ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕುಡುಕರ ಅಡ್ಡೆ ಜಯಚಾಮರಾಜೇಂದ್ರ ಕ್ರೀಡಾಂಗಣ

ಸರಗೂರಿನ ಹೃದಯಭಾಗದಲ್ಲಿರುವ ಮೈದಾನ, ಮೂಲಸೌಕರ್ಯ ಮರೀಚಿಕೆ, ವಾಹನಗಳ ನಿಲುಗಡೆ ತಾಣ
Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸರಗೂರು: ಪಟ್ಟಣದ ಹೃದಯ ಭಾಗದಲ್ಲಿರುವ ಜಯಚಾಮರಾಜೇಂದ್ರ ಕ್ರೀಡಾಂಗಣ ಈವರೆಗೂ ಅಭಿವೃದ್ಧಿ ಕಂಡಿಲ್ಲ. ಕ್ರೀಡಾಂಗಣದ ಸುತ್ತಲೂ ಕಾಂಪೌಂಡ್‌ ಇಲ್ಲ. ಇದು ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟರೆ, ಪಕ್ಕದಲ್ಲೇ ಇರುವ ಸಮುದಾಯ ಭವನದಲ್ಲಿ ನಡೆಯುವ ಮದುವೆ–ಮುಂಜಿಗಳಿಗೆ ಬರುವ ಜನರ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಡುತ್ತದೆ. ಮಳೆಗಾಲದಲ್ಲಿ ಕೆರೆಯಂತಾಗುತ್ತದೆ. ಸಮಸ್ಯೆಗಳ ನಡುವೆ ಮಕ್ಕಳು, ಕ್ರೀಡಾಪಟುಗಳು ಆಟವಾಡುವಂತಹ ಪರಿಸ್ಥಿತಿ ಇದೆ.

ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ಹಾಗೂ ಕ್ರೀಡಾಪಟುಗಳು ಶಾಸಕರು, ಸಂಸದರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಈವರೆಗೂ ಏನೂ ಪ್ರಯೋಜನವಾಗಿಲ್ಲ.

ಕ್ರೀಡಾಂಗಣದ ಸುತ್ತ ಕಾಂಪೌಂಡ್‌ ನಿರ್ಮಿಸಿಲ್ಲ. ಇಲ್ಲಿಗೆ ಹೊಂದಿಕೊಂಡಂತೆ ವಿದ್ಯುತ್‌ ಪರಿವರ್ತಕವಿದೆ. ರಾತ್ರಿ ವೇಳೆಯಲ್ಲಿ ಕುಡುಕರು ಕ್ರೀಡಾಂಗಣದಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಗುಂಪು ಗುಂಪಾಗಿ ಬಂದು ಮದ್ಯ ಸೇವಿಸಿ, ಬಾಟಲಿಗಳನ್ನು ಅಲ್ಲೇ ಎಸೆಯುತ್ತಾರೆ. ತಿಂಡಿ– ತಿನಿಸು, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಿಸಾಡುತ್ತಾರೆ. ಆಟವಾಡಲು ಬರುವವರೇ ಈ ಕಸವನ್ನು ತೆಗೆದು ಸ್ವಚ್ಛಗೊಳಿಸುವಂತಹ ಪರಿಸ್ಥಿತಿ ಇದೆ.

ಕ್ರೀಡಾಂಗಣದ ಸಮೀಪದಲ್ಲೇ ಸಮುದಾಯ ಭವನವಿದೆ. ಇಲ್ಲಿ ನಡೆಯುವ ಮದುವೆ, ನಾಮಕರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬರುವ ಜನರು ತಮ್ಮ ಕಾರು, ಬೈಕ್‌ಗಳನ್ನು ಕ್ರೀಡಾಂಗಣದೊಳಗೆ ತಂದು ನಿಲ್ಲಿಸುತ್ತಾರೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ.

ಈ ಕ್ರೀಡಾಂಗಣವು ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ಕೆರೆಯಂತಾಗುತ್ತದೆ. ರಸ್ತೆ ಮೇಲಿನ ನೀರು ಕ್ರೀಡಾಂಗಣದೊಳಗೆ ನುಗ್ಗುತ್ತದೆ. ಅಲ್ಲದೆ, ಕ್ರೀಡಾಂಗಣದ ಅಕ್ಕಪಕ್ಕ ಒತ್ತುವರಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಸ್ಥಳೀಯರು ದೂರು ನೀಡಿದ್ದಾರೆ. ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ತೆರವು ಕಾರ್ಯಾಚರಣೆ ನಡೆದಿಲ್ಲ.

ದಾನವಾಗಿ ಬಂದ ಭೂಮಿ: ಪಟ್ಟಣದ ಬ್ರಹ್ಮದೇವಯ್ಯ ಅವರು ನಾಲ್ಕು ದಶಕಗಳ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಎಕರೆ 5 ಗುಂಟೆ ಜಮೀನು ನೀಡಿದ್ದರು. ಸರ್ವೆ ನಂ. 1/2ರಲ್ಲಿ ಕ್ರೀಡಾಂಗಣ ಇದ್ದು, ಬ್ರಹ್ಮದೇವಯ್ಯ ದಾನವಾಗಿ ನೀಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕರು ಹೇಳುತ್ತಾರೆ. ಆದರೆ, ಇದಕ್ಕೆ ಯಾವುದೇ ದಾನದ ಪತ್ರ ಇಲ್ಲ. ಈ ಜಾಗವನ್ನು ಶಾಲೆಯ ಹೆಸರಿಗಾಗಲಿ, ಪಟ್ಟಣ ಪಂಚಾಯಿತಿ ಹೆಸರಿಗಾಗಲಿ ಬರೆದು ಕೊಟ್ಟಿಲ್ಲ. ಆದರೆ, ದಶಕಗಳಿಂದ ಶಾಲಾ ಮಕ್ಕಳು, ಕ್ರೀಡಾಪಟುಗಳು, ಸಾರ್ವಜನಿಕರು ಕ್ರೀಡಾಂಗಣದ ಉಪಯೋಗ ಪಡೆದು ಕೊಂಡು ಬರುತ್ತಿದ್ದಾರೆ. ಪಟ್ಟಣದಲ್ಲಿ ಯಾವುದೇ ಕ್ರೀಡಾಕೂಟ, ಸಾರ್ವಜನಿಕ ಕಾರ್ಯಕ್ರಮ ನಡೆದರೂ ಈ ಕ್ರೀಡಾಂಗಣವೇ ಬೇಕಾಗಿದೆ.

ಈಗಲೂ ಈ ಜಾಗ ಬ್ರಹ್ಮದೇವಯ್ಯ ಅವರ ಹೆಸರಲ್ಲೇ ಇದ್ದು, ಆರ್‌ಟಿಸಿಯಲ್ಲೂ ಅವರು ಹೆಸರೇ ಇದೆ. ಹೀಗಾಗಿ, ಸರ್ಕಾರದಿಂದ ಯಾವುದೇ ಅನುದಾನ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬ್ರಹ್ಮದೇವಯ್ಯ ಅವರ ಕುಟುಂಬದರು ಈ ಜಾಗವನ್ನು ಪಟ್ಟಣ ಪಂಚಾಯಿತಿ ಹೆಸರಿಗೆ ಬರೆದುಕೊಟ್ಟರೆ, ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ತಾಲ್ಲೂಕು ಕ್ರೀಡಾಂಗಣ ಆಗಬೇಕು’

ಜಯಚಾಮರಾಜೇಂದ್ರ ಕ್ರೀಡಾಂಗಣವು ತಾಲ್ಲೂಕು ಕ್ರೀಡಾಂಗಣ ಆಗಬೇಕು. ಕ್ರೀಡಾಂಗಣಕ್ಕೆ ಸೇರಿದ ಸ್ಥಳದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಆ ಮನೆಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ಬಾಲ್ಯದಿಂದಲೂ ಈ ಕ್ರೀಡಾಂಗಣದಲ್ಲಿ ಆಟವಾಡಿ ಬೆಳೆದಿದ್ದೇನೆ. ಈ ಸ್ಥಳ ಸಾರ್ವಜನಿಕ ಸ್ವತ್ತು. ಮಕ್ಕಳು ಆಟವಾಡಲಿ ಎನ್ನುವ ಉದ್ದೇಶದಿಂದ ಬ್ರಹ್ಮದೇವಯ್ಯ ಅವರು ಬಹಳ ವರ್ಷಗಳ ಹಿಂದೆಯೇ ಶಾಲೆಗೆ ಜಾಗ ನೀಡಿದ್ದಾರೆ. ಅವರ ಕುಟುಂಬದವರು ಬಂದು ಕೇಳುವ ಸ್ವಾತಂತ್ರ್ಯ ಇಲ್ಲ. ಸರ್ವೆ ರಾಜಣ್ಣ ಟ್ರಸ್ಟ್ ವತಿಯಿಂದ ಕ್ರೀಡಾಂಗಣದಲ್ಲಿ ನಡಿಗೆ ಪಥ ಮಾಡಿಸಿ ಕೊಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಎಸ್.ವಿ.ವೆಂಕಟೇಶ್ ಹೇಳಿದರು.

‘ಪ.ಪಂ.ಗೆ ಖಾತೆ ಮಾಡಬಹುದು’

ಜಯಚಾಮರಾಜೇಂದ್ರ ಕ್ರೀಡಾಂಗಣವು ಸುಮಾರು 40 ವರ್ಷಗಳಿಂದ ಸಾರ್ವಜನಿಕರ ಸ್ವತ್ತಾಗಿ ಬಳಕೆ ಆಗುತ್ತಿದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ವತಿಯಿಂದ ಪ್ರಕಟಣೆ ಹೊರಡಿಸಿ, ಯಾರಿಂದಲೂ ಆಕ್ಷೇಪಣೆ ಬಾರದಿದ್ದರೆ ಪಟ್ಟಣ ಪಂಚಾಯಿತಿಗೆ ಖಾತೆ ಮಾಡಬಹುದು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.

ಮೂಲಸೌಕರ್ಯ ಮರೀಚಿಕೆ

ಕ್ರೀಡಾಂಗಣದಲ್ಲಿ ಆಟವಾಡಿರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇಲ್ಲಿ ಹೆಚ್ಚಾಗಿ ವಾಲಿಬಾಲ್‌, ಕ್ರಿಕೆಟ್‌, ಬಾಡ್ಮಿಂಟನ್‌ ಆಡುತ್ತಾರೆ. ಆದರೆ, ಇಲ್ಲಿ ತರಬೇತಿಗೆ ಬೇಕಾದ ಪೂರಕ ವಾತಾವರಣವಿಲ್ಲ. ಕಾಂಪೌಂಡ್‌, ಕುಡಿಯುವ ನೀರಿನ ವ್ಯವಸ್ಥೆ, ಕಟ್ಟಡ ಸೇರಿದಂತೆ ಯಾವುದೇ ಮೂಲಸೌಕರ್ಯವಿಲ್ಲ. ಕೆಲವರು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ.

– ರವಿಕುಮಾರ್‌, ಕ್ರೀಡಾಪಟು

***

ಒತ್ತುವರಿ ತೆರವುಗೊಳಿಸಲು ಆಗ್ರಹ

ಕ್ರೀಡಾಂಗಣದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಕ್ರೀಡಾಂಗಣದ ಜಾಗವನ್ನು ಸರ್ವೆ ಮಾಡಿಸಿ, ಒತ್ತುವರಿ ಮಾಡಿಕೊಂಡಿರುವವರನ್ನು ತೆರವು ಮಾಡಿಸಬೇಕು. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು.

– ಸರಗೂರು ಕೃಷ್ಣ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT