ಭಾನುವಾರ, ಮಾರ್ಚ್ 7, 2021
32 °C
ಪ್ರತಿಭಟನಾ ಸ್ಥಳಕ್ಕೆ ಬಂದು ಕಾರ್ಖಾನೆಯ ನಿರ್ಧಾರ ಪ್ರಕಟಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

‘ಭೂಮಿ ನೀಡಿದವರಿಗೆ ಉದ್ಯೋಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದ ಏಷ್ಯನ್‌ ಪೇಂಟ್ಸ್ ಕಾರ್ಖಾನೆಗಾಗಿ ಭೂಮಿ ನೀಡಿದ ರೈತ ಕುಟುಂಬಗಳ 53 ಸದಸ್ಯರಿಗೆ ಕಾಯಂ ಉದ್ಯೋಗ ನೀಡಲು ಕಾರ್ಖಾನೆ ಆಡಳಿತ ಮಂಡಳಿ ಕೊನೆಗೂ ಒಪ್ಪಿಗೆ ಸೂಚಿಸಿದೆ.

ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ‘ಭೂಮಿ ನೀಡಿದ ರೈತ ಕುಟುಂಬದ 53 ಮಂದಿಗೆ 6 ತಿಂಗಳ ಕಾಲ ಶಿಷ್ಯವೇತನ ಸಹಿತ ತರಬೇತಿ ನೀಡಿ, ನಂತರ ಕಾಯಂ ಉದ್ಯೋಗ ನೀಡಲು ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ’ ಎಂದು ತಿಳಿಸಿದರು.

ಶಾಂತಿಯುತವಾಗಿ ಹೋರಾಟ ನಡೆಸಿದ ರೈತರನ್ನು ಇದೇ ವೇಳೆ ಅವರು ಶ್ಲಾಘಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಹೊಸಕೋಟೆ ಬಸವರಾಜು, ‘ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ 15 ದಿನಗಳ ಒಳಗೆ ವಿವಾದಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ರೈತ ಕುಟುಂಬಗಳ ಪರವಾಗಿ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಇಮ್ಮಾವು ಗ್ರಾಮದ ಮುಖಂಡ ಬಾಲು ಮಾತನಾಡಿ, ಹೋರಾಟದ ಅಂಗವಾಗಿ ಇಮ್ಮಾವು ಗ್ರಾಮದ 3 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಬಹಿಷ್ಕರಿಸಲಾಗಿತ್ತು. ಸಮಸ್ಯೆ ಬಗೆಹರಿದಿರುವುದರಿಂದ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗ್ರಾಮ ಪಂಚಾಯಿತಿಯ ಉಪಚುನಾವಣೆಯ ವೇಳೆ ಈ ಸ್ಥಾನಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.

ಕಾರ್ಖಾನೆಯ ಆಡಳಿತ ಮಂಡಳಿಯು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ಕೆಲವು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಪ್ಪಂದದ ಪ್ರಕಾರ, ಕಾರ್ಖಾನೆಗೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ರೈತರು ಕಾರ್ಖಾನೆಯ ಮುಂದೆ ಕಳೆದ 54 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಜ. 11ರಿಂದ ಕಾರ್ಖಾನೆಯ ಎರಡೂ ಪ್ರವೇಶದ್ವಾರಗಳನ್ನು ಬಂದ್ ಮಾಡಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು