆಯುವ ಸಭೆಯಲ್ಲೇ ಜಿಲ್ಲಾ ದಸರಾ ಆಯೋಜಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುತ್ತದೆ.  ಜಿಲ್ಲಾ ದಸರೆಗೆ ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಇದೇ ಸಭೆಯಲ್ಲಿ ಘೋಷಿಸಲಾಗುತ್ತದೆ. ಈ ಬಾರಿಯ ಸಭೆಯಲ್ಲಿ ಜಿಲ್ಲೆಯಿಂದ ಯಾರೂ ಭಾಗವಹಿಸಿಲ್ಲ. ಸರ್ಕಾರ ಅನುದಾನವನ್ನೂ ಘೋಷಿಸಿಲ್ಲ. ಕಳೆದ ಸಲ ₹1 ಕೋಟಿ ನೀಡಲಾಗಿತ್ತು. 

ಆದರೆ, ಕೋವಿಡ್ ಕಾರಣದಿಂದ ಮೈಸೂರಿನಲ್ಲೇ ಸರಳ ದಸರಾ ಆಯೋಜನೆಗೊಂಡಿರುವುದರಿಂದ ಚಾಮ ರಾಜನಗರ ಜಿಲ್ಲಾ ದಸರಾ ನಡೆಯುವುದು ಅನುಮಾನ.

ದಸರಾ ಆಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ದಿಂದ ಇದುವರೆಗೆ ಸೂಚನೆ ಬಂದಿಲ್ಲ. ಮೈಸೂರಿನಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಆಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಕಲಗೂಡು ದಸರಾ ಸರಳ

ಹಾಸನ: ಕೋವಿಡ್ ಕಾರಣಕ್ಕೆ ಈ ಬಾರಿ ಅರಕಲಗೂಡು ದಸರೆ ಕಳೆಗುಂದಿದೆ. ದಸರಾವನ್ನು ಅತ್ಯಂತ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಅನುದಾನ ದೊರೆಯುತ್ತಿದ್ದ ಕಾರಣ ಮಹಿಳಾ, ಯುವ, ಕ್ರೀಡಾ, ರೈತ ದಸರಾ ಆಯೋಜನೆಯಿಂದ ನವರಾತ್ರಿ ಉತ್ಸವ ರಂಗು ಪಡೆದುಕೊಂಡಿದೆ. ಗ್ರಾಮ ದೇವತೆ ಸೇರಿದಂತೆ ಪಟ್ಟಣದ 18 ಕೋಮಿಗೆ ಸೇರಿದ ದೇವತೆಗಳ ಉತ್ಸವ ಮೂರ್ತಿಯನ್ನು ದೀಪಾಂಲಕೃತ ವಾಹನದ ಮೇಲೆ ಕೂರಿಸಿ ಉತ್ಸವ ನಡೆಸಲಾಗುತ್ತದೆ. ಕೋಟೆ ನರಸಿಂಹಸ್ವಾಮಿ ದೇಗುಲದಿಂದ ಹೊರಡುವ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ, ಸೋಮನ ಕುಣಿತ, ಕೀಲು ಕುದುರೆ, ಕಲಾ ತಂಡಗಳನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದರು. ಇದನ್ನು ‘ಕೋಮು ಸೌಹಾರ್ದತೆ ದಸರಾ’ ಎಂದು ಕರೆಯುವುದುಂಟು.

‘ಮೊದಲ ದಿನ ಉದ್ಘಾಟನೆ ನಡೆಯಲಿದ್ದು, ಕೊನೆಯ ದಿನ ಬನ್ನಿ ಮಂಟಪದಲ್ಲಿ ಕದಳಿ ಛೇದನ, ಪೂಜೆ, ಸಭಾ ಕಾರ್ಯಕ್ರಮ ನಡೆಸಲಾಗುವುದು. ಎರಡು ವರ್ಷಗಳಲ್ಲಿ ಸರ್ಕಾರ ಉತ್ಸವಕ್ಕೆ ₹30 ಲಕ್ಷ ಅನುದಾನ ನೀಡಿದೆ. ಈ ಬಾರಿ ಅನುದಾನ ದೊರೆಯದ ಕಾರಣ ಇರುವ ಹಣದಲ್ಲೇ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು