ಶುಕ್ರವಾರ, ಡಿಸೆಂಬರ್ 4, 2020
22 °C
ತ.ಸು.ಶಾಮರಾಯರ ‘ಕನ್ನಡ ನಾಟಕ’ ಕೃತಿ ಬಿಡುಗಡೆಗೊಳಿಸಿ ಹಂಸಲೇಖ ಮಾತು

ರಂಗಭೂಮಿ ಮೂಲಕ ಕನ್ನಡದ ವಿಜೃಂಭಣೆ: ಹಂಸಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಶಿಕ್ಷಣ ರಂಗದ ಮೂಲಕ ಕನ್ನಡ ಭಾಷೆ ಉಳಿಸಲು ಸಾಧ್ಯವಾಗುತ್ತಿಲ್ಲ. ಹಲವು ಅಡೆತಡೆಗಳು ಇವೆ. ಹೀಗಾಗಿ, ರಂಗಭೂಮಿ, ಜನಪದ ಮತ್ತು ಸಿನಿಮಾದ ಮೂಲಕವಾದರೂ ಕನ್ನಡ ಉಳಿಸಿ ಬೆಳೆಸಬೇಕಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

ರಂಗಾಯಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ರಂಗಾಯಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ.ಸು.ಶಾಮರಾಯರ ‘ಕನ್ನಡ ನಾಟಕ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತ.ಸು.ಶಾಮರಾಯರು ರಚಿಸಿದ ಮಹಾಪ್ರಬಂಧವು ‘ಕನ್ನಡ ನಾಟಕ’ ಕೃತಿಯಾಗಿ ಮತ್ತೆ ನಾಡಿನ ಜನರನ್ನು ತಲುಪುತ್ತಿರುವುದು ಸಂತೋಷದ ವಿಚಾರ. ಇದೊಂದು ಪುನರ್ ದರ್ಶನ ಎಂದೇ ಹೇಳಬಹುದು. ಇದೇ ರೀತಿ ಎಷ್ಟೋ ವಿಚಾರಗಳಲ್ಲಿ, ಎಲ್ಲಾ ಕ್ಷೇತ್ರವನ್ನು ಪುನರ್ ದರ್ಶನ ಮಾಡಬೇಕಿದೆ ಎಂದರು.

‘ಕನ್ನಡಕ್ಕೆ ದಿಟ್ಟವಾದ ಸ್ಥಾನಮಾನ ನೀಡಿ, ಇದು ಮಾತೃಭಾಷೆ, ಶಿಕ್ಷಣಕ್ಕೆ ಅಗತ್ಯ ಎಂದು ಗಟ್ಟಿ ದನಿಯಲ್ಲಿ ಹೇಳುವ ಸರ್ಕಾರ ಹಾಗೂ ನಾಯಕರು ಬರಲಿಲ್ಲ. ನಾಡಿನ ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಇಂಗ್ಲಿಷ್ ಬೇಕು ಎನ್ನುತ್ತಿದ್ದಾರೆ. ಜೊತೆಗೆ ಹಿಂದಿ ಕೂಡ ಬೇಕು ಎನ್ನುತ್ತಿದ್ದಾರೆ. ಹೀಗಾಗಿ, ಶಿಕ್ಷಣ ಕ್ಷೇತ್ರದ ಮೂಲಕ ಕನ್ನಡ ಉಳಿಸಿಕೊಳ್ಳುವುದು ಕಷ್ಟ. ನಾಟಕದ ಮೂಲಕ ರಾಜ್ಯದಲ್ಲಿ ಮತ್ತೆ ಕನ್ನಡ ವಿಜೃಂಭಿಸಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ರಂಗಭೂಮಿ ಮೂಲಕ ಕನ್ನಡವನ್ನು ಉಳಿಸಬಹುದು ಎಂಬುದನ್ನು ಬಿ.ವಿ.ಕಾರಂತರು ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ರಂಗಾಯಣ ಸ್ಥಾಪಿಸಿ ರಂಗಭೂಮಿ ಮತ್ತು ಕನ್ನಡವನ್ನು ಪ್ರಚಾರ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

‘ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗ ರೂಪಕ್ಕೆ ಅಳವಡಿಸುವ ಪ್ರಯತ್ನವನ್ನು ರಂಗಾಯಣ ಮಾಡುತ್ತಿದೆ. ಇದನ್ನು ನೋಡಲು ನಾನು ಕೂಡ ಕಾತರದಿಂದ ಕಾಯುತ್ತಿದ್ದೇನೆ’ ಎಂದು ತಿಳಿಸಿದರು.

ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಕೃತಿ ಕುರಿತು ಮಾತನಾಡಿದರು. ‘ಈ ಕೃತಿಯೇ ಒಂದು ಪುನರ್‌ ದರ್ಶನ ಮಾಡಿಸುವಂಥದ್ದು’ ಎಂದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್‌, ತಳುಕಿನ ವೆಂಕಣ್ಣ ಗ್ರಂಥಮಾಲೆ ಪ್ರಕಾಶಕ ಟಿ.ಎಸ್.ಛಾಯಾಪತಿ, ಶ್ರೀರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡದ ಬಿ.ಎಂ.ರಾಮಚಂದ್ರ, ಲತಾ ಹಂಸಲೇಖ ಇದ್ದರು.

‘ಐದನಿ’ ಸಂಗೀತ ಶಾಸ್ತ್ರ ಪ್ರಯೋಗ

ಜನಪದವನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶ ಹೊಂದಿದ್ದು, ‘ಐದನಿ’ ಸಂಗೀತ ಶಾಸ್ತ್ರ ಪ್ರಯೋಗದಲ್ಲಿ ತೊಡಗಿದ್ದೇನೆ. ಪಂಚರಾಗಗಳ ಮಿಶ್ರಣ ಈ ಐದನಿ ರಾಗದಲ್ಲಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

‘ಜನಪದ ಕಲಾವಿದರನ್ನು ತಯಾರು ಮಾಡುವ ಅಗತ್ಯವಿದೆ. ಜನಪದ ಕಾಪಾಡಿದರೆ ಕನ್ನಡ ಚಿರಾಯು ಆಗಲಿದೆ’ ಎಂದರು.

ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್‌ ಅವರ ನಿವಾಸಕ್ಕೆ ಭೇಟಿ ನೀಡಿ ಈ ವಿಚಾರವಾಗಿ ಅವರು ಸಮಾಲೋಚನೆ ನಡೆಸಿದರು.

‘ಮೈಸೂರಿನಲ್ಲಿ ಜನಪದಕ್ಕಾಗಿ ದುಡಿದ ಬಹಳಷ್ಟು ಮಂದಿ ಇದ್ದಾರೆ. ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಐದನಿ ಸಂಗೀತ ಶಾಸ್ತ್ರಕ್ಕೆ ಹಲವು ಪಠ್ಯಗಳು ಬೇಕಿದೆ. ಹೀಗಾಗಿ, ಜನಪದ ತಜ್ಞರನ್ನು ಭೇಟಿಯಾಗುತ್ತಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.