ಮಂಗಳವಾರ, ನವೆಂಬರ್ 30, 2021
21 °C
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಅಭಿಮತ

ಸತ್ತಮೇಲೂ ಬದುಕಬಲ್ಲ ಕಾರ್ನಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾರ್ವಕಾಲಿಕ ಮಹತ್ವವುಳ್ಳ ಸಾಹಿತ್ಯವನ್ನು ನೀಡಿರುವ ಗಿರೀಶ ಕಾರ್ನಾಡರು ಸತ್ತ ಮೇಲೂ ಬದುಕಬಲ್ಲ ಗುಣವನ್ನು ಹೊಂದಿದ್ದಾರೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌ ಅಭಿಪ್ರಾಯಪಟ್ಟರು.

ರಂಗಾಯಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಿರೀಶ ಕಾರ್ನಾಡ ಹಾಗೂ ರಂಗನಾಯಕಮ್ಮ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ನಾಡರ ಶಿಸ್ತು ಹಾಗೂ ಅಳವಡಿಕೆಯ ಗುಣ ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಮಾದರಿಯಾದುದು. ಹಿಂದಿನ ಕಾಲದ ಅನೇಕ ಸಮಸ್ಯೆಗಳು ಇಂದಿಗೂ ಅನ್ವಯಿಸುತ್ತಿವೆ ಎಂಬುದನ್ನು ಅವರು ತಮ್ಮ ಬರಹಗಳಲ್ಲಿ ಬರೆದಿದ್ದಾರೆ. ಪ್ರಾರ್ಥನೆ ಈಗ ರಾಜಕೀಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅವರ ನೇರ ಸ್ವಭಾವ ಅವರನ್ನು ಎತ್ತರಕ್ಕೆ ಕೊಂಡೊಯ್ಯಿತು ಎಂದು ಅವರು ಅಭಿಪ್ರಾಯಪಟ್ಟರು.

ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ಕಾರ್ನಾಡರು ಆರ್‌ಎಸ್‌ಎಸ್‌, ಹಿಂದೂ ವಿರೋಧಿ ಎಂಬ ಆರೋಪವನ್ನು ಕೆಲವರು ಮಾಡುತ್ತಾರೆ. ಅವರು ಯಾರ ವಿರೋಧಿಯೂ ಆಗಿರಲಿಲ್ಲ. ಬದಲಿಗೆ, ಅವರು ಮಾನವಪರ ಆಶಯವನ್ನು ಹೊಂದಿದ್ದರು ಎಂದು ವಿವರಿಸಿದರು.

ಕಾರ್ನಾಡರ ತಾಯಿ ಮರುವಿವಾಹವಾದವರು. ಅದಕ್ಕೆ ಅಂದಿನ ಕಾಲದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿರುತ್ತದೆ. ಇದನ್ನು ಕಾರ್ನಾಡರೇ ಸ್ವತಃ ಉದಾಹರಿಸಿ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇಂತಹ ವಿಚಾರಗಳು ಎದುರಾದಾಗ ಕಾರ್ನಾಡರು ಟೀಕಿಸುತ್ತಿದ್ದರು. ಆದರೆ, ಯಾರನ್ನೂ ನೋಯಿಸಬೇಕೆಂದು ಟೀಕಿಸಿಲ್ಲ ಎಂದು ವಿಶ್ಲೇಷಿಸಿದರು.

ರಂಗಕರ್ಮಿ ಎಚ್‌.ಜನಾರ್ದನ ಮಾತನಾಡಿ, ‘ಕಾರ್ನಾಡರ ‘ತಲೆದಂಡ’ ಹಾಗೂ ‘ಟಿಪ್ಪುವಿನ ಕನಸುಗಳು’ ಸೈದ್ಧಾಂತಿಕ ನೆಲೆಗಟ್ಟಿನ ಶ್ರೇಷ್ಠ ಕೃತಿಗಳು. ಟಿಪ್ಪು ಕುರಿತು ನಾಟಕ ರಚಿಸಿದಾಗ, ಟಿಪ್ಪುವನ್ನು ಕೆಲವರು ದೇಶದ್ರೋಹಿ ಎಂದರು. ಟಿಪ್ಪುವನ್ನು ಹೀಗೆ ಕರೆಯುವುದಾದರೆ ನಾನೂ ದೇಶದ್ರೋಹಿಯೇ ಎಂದು ಕಾರ್ನಾಡರು ಕಿಡಿಕಾರಿದ್ದರು. ಇಂತಹ ನೇರ ನುಡಿಯ ವ್ಯಕ್ತಿ ನಮಗೆ ಆದರ್ಶಪ್ರಾಯರು’ ಎಂದು ಅಭಿ‍ಪ್ರಾಯಪಟ್ಟರು.

ಹಿರಿಯ ರಂಗಕರ್ಮಿ ಇಂದಿರಮ್ಮ ಅವರು ರಂಗನಾಯಕಮ್ಮ ಅವರನ್ನು ಕುರಿತು ಮಾತನಾಡಿ, ‘ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲಿ ಡಾ.ರಾಜಕುಮಾರರ ಸಹೋದರಿ ಶಾರದಮ್ಮ, ನಟಿಯರಾದ ಮಂಜುಳಾ, ರಂಗನಾಯಕಮ್ಮ ಹಾಗೂ ನಾನು ನಾಲ್ವರೇ ಮಹಿಳೆಯರು. ರಂಗಭೂಮಿಯ ಬಗ್ಗೆ ಗೌರವ ಮೂಡಲು ರಂಗನಾಯಕಮ್ಮ ಅವರ ಪಾತ್ರ ಹಿರಿದು’ ಎಂದು ಸ್ಮರಿಸಿದರು.

ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಪತ್ರಕರ್ತ ಗಣೇಶ ಅಮೀನಗಡ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು