ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪದಗಳ ಟ್ಯಾಟೂ ಬೇಕೆನ್ನುವ ವಿದೇಶಿಯರು!

ಎರಡು ವರ್ಷಗಳಿಂದ 40 ಮಂದಿಗೆ ಕನ್ನಡದ ಟ್ಯಾಟೂ ಹಾಕಿದ ಸುನಿಲ್
Last Updated 31 ಅಕ್ಟೋಬರ್ 2019, 19:33 IST
ಅಕ್ಷರ ಗಾತ್ರ

ಮೈಸೂರು: ಕನ್ನಡ ಭಾಷೆಯನ್ನು ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂದು ಮಹಾಲಿಂಗರಂಗ ಕವಿ ತನ್ನ ‘ಅನುಭವಾಮೃತ’ ಕೃತಿಯಲ್ಲಿ ಹೇಳುತ್ತಾನೆ. ಇದನ್ನು ಸಮರ್ಥಿಸುವಂತಹ ಘಟನೆಗಳು ಇಲ್ಲಿನ ಅಕ್ಷಯ ಭಂಡಾರದಲ್ಲಿರುವ ಸಿ.ಕೆ.ಸುನಿಲ್ ಅವರ ಟ್ಯಾಟೂ ಮಳಿಗೆಯಲ್ಲಿ ಕಳೆದ 2 ವರ್ಷಗಳಿಂದಲೂ ನಡೆಯುತ್ತಿದೆ.

ಇಲ್ಲಿಗೆ ಭೇಟಿ ನೀಡುವ ಬಹುಪಾಲು ವಿದೇಶಿಯರು ತಾವೇ ಕೇಳಿ ಕನ್ನಡದ ಪದಗಳ ಟ್ಯಾಟೂಗಳನ್ನು ಮೈಮೇಲೆ ಹಾಕಿಸಿಕೊಂಡು ಹೋಗುತ್ತಿದ್ದಾರೆ.‌ ಜತೆಗೆ, ಕನ್ನಡ ಭಾಷೆ ಸುಲಭವಾಗಿದೆ, ಅಪ್ಯಾಯಮಾನವಾಗಿದೆ. ಈ ಕನ್ನಡದ ಪದಗಳನ್ನು ಮರೆಯಬಾರದು ಎಂದು ಟ್ಯಾಟೂ ಹಾಕಿಸಿಕೊಳ್ಳುತ್ತೇವೆ ಎಂದು ಬರುವ ಬಹುತೇಕರು ಹೇಳುತ್ತಾರೆ.

ನಮಸ್ತೆ, ಅಣ್ಣ, ಆಶೀರ್ವದಿಸು, ನನ್ನ ಸ್ವೀಟ್‌ ಎಮಿ... ಹೀಗೆ ಹತ್ತು ಹಲವು ಕನ್ನಡ ಪದಗಳ ಟ್ಯಾಟೂಗಳನ್ನು ವಿದೇಶಿಯರ ಕೈ, ತೋಳುಗಳ ಮೇಲೆ ಸುನಿಲ್ ಬರೆದಿದ್ದಾರೆ.

ಇವರೇ ಕನ್ನಡದ ಅಕ್ಷರ ವಿನ್ಯಾಸ ಹಾಗೂ ಪದಗಳನ್ನು ಜತೆಗೆ ತಂದು ಇದೇ ಬಗೆಯಲ್ಲಿ ಟ್ಯಾಟೂ ಬೇಕು ಎಂದು ಹೇಳುವುದು ಮತ್ತೂ ವಿಶೇಷ ಎನಿಸಿದೆ.

‘ನಮಗೆ ಮೈಸೂರು, ಕನ್ನಡದ ಮಣ್ಣು ಇಷ್ಟವಾಗಿದೆ. ಇಲ್ಲಿನ ಜನರ ನಡವಳಿಕೆಗಳು, ಸೌಜನ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಅಪರೂಪದ ಸ್ಥಳದ ನೆನಪಿಗಾಗಿ ನಾವು ಕಲಿತ ಪದಗಳನ್ನು ಟ್ಯಾಟೂ ಹಾಕಿಸಿಕೊಳ್ಳುತ್ತೇವೆ’ ಎಂದು ವಿದೇಶಿಯರು ಹೇಳುತ್ತಾರೆ ಎಂದು ಟ್ಯಾಟೊ ಹಾಕುವ ಕಲಾವಿದ ಸಿ.ಕೆ.ಸುನಿಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳೆದ 4 ವರ್ಷಗಳಿಂದ ಪ್ರತಿ ವರ್ಷ ಇಲ್ಲಿಗೆ ಬರುತ್ತಿರುವ ಅಮೆರಿಕದ ಜಾಯ್ ಬೇನ್ ಪ್ರತಿ ಬಾರಿ ಬಂದಾಗಲೂ ಇಲ್ಲಿ ಒಂದೊಂದು ಕನ್ನಡದ ಶಬ್ದ ಕಲಿತು ಅದನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡು ಹೋಗುತ್ತಾರೆ. ಈಚೆಗೆ ಇಲ್ಲಿಗೆ ಬಂದಾಗ ಅವರು ತಮ್ಮ ಪತ್ನಿ ಹೆಸರಾದ ‘ಎಮಿ’ಯನ್ನು ‘ನನ್ನ ಸ್ವೀಟ್ ಎಮಿ’ ಎಂದು ಕನ್ನಡದ ಪದಗಳಲ್ಲಿ ಹಾಕಿಸಿಕೊಂಡು ಸಂಭ್ರಮಿಸಿದರು ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT