ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್ ಹೊಸಮನಿ ಹೇಳಿಕೆ

ಕರ್ನಾಟಕ ಇ–ಗ್ರಂಥಾಲಯಕ್ಕೆ ವಿಶ್ವದಲ್ಲೇ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಜ್ಯದ ಸಾರ್ವಜನಿಕ ಇ–ಗ್ರಂಥಾಲಯವು ವಿಶ್ವದಲ್ಲೇ ಅತಿ ಹೆಚ್ಚು ಓದುಗರುಳ್ಳ ಡಿಜಿಟಲ್ ಗ್ರಂಥಾಲಯವೆಂಬ ಹೆಗ್ಗಳಿಕೆ ಪಡೆದಿದೆ. ಅಮೆರಿಕದ ಡಿಜಿಟಲ್ ಲೈಬ್ರರಿ ಮತ್ತು ಭಾರತದ ನ್ಯಾಷನಲ್ ಡಿಜಿಟಲ್ ಲೈಬ್ರರಿಗಳು ನಂತರದ ಸ್ಥಾನದಲ್ಲಿವೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್ ಹೊಸಮನಿ ತಿಳಿಸಿದರು.

ಎಸ್.ಎನ್.ಲಕ್ಷ್ಮೀ ನಾರಾಯಣ ಸಂಸ್ಮರಣ ಸಮಿತಿಯು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಸ್.ಟಿ.ರಾಮಚಂದ್ರ ಅವರ ಸಂಪಾದನೆಯ ‘ಗ್ರಂಥಲಕ್ಷ್ಮೀ‘ ಮತ್ತು ‘ಡೈನಾಮಿಕ್ ಆಂಡ್ ಲೈಬ್ರರಿ ಆ್ಯಂಡ್ ಇನ್‌ಫರಮೇಷನ್‌ ಸೈನ್ಸ್’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಿಂದಿನ ವರ್ಷ ರಾಜ್ಯದ 372 ಸ್ಥಳಗಳಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಯಿತು. ಆರಂಭದ ವರ್ಷದಲ್ಲೇ 92 ಲಕ್ಷ ಓದುಗರು ನೋಂದಾಯಿಸಿಕೊಂಡು 16 ಲಕ್ಷ ಇ-ಕಂಟೆಂಟ್ ಅನ್ನು ಓದಿದ್ದಾರೆ. 55 ಕೋಟಿಗೂ ಹೆಚ್ಚು ಜನ ಡಿಜಿಟಲ್ ಗ್ರಂಥಾಲಯವನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ’ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸುಲಭವಾಗಿ ಸಿಗುವ ಜ್ಞಾನವನ್ನು ಸತ್ಯವೇ ಎಂದು ಪರಾಮರ್ಶೆ ಮಾಡಬೇಕಿದೆ’ ಎಂದು ತಿಳಿಸಿದರು.

ಕುಳಿತ ಜಾಗದಲ್ಲೇ ಸಿಗುವ ಈ ಜ್ಞಾನವನ್ನು ಪರಾಮರ್ಶಿಸದೇ ಹೋದರೆ ಸತ್ಯದಿಂದ ದೂರ ಉಳಿಯುವ ಅಪಾಯವೇ ಹೆಚ್ಚು ಎಂದು ಅವರು ಎಚ್ಚರಿಕೆ ನೀಡಿದರು.

ಮಕ್ಕಳನ್ನು ಗ್ರಂಥಾಲಯಕ್ಕೆ ಕಳುಹಿಸಿ ಓದಿಸುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಒಂದು ವೇಳೆ ಒಂದು ತಲೆಮಾರು ಗ್ರಂಥಾಲಯಕ್ಕೆ ಹೋಗದಿದ್ದರೆ ಮುಂದಿನ 3 ತಲೆಮಾರು ಕತ್ತಲೆಯಲ್ಲಿ ಇರುತ್ತದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮನಾಥಸ್ವಾಮೀಜಿ, ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಾಮಶೇಷ, ಕಾಂಗ್ರೆಸ್ ಮುಖಂಡ ವಾಸು, ಗ್ರಂಥ ಸಂಪಾದಕರು ಹಾಗೂ ಕೆನರಾ ಬ್ಯಾಂಕಿನ ವಿಶ್ರಾಂತ ಮಹಾ ಪ್ರಬಂಧಕ ಡಾ.ಎಸ್.ಟಿ.ರಾಮಚಂದ್ರ, ವಿಶ್ರಾಂತ ಕುಲಪತಿ ಪ್ರೊ.ಎಂ.ಮಾದಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್ ಹೊಸಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು