ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಅಮಾನತಿಗೆ ಆಗ್ರಹ: ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಸಾ.ರಾ.ಮಹೇಶ್

Last Updated 30 ಜುಲೈ 2021, 11:54 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದು, ಅನುಮತಿ ಇಲ್ಲದೇ ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದು ಸೇರಿದಂತೆ ಇನ್ನಿತರ ಆರೋಪಗಳನ್ನು ಎದುರಿಸುತ್ತಿರುವ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದರು.

‘ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಈಗಾಗಲೇ ವಿವಿಧ ಇಲಾಖೆಯ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಇವರ ಮೇಲೆ ದೋಷಾರೋಪ ನಿಗದಿ ಮಾಡಿ ವಿಚಾರಣೆ ನಡೆಸಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಇವರಿಂದ ವಸೂಲು ಮಾಡಿ, ಸೇವೆಯಿಂದ ವಜಾಗೊಳಿಸಬೇಕು’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ರೋಹಿಣಿ ಸಿಂಧೂರಿ ನನ್ನ ವಿರುದ್ಧ ಮಾಡಿದ ಭೂ ಹಗರಣದ ಆರೋಪಗಳೆಲ್ಲವೂ ಈಗ ಸುಳ್ಳೆಂದು ಸಾಬೀತಾಗಿದೆ. ಇವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್‌ ಮಾನನಷ್ಟ ಪ್ರಕರಣಗಳನ್ನೂ ದಾಖಲಿಸಿದ್ದೇನೆ’ ಎಂದು ತಿಳಿಸಿದರು.

ರಾಜ್ಯವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರತಿನಿಧಿಸುವ ವಕೀಲರನ್ನು ಬಿಟ್ಟು ಖಾಸಗಿ ವಕೀಲರಿಗೆ ‘ಮುಡಾ’ದಲ್ಲಿದ್ದ ₹ 24 ಲಕ್ಷ ಹಣ ನೀಡಿಕುರುಬಾರಹಳ್ಳಿ ಸರ್ವೇ ನಂಬರ್ 4ಕ್ಕೆ ಸಂಬಂಧಿಸಿದಂತೆ ನೇಮಕ ಮಾಡಿಕೊಂಡರು. ಆದರೆ, ಅರ್ಜಿ ವಿಚಾರಣೆಗೆ ಅಂಗೀಕಾರವೇ ಆಗಲಿಲ್ಲ. ಇದಾದ ಎರಡೇ ದಿನಕ್ಕೆ ಪ್ರಕರಣದಲ್ಲಿ ಜಯ ಗಳಿಸಿದ ರಾಜವಂಶಸ್ಥರೊಂದಿಗೆ ಫೋಟೊ ತೆಗೆಸಿಕೊಂಡರು. ಏನಿದರ ಮರ್ಮ ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು.

ಈ ಸರ್ವೆ ನಂಬರ್ 4ರಲ್ಲಿ ತಮ್ಮ ಪತಿಯ ಸ್ನೇಹಿತರಿಗೆ ಸೇರಿದ ಎಷ್ಟು ಎಕರೆ ಭೂಮಿ ಇದೆ ಎಂಬುದನ್ನು ರೋಹಿಣಿ ಸಿಂಧೂರಿ ಬಹಿರಂಗಪಡಿಸಬೇಕು ಎಂದು ಅವರು ಇದೇ ವೇಳೆ ಸವಾಲೆಸೆದರು.

ಸಾಮಾಜಿಕ ಮಾಧ್ಯಮಗಳಲ್ಲಿ ‘ಕಮ್‌ ಬ್ಯಾಕ್‌ ರೋಹಿಣಿ ಸಿಂಧೂರಿ’ ಅಭಿಯಾನವೂ ನಕಲಿ. ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಈಗಾಗಲೇ ಈ ಕುರಿತು ತಿಳಿಸಿದ್ದಾರೆ. ರೋಹಿಣಿ ಸಿಂಧೂರಿ ‘ಸಿಂಗಂ’ ಅಲ್ಲ, ಮೈಸೂರಿನ ಜನರನ್ನು ‘ಮಂಗಂ’ ಮಾಡಲು ಬಂದವರು ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT