ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಿನಿ ಹಿನ್ನೀರು: ರೆಸಾರ್ಟ್‌ ಮಾದರಿ ಕಟ್ಟಡ

ಪರಿಸರ ಸೂಕ್ಷ್ಮ ವಲಯ: ಹುಲಿ –ಆನೆಗಳ ಕಾರಿಡಾರ್‌ ಪ್ರದೇಶ
Last Updated 17 ನವೆಂಬರ್ 2020, 21:11 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಬಿನಿ ಹಿನ್ನೀರಿನ ಬಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌ ಮಾದರಿಯ ಬೃಹತ್‌ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಕ್ರಮವಾಗಿ ಮತ್ತೆ ಕೈಗೆತ್ತಿಕೊಳ್ಳಲಾಗಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ವಿಶೇಷ ಹುಲಿ ಸಂರಕ್ಷಣಾ ಪಡೆಯು (ಎಸ್‌ಟಿಪಿಎಫ್‌) ಮಂಗಳವಾರ ಸ್ಥಳಕ್ಕೆ ತೆರಳಿ ಕಾಮಗಾರಿ ತಡೆ ಹಿಡಿದಿದೆ. ಅಲ್ಲದೇ, ಕಾರ್ಮಿಕರನ್ನು ಅಲ್ಲಿಂದ ತೆರವುಗೊಳಿಸಿದೆ.

ತಾಲ್ಲೂಕಿನ ಎನ್‌.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಾಪುರ ಗ್ರಾಮದಲ್ಲಿ ಈ ಕಾಮಗಾರಿ ನಡೆ
ದಿದೆ. ಗಣಿ ಉದ್ಯಮಿಯೂ ಆಗಿರುವ ಪ್ರಭಾವಿ ವ್ಯಕ್ತಿಯೊಬ್ಬರು ಬೇನಾಮಿ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಹಿನ್ನೀರಿನ ಸಮೀಪವೇ ಈ ಜಮೀನು ಇದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಪರಿಸರ ಸೂಕ್ಷ್ಮ ವಲಯ ಇದಾಗಿದೆ. ಹುಲಿ ಹಾಗೂ ಆನೆಗಳ ಕಾರಿಡಾರ್‌ ಕೂಡ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಯ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ಪರಿಸರ ಹೋರಾಟಗಾರರು ಕೂಡ ಕಟ್ಟಡ ನಿರ್ಮಾಣದ ವಿರುದ್ಧ ದನಿ ಎತ್ತಿದ್ದಾರೆ.

ಅಕ್ರಮ ಕಟ್ಟಡ ಸಂಬಂಧ ಅರಣ್ಯ ಇಲಾಖೆ ಹಾಗೂ ಎನ್‌.ಬೆಳತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಈ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಅಲ್ಲದೇ, ಈ ಪ್ರದೇಶದಲ್ಲಿ ಅಕ್ರಮವಾಗಿ ಕಾಲುವೆ ತೋಡಿರುವ ಸಂಬಂಧ ನೀರಾವರಿ ಇಲಾಖೆಯು ನೀಡಿದ ದೂರಿನನ್ವಯ ನರಸಿಂಹಮೂರ್ತಿ ಎಂಬುವವರ ವಿರುದ್ಧ ತಾಲ್ಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ಮತ್ತೆ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಎನ್.ಬೆಳತ್ತೂರು ಸರ್ವೆ ಸಂಖ್ಯೆ 142 ಮತ್ತು 144 ರಲ್ಲಿ ವಾಸಮನೆ ನಿರ್ಮಾಣಕ್ಕೆಂದು ಅನುಮತಿ ಪಡೆದು, ರೆಸಾರ್ಟ್‌ ನಿರ್ಮಿಸಲಾಗುತ್ತಿದೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

‘ಈ ವಿಚಾರವಾಗಿ ನೋಟಿಸ್‌ನೀಡಲಾಗಿತ್ತು. ಅಲ್ಲದೇ, ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೇನೆ. ರೆಸಾರ್ಟ್‌ ಅಲ್ಲ; ಮನೆ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಣದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ನಿರಾಕ್ಷೇಪಣಾ ಪತ್ರ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ಪಡೆದಿರುವ ಅನುಮತಿ ದಾಖಲೆಗಳನ್ನು ತೋರಿಸುವಂತೆಸೂಚನೆ ನೀಡಿದ್ದೇವೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ ಡಿ.ಮಹೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈಜುಕೊಳ ಮತ್ತು ಐದು ಬೆಡ್‌ ರೂಂ ಇರಬಹುದಾದ ಕಟ್ಟಡ ಒಂದು ಕಡೆ ನಿರ್ಮಾಣವಾಗುತ್ತಿದ್ದರೆ, ಮತ್ತೊಂದೆಡೆ ಮೂರು ಕೊಠಡಿಗಳಿರುವ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಿನ್ನೀರಿನಿಂದ ಈ ಜಮೀನಿನವರೆಗೆ ಅಕ್ರಮವಾಗಿ ಕಾಲುವೆ ತೋಡಿರುವುದು ಕಂಡುಬಂದಿದೆ. ‘ನಮ್ಮ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಲುವೆ ತೆಗೆದಿರುವ ಬಗ್ಗೆ ನಾವು ದೂರು ನೀಡಿದ್ದೇವೆ’ ಎಂದು ಕಬಿನಿ ಜಲಾಶಯದ ಎಇಇ ಮೊಳಗಾವಿ ತಿಳಿಸಿದರು.

ದಾಖಲೆಗಳನ್ನು ಪರಿಶೀಲಿಸುತ್ತೇವೆ. ಆಕಸ್ಮಾತ್‌ ದಾಖಲೆಗಳಲ್ಲಿ ರೆಸಾರ್ಟ್‌ ಉದ್ದೇಶಕ್ಕೆ ಎಂದೇನಾದರೂ ಇದ್ದರೆ ಕ್ರಮ ಜರುಗಿಸುತ್ತೇವೆ
-ಡಿ.ಮಹೇಶ್‌ ಕುಮಾರ್‌, ಡಿಸಿಎಫ್‌, ನಾಗರಹೊಳೆ ರಾಷ್ಟ್ರೀಯ ಉದ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT