ಗುರುವಾರ , ಮಾರ್ಚ್ 23, 2023
28 °C

ಶ್ರಮದಾನ: ಕಪಿಲಾ ನದಿ ಪರಿಸರ ಸ್ವಚ್ಛ, ಕಲುಷಿತ ನೀರು ನದಿ ಸೇರದಂತೆ ಪೈಪ್‌ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸರಗೂರು: ಪಟ್ಟಣದಲ್ಲಿ ಪಶ್ವಿಮ ಮುಖವಾಗಿ ಹರಿಯುವ ಕಪಿಲಾ ನದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಯಂ ಪ್ರೇರಿತವಾಗಿ ಪಟ್ಟಣ ಪಂಚಾಯಿತಿ ಸದಸ್ಯರು, ಬಜರಂಗದಳದ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹಾಗೂ ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ.ವೆಂಕಟೇಶ್ ಮುಂತಾದವರು ಕಿತ್ತು ಹಾಕಿ ಸ್ವಚ್ಛಗೊಳಿಸಿದರು.

ನದಿಯ ಅಂಚಿನಲ್ಲಿ ಗಿಡಗಂಟಿಗಳು ಹೆಚ್ಚಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು, ನೀರು ತರಲು, ನದಿಗೆ ಸ್ನಾನಕ್ಕೆಂದು ಬಂದರೆ ಗಿಡಗಳು ಹೆಚ್ಚು ಬೆಳೆದಿದ್ದರಿಂದ ನದಿಗೆ ಇಳಿಯಲು ತೊಂದರೆಯಾಗುವುದನ್ನು ಕಂಡ ಸಂಘ ಸಂಸ್ಥೆಗಳು ಸ್ವಚ್ಛತೆಗೆ ಮುಂದಾಗಿದ್ದವು. ಇದಕ್ಕೆ ಕೈಜೋಡಿಸಿದ ಪಟ್ಟಣ ಪಂಚಾಯಿತಿ ಸದಸ್ಯರು,  ಸುಮಾರು 40-50 ಜನ ಸ್ವಯಂ ಪ್ರೇರಣೆಯಿಂದ ಗಿಡಗಂಟಿಗಳ ತೆರವು ಮಾಡಿದರು.

ಬಟ್ಟೆ ಒಗೆಯುವ ಸ್ಥಳದಲ್ಲಿ ಸಮತಟ್ಟು ಮಾಡಿ ಕಲ್ಲುಗಳನ್ನು ಹಾಸಿ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಈ ಕಾರ್ಯಕ್ಕೆ ಕಾರ್ಯಕರ್ತರು ಹಾಗೂ ಸದಸ್ಯರು ಯಾವುದೇ ಅನುದಾನ  ಬಳಕೆ ಮಾಡದೆ ಸ್ವಂತ ಖರ್ಚಿನಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಇನ್ನಾದರೂ ಪಟ್ಟಣ ಪಂಚಾಯಿತಿ ವತಿಯಿಂದ ಮತ್ತು ನೀರಾವರಿ ಇಲಾಖೆ, ಸಂಬಂಧಪಟ್ಟ ಇಲಾಖೆಯವರು ನದಿಯ ದಡದ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು, ಕಪಿಲಾ ನದಿಗೆ ಸೋಪಾನಕಟ್ಟೆ ನಿರ್ಮಿಸಲು ಪಟ್ಟಣ ಪಂಚಾಯಿತಿಯಲ್ಲಿ ಹಣವನ್ನು ಮೀಸಲಿಟ್ಟು ನದಿ ಪಾತ್ರವನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾರ್ಡ್‌ಗಳಿಂದ ಹರಿದು ಬರುತ್ತಿರುವ ಕೊಳಚೆ ನೀರು ನದಿಗೆ ಸೇರುವುದನ್ನು ತಡೆಯಲು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಎರಡು ದೊಡ್ಡ ಪೈಪ್‌ಗಳನ್ನು ತಂದು ಹಾಕಿ ನೀರು ಕಲುಷಿತವಾಗದಂತೆ ಮಾಡಿದರು.

‘ಕಪಿಲಾ ನದಿ ದಡದಲ್ಲಿ ಚೋಳರಕಾಲದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದ್ದು ಇದರ ಅಭಿವೃದ್ಧಿಯಾಗಬೇಕಿದೆ. ಇದಕ್ಕೆ ಶಾಸಕ ಸಿ.ಅನಿಲ್‌ಕುಮಾರ್ ಅವರ ಅನುದಾನ ನೀಡಬೇಕು’ ಎಂದು ಕೋರಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯರು, ಬಜರಂಗದ ದಳದ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ತಿನ ಸದಸ್ಯರು, ಮುಖಂಡರಾದ ಎಸ್.ವಿ.ರಾಜಣ್ಣ ಮುಂತಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು