ಶುಕ್ರವಾರ, ಫೆಬ್ರವರಿ 21, 2020
24 °C
2.04 ಲಕ್ಷ ರೈತರ ನೋಂದಣಿ, ಎಲ್ಲರೂ ಸೌಲಭ್ಯ ಪಡೆಯಲು ಸಲಹೆ

‘ಕಿಸಾನ್ ಕ್ರೆಡಿಟ್‌ ಕಾರ್ಡ್‌’ ಪಡೆಯಲು ಫೆ. 24 ಕೊನೆಯ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ‘ಕಿಸಾನ್ ಕ್ರೆಡಿಟ್ ಕಾರ್ಡ್’ ಪಡೆಯಲು ಫೆ. 24 ಕೊನೆಯ ದಿನ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಪೂರ್ಣಿಮಾ ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ 2.04 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದಿರುವ ರೈತರು ತಮ್ಮ ಸೇವಾ ವಲಯದ ಬ್ಯಾಂಕಿನಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಪಡೆಯಬಹುದು ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.‌

ದೇಶದಲ್ಲಿ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. 6.76 ಕೋಟಿ ರೈತರು ‘ಕಿಸಾನ್ ಕ್ರೆಡಿಟ್ ಕಾರ್ಡ್‌’ನಲ್ಲಿ ಬೆಳೆ ಸಾಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಏನಿದು ‘ಕಿಸಾನ್ ಕ್ರೆಡಿಟ್ ಕಾರ್ಡ್’?

ರೈತರಿಗೆ ಬೆಳೆ ಸಾಲ ವಿತರಿಸಿದಾಗ ಮಂಜೂರಾದ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ತಕ್ಷಣದಿಂದಲೇ ಇದಕ್ಕೆ ಬಡ್ಡಿ ವಿಧಿಸಲಾಗುತ್ತಿತ್ತು. ಒಂದು ವೇಳೆ ಮರುಪಾವತಿ ಮಾಡಿ, ಮರಳಿ ಸಾಲ ಪಡೆಯಬೇಕಾದರೆ ಹೊಸದಾಗಿ ಆರ್‌ಟಿಸಿ ನೀಡಿ, ಮಂಜೂರಾತಿ ಪಡೆಯಬೇಕಿತ್ತು.

ಆದರೆ, ಈಗ ‘ಕಿಸಾನ್ ಕ್ರೆಡಿಟ್ ಕಾರ್ಡ್‌’ ಮೂಲಕ ಬೆಳೆ ಸಾಲ ಪಡೆದರೆ, ರೈತರು ತಮಗೆ ಅಗತ್ಯ ಇದ್ದಷ್ಟು ಸಾಲದ  ಹಣವನ್ನು ‘ಕ್ರೆಡಿಟ್ ಕಾರ್ಡ್’ ಮೂಲಕ ಎಟಿಎಂನಿಂದ ಪಡೆಯಬಹುದು. ಅಷ್ಟು ಹಣಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಸ್ವಲ್ಪ ದಿನದ ಮಂಜೂರಾತಿ ಹಣದಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಪಡೆಯಬಹುದಿತ್ತು. ಮರುಪಾವತಿ ಮಾಡಿದ ಹಣವನ್ನೂ ಯಾವುದೇ ದಾಖಲಾತಿ ಸಲ್ಲಿಸದೇ ನೇರವಾಗಿ ಕ್ರೆಡಿಟ್ ಕಾರ್ಡ್‌ ಮೂಲಕವೇ ಪಡೆಯಬಹುದಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದರು.

‌ಹಣ ಸಿಕ್ಕಾಗ ಸಾಲದ ಹಣವನ್ನು ಪಾವತಿಸಬಹುದು. ಮರಳಿ ಮತ್ತೆ ಪಡೆಯಬಹುದು. ಯಾವಾಗ ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂನಿಂದ ಹಣ ಪಡೆಯುತ್ತೇವೆಯೋ ಅಲ್ಲಿಂದ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ರೈತರು ತಮ್ಮ ಕೃಷಿ ಅಗತ್ಯಕ್ಕೆ ಅನುಗುಣವಾಗಿ ಇದನ್ನು ಬಳಕೆ ಮಾಡಬಹುದಾಗಿದೆ ಎಂದರು.

ಒಮ್ಮೆ ದಾಖಲಾತಿಗಳನ್ನು ಸಲ್ಲಿಸಿ ಮಂಜೂರಾತಿ ಪಡೆದರೆ, 5 ವರ್ಷಗಳವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಸಾಲದ ಮರುಪಾವತಿ ಪ್ರವೃತ್ತಿ ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)