ಮಂಗಳವಾರ, ಆಗಸ್ಟ್ 3, 2021
23 °C
ನರೇಗಾ ಯೋಜನೆಯ ಪ್ರಗತಿಗೂ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ; ಎಲ್ಲ ಕೆರೆಗಳ ಅಭಿವೃದ್ಧಿಗೆ ಗಡುವು

ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ಗೆ ಆಮೆಗತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ’₹ 294 ಕೋಟಿ ನೀಡಿದ್ದರೂ ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಆಮೆಗತಿಯಲ್ಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ’ದೊಡ್ಡಮೊತ್ತದ ಅನುದಾನ ನೀಡಿದ್ದರೂ ಗುತ್ತಿಗೆದಾರರಿಗೆ ಕೇವಲ ₹ 20 ಕೋಟಿ ನೀಡಿರುವುದು ಏಕೆ? ಮಾಸಾಂತ್ಯದೊಳಗೆ ಪ್ರಗತಿ ಸಾಧನೆಯಾಗಬೇಕು’ ಎಂದು ಸೂಚಿಸಿದರು.

’ಕಾಮಗಾರಿಗಳಿಗೆ ಹಂತಹಂತವಾಗಿ ಹಣ ನೀಡಿದರೆ ಗುತ್ತಿಗೆದಾರರು ಬೇಗನೇ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ಮಾಸಾಂತ್ಯಕ್ಕೆ ಯೋಜನೆ ಪೂರ್ಣಗೊಂಡಿರುವ ಕಾಮಗಾರಿಗಳ ವಿವರ ಕಳುಹಿಸಿಕೊಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಯೋಜನೆಯ ಹಿಂದಿನ ಸಾಲಿನ ಕಾಮಗಾರಿಗಳ ಪ್ರಗತಿಯಲ್ಲಿ ನಂಜನಗೂಡು ಮತ್ತು ಪಿರಿಯಾಪಟ್ಟಣ ತಾಲ್ಲೂಕು ಹಿಂದುಳಿದಿರುವುದಕ್ಕೆ ಆಕ್ಷೇಪ‍ ವ್ಯಕ್ತಪಡಿಸಿದರು.

’ಪ್ರತಿ ಮನೆಯ ನಲ್ಲಿಗಳಿಗೆ ಮೀಟರ್ ಅಳವಡಿಸಲು ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ‌’ ಎಂಬ ಅಧಿಕಾರಿಗಳ ಮಾತನ್ನು ಒಪ್ಪದ ಈಶ್ವರಪ್ಪ, ‘ಇಂತಹ ಕಡೆ ಸ್ಥಳೀಯ ಶಾಸಕರ ನೆರವು ಪಡೆದು ಗ್ರಾಮಸ್ಥರ ಮನವೊಲಿಸಬೇಕು’ ಎಂದು ಸೂಚಿಸಿದರು.

ಕೆರೆಗಳ ಅಭಿವೃದ್ಧಿಗೆ ಗಡುವು: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಲು ಈಶ್ವರಪ್ಪ ಜ. 2ರ ಗಡುವು ವಿಧಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಜಿಲ್ಲೆಯಲ್ಲಿ ಈವರೆಗೆ ಸಾಧಿಸಿರುವ ಪ್ರಗತಿಗೆ ಅತೃಪ್ತಿ ವ್ಯಕ್ತಪಡಿಸಿದರು. ’ಕೇಂದ್ರ ಸರ್ಕಾರದ ಮಹತ್ವದ ‘ಮಳೆ ನೀರನ್ನು ಹಿಡಿಯಿರಿ’  ಪರಿಕಲ್ಪನೆಯನ್ನು ಇಲ್ಲಿ ಏಕೆ ಜಾರಿಗೊಳಿಸಬಾರದು’ ಎಂದು ಪ್ರಶ್ನಿಸಿದರು.

‘ನರೇಗಾ ಯೋಜನೆಯಡಿ ಏನು ಮಾಡಬೇಕು ಎಂಬ ಪರಿಕಲ್ಪನೆಯೇ ಅಧಿಕಾರಿಗಳಿಗೆ ಇಲ್ಲ. ಕೋವಿಡ್ ಕಾರಣ ಹೇಳಿ ನುಣುಚಿಕೊಳ್ಳುವುದು ಸರಿಯಲ್ಲ. ಗುರಿ ನಿಗದಿ ಮಾಡಿಕೊಳ್ಳುವುದಕ್ಕೂ ಮುನ್ನ ಯೋಚಿಸಿ ನಿಗದಿ ಮಾಡಿಕೊಳ್ಳಬೇಕು. ಸದ್ಯ, ಸಾಧಿಸಿರುವ ಪ್ರಗತಿ ಸರಿಯಲ್ಲ’ ಎಂದು ಕಿಡಿಕಾರಿದರು.

’ಗ್ರಾಮ ಪಂಚಾಯಿತಿ ಸದಸ್ಯರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಮುಂದಿನ ವರ್ಷ ಜ. 2ಕ್ಕೆ ಕೆರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಶಾಸಕರಾದ ಸಾ.ರಾ.ಮಹೇಶ್, ಕೆ.ಮಹದೇವ್, ಅಶ್ವಿನ್ ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೀಶ್ ಇದ್ದರು.

ಇದಕ್ಕೂ ಮುನ್ನ ಈಶ್ವರಪ್ಪ ಚಾಮುಂಡೇ‌ಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಂಸ್ಥೆಯಲ್ಲಿ ಅಬ್ದುಲ್ ನಜೀರ್‌ ಸಾಬ್ ಪುತ್ಥಳಿ ಅನಾವರಣ ಮಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.